ಚಿನ್ನ ಕಳ್ಳಸಾಗಣೆಯಲ್ಲಿ ಕೊರಿಯರ್ ಆಗಿ ಕೆಲಸ ಮಾಡುತ್ತಿದ್ದ ರನ್ಯಾ ರಾವ್

1 year ago

ಬೆಂಗಳೂರು: ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಆರೋಪದಲ್ಲಿ ಬಂಧಿತರಾಗಿರುವ ಮಾಣಿಕ್ಯ ನಟಿ ರನ್ಯಾ ರಾವ್ ತನಗಿರುವ ವಿಶೇಷ ಸೌಲಭ್ಯಗಳಿಂದಾಗಿ ಚಿನ್ನ ಸಾಗಿಸುವ ಕೊರಿಯರ್ ಆಗಿ ಕೆಲಸ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ.

ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾ ರಾವ್ ಗೆ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡಿ ಅಲ್ಲಿಂದ ಬೆಂಗಳೂರಿಗೆ ಹೇಗೆ ಸಾಗಿಸಬೇಕು ಎಂಬ ನೀಲನಕ್ಷೆಯನ್ನು ರವಾನಿಸುತ್ತಿರುವುದು ಡಿ ಆರ್ ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಬಂಧಿತ ತರುಣ್‌ನನ್ನು ಡಿಆರ್‌ಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಹಲವು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ದುಬೈ ಪಯಣದಲ್ಲಿ ಗೆಳತಿ ಜತೆ ನಿರಂತರವಾಗಿ ಆತ ಸಂಪರ್ಕದಲ್ಲಿದ್ದು ಸೂಚನೆ ನೀಡುತ್ತಿದ್ದ. ತನ್ನ ಗೆಳೆಯನ ಸೂಚನೆ ಅನುಸಾರ ರನ್ಯಾ ನಡೆದುಕೊಳ್ಳುತ್ತಿದ್ದರು. ಹೀಗಾಗಿ ವಿದೇಶದಿಂದ ಚಿನ್ನ ಸಾಗಿಸುವ ಜಾಲದ ಕೊರಿಯರ್ ಆಗಿ ರನ್ಯಾ ಬಳಕೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈಗಾಗಲೇ ತಮ್ಮ ವಶದಲ್ಲಿ ರನ್ಯಾ ರಾವ್ ಇದ್ದಾಗಲೇ ತರುಣ್‌ನನ್ನು ವಶಕ್ಕೆ ಪಡೆದು ಡಿಆರ್‌ಐ ವಿಚಾರಣೆ ನಡೆಸಿತ್ತು. ಆ ವೇಳೆ ಚಿನ್ನ ಕಳ್ಳ ಸಾಗಾಣಿಕೆ ಕೃತ್ಯದಲ್ಲಿ ಈ ಇಬ್ಬರ ಪಾತ್ರದ ಬಗ್ಗೆ ಮುಖಾಮುಖಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಲವು ವರ್ಷಗಳಿಂದ ರನ್ಯಾ ರಾವ್ ಜತೆ ತರುಣ್‌ಗೆ ಆತ್ಮೀಯ ಒಡನಾಟವಿತ್ತು. ಅಲ್ಲದೆ ತನ್ನ ಉದ್ಯಮ ಸಮೂಹದಿಂದ ಆತನಿಗೆ ದುಬೈನಲ್ಲಿ ಕೆಲ ಉದ್ಯಮಿಗಳ ಸಂಪರ್ಕವಿತ್ತು. ಸುಲಭವಾಗಿ ಹಣ ಸಂಪಾದಿಸುವ ಹಾಗೂ ಕಪ್ಪು ಹಣವನ್ನು ಸಕ್ರಮಗೊಳಿಸುವ ಕಾರಣಕ್ಕೆ ಸ್ಮಗ್ಲಿಂಗ್ ನಲ್ಲಿ ತರುಣ್ ಪಾತ್ರ ವಹಿಸಿರಬಹುದು. ಈ ಅನುಮಾನದ ಹಿನ್ನೆಲೆಯಲ್ಲಿ ಆತನನ್ನು ಐದು ದಿನ ವಶಕ್ಕೆ ಪಡೆದು ಡಿಆರ್‌ಐ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ಮೂರು ಸ್ನೇಹಿತರು ಪಾತ್ರ ವಹಿಸಿರುವ ಬಗ್ಗೆ ಶಂಕೆ ಮೂಡಿದೆ. ಈ ಗೆಳೆಯರಿಗೆ ಡಿಆರ್‌ಐ ತಲಾಶ್ ಸಹ ನಡೆಸಿದೆ ಎನ್ನಲಾಗಿದೆ.

Leave a Reply