ವರದಿಯನ್ನು ಸಂಪೂರ್ಣವಾಗಿ ಓದದೆ ಅವೈಜ್ಞಾನಿಕ ಎನ್ನುವುದು ಆತುರದ ನಿರ್ಧಾರ: ದಿನೇಶ್ ಗುಂಡೂರಾವ್

1 year ago

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಗೆ ನನ್ನ ಸಂಪೂರ್ಣ ಅನುಮೋದನೆಯಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಚಿವ ಸಂಪುಟದಲ್ಲಿ ಈ ಸಮೀಕ್ಷಾ ವರದಿ ಮಂಡನೆಯಾಗಲಿದೆ. ಸಚಿವ ಸಂಪುಟವು ಈ ಸಮೀಕ್ಷಾ ವರದಿಯನ್ನು ಅಂಗೀಕರಿಸಿದ ಬಳಿಕ ವರದಿಯ ನ್ಯೂನ್ಯತೆಗಳು ಹಾಗೂ ಪರಿಣಾಮಕಾರಿ ಅನುಷ್ಠಾನದ ಕುರಿತು ಮುಕ್ತ, ನ್ಯಾಯಯುತವಾದ ಚರ್ಚೆಗೆ ನಾಂದಿ ಹಾಡಬಹುದು ಎಂದಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಆಧಾರದಲ್ಲಿ ಸಲ್ಲಿಸಿರುವ ಸಮೀಕ್ಷಾ ವರದಿಯನ್ನು ಪರಿಶೀಲಿಸಿದ್ದೇನೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಬದುಕಿನ ಮೇಲೆ ನಮಗೆ ನಂಬಿಕೆಯಿದ್ದರೆ ಹಾಗೂ ಆ ತತ್ವಕ್ಕೆ ನಾವು ಬದ್ಧರಾಗಿದ್ದರೆ, ಈ ಸಮೀಕ್ಷಾ ವರದಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಜೊತೆಗೆ ಈ ವರದಿಯು ತಾರ್ಕಿಕ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ. ಆಯೋಗ ಶಿಫಾರಸ್ಸು ಮಾಡಿರುವ ಕೆಲ ಅಂಶಗಳನ್ನು ನಾನು ಗಮನಿಸಿದ್ದೇನೆ. ಈ ಅಂಶಗಳಿಂದ ಯಾವುದೇ ಸಮುದಾಯ ಅಸಮಾಧಾನಗೊಳ್ಳುವ ಅಗತ್ಯವಿಲ್ಲ. ಈ ಅಂಶಗಳು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ.

ಕೆಲವರು ವರದಿಯನ್ನು ಓದದೆ ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನ ಮಾಡುತ್ತಿದ್ದಾರೆ. ಹಾಗಾಗಿ ನಾನು ಜನರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ವರದಿಯ ಕುರಿತು ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಬೇಡ. ಅನಗತ್ಯ ಗೊಂದಲಗಳಿಗೆ ಆಸ್ಪದ ಕೊಡುವುದು ಬೇಡ. ಮೊದಲು ವರದಿಯನ್ನು ಓದೋಣ. ನಂತರ ಚರ್ಚೆಗೆ ನಮ್ಮ ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳೋಣ. ವರದಿಯನ್ನು ಸಂಪೂರ್ಣವಾಗಿ ಓದದೆ ಅವೈಜ್ಞಾನಿಕ ಎನ್ನುವುದು ಆತುರದ ನಿರ್ಧಾರವಾಗುತ್ತದೆ ಎಂದಿದ್ದಾರೆ.

Leave a Reply