ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ದೇಶಕ್ಕೆ ಮಾದರಿ ಹೆಜ್ಜೆ: ಪ್ರಿಯಾಂಕ್ ಖರ್ಗೆ

2 years ago

ಸರ್ವರಿಗೂ ಸಮಬಾಳು-ಸಮಪಾಲು ಎನ್ನುವ ಬಸವಣ್ಣ ಮತ್ತು ಡಾ. ಬಿಆರ್ ಅಂಬೇಡ್ಕರ್ ಅವರ ಆಶಯದಂತೆ ಸಾರ್ವಜನಿಕ ಕಲ್ಯಾಣದ ಸದುದ್ದೇಶದಿಂದ ಕರ್ನಾಟಕ ಸರ್ಕಾರವು ಸಾಕಷ್ಟು ಅಡೆತಡೆಗಳ ನಡುವೆಯೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಇಡೀ ದೇಶಕ್ಕೆ ಮಾದರಿ ಹೆಜ್ಜೆ ಇರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳು ಮರುಜೀವ ನೀಡಿದವು. ಆರಂಭದಿಂದಲೂ ಟೀಕೆ ಮತ್ತು ಲೇವಡಿ ಮಾಡುತ್ತಿದ್ದ ಬಿಜೆಪಿ, ಅದರ ಜನಪ್ರಿಯತೆ ಕಂಡು ಬೆಚ್ಚಿತ್ತು. ಅದರ ಪರಿಣಾಮವೇ ‘ಮೋದಿ ಕಿ ಗ್ಯಾರಂಟಿ’ ಘೋಷಣೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ದೊರಕುತ್ತಿರುವ ಅಭೂತಪೂರ್ವ ಜನಮನ್ನಣೆಯನ್ನು ಕಂಡು ಬಿಜೆಪಿ ಕಂಗೆಟ್ಟಿದೆ. ಹೀಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಲಾಗಿದೆ ಎಂದು ವೃಥಾ ಆರೋಪ ಮಾಡುತ್ತಿದೆ. ಆದರೆ ಬಿಜೆಪಿ ಸರ್ಕಾರವಿದ್ದಾಗ ಆರ್‌ಎಸ್‌ಎಸ್‌ ಹಿಂಬಾಲಕರಿಗೆ ಮಣೆ ಹಾಕಿದ್ದನ್ನು ಮರೆತಿರುವಂತಿದೆ. ಕೇಂದ್ರ ಸರ್ಕಾರ ಕೂಡ ಲ್ಯಾಟರಲ್ ಎಂಟ್ರಿ ಮೂಲಕ ಭಾರತೀಯ ನಾಗರಿಕ ಸೇವೆಗಳ ಹುದ್ದೆಗಳಿಗೆ ಸಂಘದ ಬೆಂಬಲಿಗರನ್ನು ನೇಮಿಸಿದೆ. ಅವರ ಸಂಬಳಕ್ಕೆ ಸಾರ್ವಜನಿಕರ ಹಣ ದುರ್ಬಳಕೆ ಮಾಡುತ್ತಿರುವುದು ಖಂಡನೀಯ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಜೀವನಾಡಿಯಾಗಿ ಪರಿಣಮಿಸಿವೆ. ವಿರೋಧ ಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ, ಈ ಯೋಜನೆಗಳನ್ನು ಜನತೆ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ರಾಜ್ಯ ದಿವಾಳಿಯಾಗಲಿದೆ ಎಂದು ಜನರ ಮನಸ್ಸಿನಲ್ಲಿ ಭಯ ಬಿತ್ತುವ ಬಿಜೆಪಿ ಪ್ರಯತ್ನ ಸಫಲವಾಗಿಲ್ಲ.

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Leave a Reply