ಅಲ್ಪಸಂಖ್ಯಾತರಿಗೆ ಮೀಸಲಾತಿ ವಿರುದ್ಧ ಕಾನೂನು ಮತ್ತು ಬೀದಿ ಹೋರಾಟ: ವಿಜಯೇಂದ್ರ

1 year ago

ಬೆಂಗಳೂರು: ರಾಜ್ಯ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಸಮರ ಘೋಷಿಸಿರುವ ಬಿಜೆಪಿ ಇದರ ವಿರುದ್ಧ ಕಾನೂನು ಮತ್ತು ಬೀದಿ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ. 

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಏಕ್ಸ್ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರಿಗೆ ಮಾತ್ರ ಮೀಸಲಾತಿ ನೀಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ, ಇದನ್ನು ಸಮಗ್ರ ಕರ್ನಾಟಕದ ಸರ್ವ ಜನರ ಆಶಯ ಹಾಗೂ ಹಿತಾಸಕ್ತಿಗೆ ಪೂರಕವಾಗಿ ನಾವು ಉಭಯ ಸದನಗಳಲ್ಲೂ ಪ್ರಶ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವಕ್ಕೆ ಬಿಜೆಪಿ ಸದಾ ಬದ್ಧವಾಗಿದೆ. ನಮ್ಮ ಹೋರಾಟಕ್ಕೆ ಸರ್ಕಾರ ಮಣಿಯದೆ ಹೋದಲ್ಲಿ ಇದರ ವಿರುದ್ಧ ಜನಾಂದೋಲನ ರೂಪಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದ ಆಡಳಿತರೂಢ ಕಾಂಗ್ರೆಸ್‌‍ ಸರ್ಕಾರ ಮುಸ್ಲಿಮರಿಗೆ ಬಹುಪಾಲು ಇತರರಿಗೆ ಅಲ್ಪಪಾಲು ಎಂಬ ನೀತಿ ಅನುಸರಿಸಲು ಹೊರಟು ಕುವೆಂಪು ಅವರು ಕಲ್ಪಿಸಿದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡಲು ಹೊರಟಿದೆ ಎಂದು ದೂರಿದ್ದಾರೆ.

ಗುತ್ತಿಗೆ ಕಾಮಗಾರಿ ಹಂಚುವಲ್ಲಿಯೂ ಶೇ.4 ಮೀಸಲಾತಿ ನಿಗದಿಪಡಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸಿ, ಧರ್ಮಗಳ ನಡುವೆ ಬಿರುಕು ಮೂಡಿಸುವ ಕೆಲಸಕ್ಕೆ ಕಾಂಗ್ರೆಸ್‌‍ ಸರ್ಕಾರ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರೂ ಸೇರಿದಂತೆ ಇತರ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರಿಗೂ ಸಮಾನವಾಗಿ ಹಕ್ಕು, ಸವಲತ್ತುಗಳು ಹಂಚಿಕೆಯಾಗಬೇಕು. ಆದರೆ ಸಾಮಾಜಿಕ ನ್ಯಾಯದ ಬಗ್ಗೆ ಬೊಬ್ಬೆ ಹೊಡೆಯುವ ಕಾಂಗ್ರೆಸ್‌‍ ತನ್ನ ಆಡಳಿತದ ರಾಜ್ಯ ಸರ್ಕಾರದ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯವನ್ನು ಮೆಟ್ಟಿ ನಿಂತು ಮುಸ್ಲಿಂ ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವುದು ಸಂವಿಧಾನಕ್ಕೆ ದೋಹ ಬಗೆದಂತಾಗಿದೆ ಎಂದು ಟೀಕಿಸಿದ್ದಾರೆ.

Leave a Reply