ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಎಸ್ ಸಿ ಪಿ, ಟಿ ಎಸ್ ಪಿ ಕಾನೂನು ಜಾರಿಗೆ ತಂದಿದೆ. ಇದರ ಮೂಲಕ ಈ ಸಮುದಾಯದ ಜನಸಂಖ್ಯೆಗನುಗುಣವಾಗಿ ಅನುದಾನ ಬಳಕೆ ಮಾಡುತ್ತಿದ್ದೇವೆ. ಇದನ್ನು ಮರೆಮಾಚಲು ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಜನ್ಮದಿನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರು ವಾಸ್ತವ ಮರೆಮಾಚಿ ಪರಿಶಿಷ್ಟರ ಅಭಿವೃದ್ಧಿಗೆ ಹಣವನ್ನು ಬೇರೆ ರೀತಿ ವರ್ಗಾವಣೆ ಮಾಡಲಾಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಇಡೀ ದೇಶದಲ್ಲಿಯೇ ಆಂಧ್ರಪ್ರದೇಶ ಹೊರತುಪಡಿಸಿದರೆ ಕರ್ನಾಟಕ ಮಾತ್ರ ಇಂತಹ ಕಾಯಿದೆಯನ್ನು ಜಾರಿಗೆ ತಂದಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಈ ಸಮುದಾಯಗಳ ಬಗ್ಗೆ ನಿಜವಾದ ಬದ್ಧತೆ ಇದ್ದರೆ ಕೇಂದ್ರದಲ್ಲಿ ಇಂತಹ ಕಾಯಿದೆ ಜಾರಿಗೆ ತರಲಿ ಎಂದು ಆಗ್ರಹಿಸಿದರು.
ಇಂತಹ ಕಾಯ್ದೆ ಜಾರಿಗೆ ಬಂದರೆ ಮೊಟ್ಟಮೊದಲಿಗೆ ತಾವೇ ಪ್ರಧಾನಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಹಿಂದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಕಡಿಮೆ ಹಣ ನಿಗದಿ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಕಾಯ್ದೆ ತಂದ ಪರಿಣಾಮ ಈ ವರ್ಷ 32 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಬಡ್ತಿ ಮೀಸಲಾತಿಗೆ ಇಡೀ ದೇಶದಲ್ಲೇ ನಾವು ಕಾಯ್ದೆ ರೂಪಿಸಿದ್ದೇವೆ. ಬಿಜೆಪಿಯವರು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದರು.
ಮಹಿಳೆಯರಿಗೆ, ಪರಿಶಿಷ್ಟರಿಗೆ, ಶೋಷಿತರಿಗೆ ಸಮಾನತೆ ನೀಡುವ ಆಶಯವನ್ನು ಸಂವಿಧಾನ ಹೊಂದಿದೆ. ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಉದ್ದೇಶ ಕೂಡ ಸಮಾನತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಜನರಿಗೆ ಖರೀದಿಸುವ ಶಕ್ತಿ ಇಲ್ಲದೇ ಹೋದರೆ ಆರ್ಥಿಕ ಚಟುವಟಿಕೆಗಳು ಕುಸಿಯುತ್ತದೆ ಎಂದರು.
ಜಾತಿ ವ್ಯವಸ್ಥೆಗೆ ಚಲನಶೀಲತೆ ಇಲ್ಲ, ವಿದ್ಯಾವಂತರೇ ಜಾತಿ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಜ್ಞಾನದಿಂದ ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಬಳಕೆ ಮಾಡಿದ್ದರು. ಅಂಬೇಡ್ಕರ್ ಅವರ ಮೂಲಮಂತ್ರ ಹಾಗೂ ಆಶಯಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಸಂಘಟಿತರಾಗಬೇಕು. ಅಂಬೇಡ್ಕರ್ ಇಲ್ಲದಿದ್ದರೆ ಶೋಷಿತರಿಗೆ ನ್ಯಾಯ ಸಿಗುತ್ತಿರಲಿಲ್ಲ ಎಂದರು.
ಅವಕಾಶವಂಚಿತರಿಗಾಗಿ ನಾವೆಲ್ಲಾ ಹೋರಾಟ ಮಾಡಲು ಜೀವನ ಮುಡಿಪಾಗಿಡಬೇಕು. ತಮ್ಮ ಸರ್ಕಾರ ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಗುತ್ತಿಗೆ ನೀಡಿ ಮೀಸಲಾತಿ ನೀಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದನ್ನು ಓಲೈಕೆಯ ರಾಜಕೀಯ ಎಂದು ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರ ಮಾಡಿದರು ಎಂದರು.
ಮುಸ್ಲಿಮರಿಗೆ ಆರ್ಥಿಕ, ಸಾಮಾಜಿಕ ಸಾಮರ್ಥ್ಯ ಇಲ್ಲ. ಯಾರಿಗೆ ಅವಕಾಶ ಸಿಗುವುದಿಲ್ಲವೋ ಅವರಿಗೆ ನ್ಯಾಯ ದೊರಕಿಸಲು ನಮ್ಮ ಸರ್ಕಾರ ಪ್ರಯತ್ನಿಸಬೇಕು ಎಂದರು. ನನ್ನನ್ನು ಮೇಲ್ವರ್ಗದ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ನಾನು ಯಾರ ವಿರೋಧಿಯೂ ಅಲ್ಲ. ಅಂಬೇಡ್ಕರ್ ಆಶಯದಂತೆ ಶೋಷಿತರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ಸಲುವಾಗಿ ಪ್ರತಿ ಹೋಬಳಿಗೊಂದು ವಸತಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಈ ವರ್ಷ 26 ವಸತಿ ಶಾಲೆಗಳನ್ನು ಮಂಜೂರು ಮಾಡಿದ್ದೇವೆ. ಬಡವರ ಮಕ್ಕಳು ಕೂಡ ವೈದ್ಯರು, ಇಂಜಿನಿಯರುಗಳಾಗಬೇಕು. ಇದೇ ನಮ್ಮ ಸರ್ಕಾರದ ಆಶಯ ಎಂದರು.
ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಿತ್ತು. ಈ ಹಿನ್ನೆಲೆಯಲ್ಲಿ 13 ಡಿಸಿಆರ್ಇ ಪೊಲೀಸ್ ಠಾಣೆಗಳನ್ನು ಇಂದು ಮಧ್ಯರಾತ್ರಿಯಿಂದಲೇ ಆರಂಭಿಸಲಾಗಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಸ್ಥಾಪಿಸಲಾಗುವುದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ವಸ್ತುಪ್ರದರ್ಶನ ಆರಂಭಿಸಿ ಎಲ್ಲಿಯೂ ಇಲ್ಲದಷ್ಟು ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ. ಎಂದರು.
ಇದಕ್ಕೂ ಮೊದಲು ಮುಖ್ಯಮಂತ್ರಿಯವರು ವಿಧಾನಸೌಧದ ಮುಂದಿನ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಹಿತಿ ಸೌಧದ ಸಮೀಪ ಅಂಬೇಡ್ಕರ್ ಸ್ಪೂರ್ತಿ ಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.




