ಪರಿಶಿಷ್ಟ ಜಾತಿಯ ಬಾಂಧವರು ಶಾಂತಿಯಾಗಿ ಇರಬೇಕು: ಕೆ ಎಚ್ ಮುನಿಯಪ್ಪ

1 year ago

ಬೆಂಗಳೂರು: ಪರಿಶಿಷ್ಟ ಜಾತಿಯ ಬಾಂಧವರು ಶಾಂತಿಯಾಗಿ ಇರಬೇಕು. ಯಾವುದೇ ಪಕ್ಷದ ಅಥವಾ ಸಂಘ ಸಂಸ್ಥೆಗಳ ಮುಖಂಡರು ಸಹಕರಿಸಬೇಕು. ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಇದನ್ನು ಜಾರಿಗೊಳಿಸಲು ಬದ್ಧರಾಗಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.

ಬೆಂಗಳೂರು ನಗರದ ಲಿಡ್ಕರ್ ಸಭಾಂಗಣದಲ್ಲಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ನಡೆದ ಒಳಮೀಸಲಾತಿ ಚಳುವಳಿಯ ಮುಂದಿನ ಹೋರಾಟ ಕುರಿತು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ತಾವು ಯಾರೂ ಧೃತಿಗೆಡಬಾರದು. ನ್ಯಾ. ನಾಗಮೋಹನ್ ದಾಸ್ ರವರು ವೈಜ್ಞಾನಿಕವಾಗಿ ಸಂಪೂರ್ಣ ಪರಿಶೀಲಿಸಿ ತೀರ್ಮಾನ ಮಾಡಲಿದ್ದಾರೆ. ಕಾಲಮಿತಿ ಬಹಳ ದೂರವಿಲ್ಲ, ನಾವು ಅಂತಿಮ ಘಟ್ಟದಲ್ಲಿ ಇದ್ದೇವೆ. ಮೂವತ್ತು ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಗಲಿದೆ ಎಂದರು.

ನಮ್ಮ ಸಮುದಾಯ ಬಹಳಷ್ಟು ನೊಂದಿದೆ. ನಮ್ಮ ಸರ್ಕಾರ ಒಂದು ಐತಿಹಾಸಿಕ ತೀರ್ಮಾನ ಮಾಡಲಿದೆ. ನಮ್ಮ ಸಹೋದರರಾದ ಪರಮೇಶ್ವರ್, ಮಹಾದೇವಪ್ಪ, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ಅವರು ಒಮ್ಮತ ಅಭಿಪ್ರಾಯ ಸೂಚಿಸಿದ್ದಾರೆ. ಇದರಲ್ಲಿ ಯಾರ ಮೇಲೂ ಸಂಶಯಪಡಬಾರದು ಎಂದರು.

ನಮ್ಮ ಪರಿಶಿಷ್ಟ ಜಾತಿಯ ಸಚಿವರು ಒಕ್ಕೊರಲಿನಿಂದ ಇದರ ಪರವಾಗಿದ್ದು, ತಾವೂ ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ. ಸರ್ಕಾರ ಒಳಮೀಸಲಾತಿ ಅನುಷ್ಠಾನಕ್ಕೆ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶವಿರುವುದರಿಂದ ಸರಿಯಾದ ದತ್ತಾಂಶಗಳ ಸಂಗ್ರಹಣೆ ಮಾಡಿ ನಮ್ಮ ಮುಖ್ಯಮಂತ್ರಿ ಶೀಘ್ರವಾಗಿ ಅನುಷ್ಠಾನ ಮಾಡಲಿದ್ದಾರೆ ಎಂದರು.

ತೆಲಂಗಾಣ ರಾಜ್ಯ ಸರ್ಕಾರ ಈಗಾಗಲೇ ಅನುಷ್ಠಾನ ಮಾಡಿದ್ದು, ನಮ್ಮ ಸರ್ಕಾರದ ಎಲ್ಲಾ ಸಚಿವರು ಹಾಗೂ ಪರಿಶಿಷ್ಟ ಜಾತಿ ಶಾಸಕರು ಒಂದಾಗಿದ್ದು, ಅನುಷ್ಠಾನ ಮಾಡಲಿದೆ. ನ್ಯಾ. ನಾಗಮೋಹನ್ ದಾಸ್ ಅವರ ವಿಶೇಷವಾದ ಜ್ಞಾನ ಬಹಳಷ್ಟು ಇದೆ; ಅವರು ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲಿದ್ದಾರೆ ಎಂದರು.

