ಬೆಳಗಾವಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರವನ್ನು ₹50 ರಷ್ಟು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ ₹2 ರಷ್ಟು ಹೆಚ್ಚಿಸಿರುವುದರಿಂದ ಸಾಮಾನ್ಯ ಜನರ ಜೀವನಮಟ್ಟಕ್ಕೆ ಭಾರೀ ಆರ್ಥಿಕ ಹೊರೆ ಆಗಿದೆ ಎಂದು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.
- ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?
- ಮೊದಲ ಸಿನಿಮಾ ಚಿತ್ರ ಬಿಡುಗಡೆ ನೆನಪು ಮಾಡಿಕೊಂಡ ಅನಿರುದ್ಧ
- ಮಲೆನಾಡ ಶೈಲಿಯ ಬಿಸಿಬಿಸಿ ‘ನೀರುಪ್ಪಿಟ್ಟು’ ಮಾಡುವ ವಿಧಾನ
- ದಸರಾ ಪುಸ್ತಕ ಮೇಳದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅರ್ಜಿ ಆಹ್ವಾನ
- ಎಸ್ಐಆರ್ ರಾಜಕೀಯಕ್ಕೆ ಬಳಕೆ ಸರಿಯಲ್ಲ: ಡಿ ಕೆ ಶಿವಕುಮಾರ್
ಬೆಳಗಾವಿಯಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದರು.
ಪ್ರತಿಭಟನೆಗೆ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಜಾರಕಿಹೊಳಿ, ಮೋದಿಯವರು ನೇತೃತ್ವ ವಹಿಸಿರುವ ಕೇಂದ್ರ ಸರ್ಕಾರ ನಿರಂತರವಾಗಿ ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇಂತಹ ನಿರ್ಧಾರಗಳು ಬಡ ಹಾಗೂ ಮಧ್ಯಮವರ್ಗದ ಕುಟುಂಬಗಳಿಗೆ ಆರ್ಥಿಕವಾಗಿ ಹೊರೆಯಾಗಿವೆ ಎಂದರು.
ಯುವಜನತೆ ಮಾತ್ರವಲ್ಲದೆ, ಎಲ್ಲಾ ರಾಜ್ಯದ ಜನರು ಕೂಡ ಇಂತಹ ನಿರ್ಧಾರಗಳ ವಿರುದ್ಧ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂಬುದು ಈ ಪ್ರತಿಭಟನೆಯ ಸಂದೇಶವಾಗಿದೆ. ಮುಂದಿನ ದಿನಗಳಲ್ಲಿ ಜನಪರ ಹೋರಾಟಗಳನ್ನು ಇನ್ನಷ್ಟು ಬಲವಾಗಿ ಮುಂದುವರಿಸಲಾಗುವುದು ಎಂದರು.
ಈ ಜನವಿರೋಧಿ ನೀತಿಗಳ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟನೆಯಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇಂಧನದ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪಂ, ಶಾಸಕ ಆಸೀಫ್ ಸೇಠ್, ಬೆಳಗಾವಿ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ಧಿಕ್ ಅಂಕಲಗಿ, ಬೆಳಗಾವಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸಾಗರ ದಿವಟಗಿ, ಜಿಲ್ಲೆಯ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.