ನ್ಯಾ. ನಾಗಮೋಹನ್ ದಾಸ್ ಅವರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಮುಖ್ಯ ಕಾರ್ಯದರ್ಶಿಗಳು ಒದಗಿಸಲಿದ್ದು, ಸರ್ಕಾರ ಇದರಲ್ಲಿ ಯಾವುದೇ ತಡವಿಲ್ಲದೆ ಅನುಷ್ಠಾನ ಮಾಡಲಿದೆ. ಮುಂದಿನ ಕ್ಯಾಬಿನೆಟ್ ಸಭೆಯ ನಂತರ ಮತ್ತೊಮ್ಮೆ ನಿಮ್ಮೊಂದಿಗೆ ಸಭೆಯನ್ನು ನಡೆಸಿ ತೀರ್ಮಾನಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಈ ಒಳಮೀಸಲಾತಿ ವಿಷಯವು ಬಹಳ ಸೂಕ್ಷ್ಮವಾಗಿದ್ದು, ಈ ವರದಿಯ ಮೇಲೆ ಕೋರ್ಟ್‌ಗೆ ಹೋಗಬಾರದು ಎಂಬ ಉದ್ದೇಶದಿಂದ ನಾವು ಸರಿಯಾದ ಮಾಹಿತಿ ಸಂಗ್ರಹಿಸಿ ನಂತರ ಅನುಷ್ಠಾನ ಮಾಡಬೇಕಾಗುತ್ತದೆ.

ಒಳಮೀಸಲಾತಿಯ ಅನುಷ್ಠಾನ ಅತಿ ಶೀಘ್ರದಲ್ಲಿ ಆಗಲಿದ್ದು, ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳದೆ ನಡೆಯಲಿದೆ. ನ್ಯಾ. ನಾಗಮೋಹನ್ ದಾಸ್ ರವರ ಮಧ್ಯಂತರ ವರದಿ ಸರ್ಕಾರಕ್ಕೆ ಒಪ್ಪಿಸಿದ ನಂತರ, ಇದರ ಕುರಿತು ನಾವು ನೀವು ಯಾವ ರೀತಿಯ ತೀರ್ಮಾನ ಮಾಡಬೇಕು ಎಂಬುದನ್ನು ಚರ್ಚೆ ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ಶಾಂತವಾಗಿರಿ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆಯುತ್ತಾರೆ. ಸಿದ್ದರಾಮಯ್ಯರವರ ವಿಶಿಷ್ಟ ಗುಣವೆಂದರೆ ಅವರು ನುಡಿದಂತೆ ನಡೆಯುವವರು. ನಮ್ಮ ಸರ್ಕಾರ ಅನುಷ್ಠಾನದಲ್ಲಿ ಬದ್ಧವಾಗಿದೆ. ತಾವು ಶಾಂತವಾಗಿರಿ ಎಂದರು.

ಈ ಸಂದರ್ಭದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ನಿವೃತ್ತ ಅಧಿಕಾರಿಗಳಾದ ತೇಗನೂರು ಗೋನಾಳ ಭೀಮಪ್ಪ, ಭೀಮಾಶಂಕರ, ಸಿದ್ದರಾಜು, ಕೃಷ್ಣಪ್ಪ, ಕೇಶವಮೂರ್ತಿ, ದೇವರಾಜು, ಪಕೀರಪ್ಪ, ಗುರುಮೂರ್ತಿ, ವೆಂಕಟೇಶ್, ಹಾಗೂ ವಿವಿಧ ಸಂಘಟನೆಗಳ ನಾಯಕರು ಹಾಜರಿದ್ದರು.

Leave a Reply