ಅವಿಶ್ವಾಸ ಸೂಚನೆ ನೀಡಿದರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ: ಬಸವರಾಜ ಹೊರಟ್ಟಿ

1 year ago

ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಕಲಾಪದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಶಾಸಕ ಸಿ ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಂದಾಗಿದ್ದಾರೆ.

ಪ್ರಕರಣದ ಬಗ್ಗೆ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಈ ಹಿನ್ನಡೆಯಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್ ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಸಂಧಾನ ಮಾತುಕತೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಕಲಾಪ ನಡೆಯುವ ವೇಳೆ ಈ ಘಟನೆ ನಡೆದಿದ್ದರೆ ಅಸಂಸದೀಯ ಪದಬಳಕೆ ಎಂದು ಕಡತದಿಂದ ತೆಗೆದುಹಾಕುವ ಮೂಲಕ ಪ್ರಕರಣವನ್ನು ಅಲ್ಲಿಯೇ ಮುಕ್ತಾಯಗೊಳಿಸಬಹುದಿತ್ತು. ಅಧಿವೇಶನ ನಡೆಯದ ವೇಳೆ ಘಟನೆಯಾಗಿದೆ. ಅದು ಕೂಡ ವಿಧಾನಪರಿಷತ್ನ ಸಭಾಂಗಣದ ಒಳಗೆ ನಡೆದಿರುವುದರಿಂದ ವಿವಾದಗಳು ತಲೆ ಎತ್ತಿವೆ ಎಂದರು.

ಪ್ರಕರಣವನ್ನು ನೈತಿಕ ಸಮಿತಿಗೆ ಒಪ್ಪಿಸಲಾಗಿದೆ. ಅಲ್ಲಿ ಇಬ್ಬರನ್ನೂ ಕರೆಸಿ ಪರಸ್ಪರ ಮಾತುಕತೆಯ ಮೂಲಕ ಒಳ್ಳೆಯ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಪಿ.ಎಚ್.ಪೂಜಾರ್ ಅವರ ಅಧ್ಯಕ್ಷತೆಯ ನೈತಿಕ ಸಮಿತಿ ನೀಡುವ ವರದಿಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆಯೂ ಸೂಚಿಸಿದ್ದೇವೆ ಎಂದರು.

ಇದೇ ವೇಳೆ ಉತ್ತರ ಪ್ರದೇಶದ ಘಟನೆಯೊಂದನ್ನು ಪ್ರಸ್ತಾಪಿಸಿದ ಹೊರಟ್ಟಿಯವರು 1965ರಲ್ಲಿ ಸದಸ್ಯರೊಬ್ಬರು ಸಭಾಪತಿಯವರ ವಿರುದ್ಧ ದಿಕ್ಕಿಗೆ ತಿರುಗಿ ನಮಸ್ಕಾರ ಹಾಕಿದ್ದರು. ಇದಕ್ಕಾಗಿ ಆ ಸದಸ್ಯರನ್ನು ಅಮಾನತುಗೊಳಿಸಿ 8 ದಿನ ಜೈಲು ಶಿಕ್ಷೆ ವಿಧಿಸಿ ಸಭಾಪತಿ ಆದೇಶ ನೀಡಿದ್ದರು ಎಂದರು.

ಸದಸ್ಯ ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ತಡೆಯಾಜ್ಞೆ ತಂದು ಮುಂದುವರೆದ ಸಭಾವತಿಯವರು ನ್ಯಾಯಾಧೀಶರ ಬಂಧನಕ್ಕೆ ಆದೇಶ ಹೊರಡಿಸಿದ್ದರು. ಕೊನೆಗೆ ನ್ಯಾಯಾಧೀಶರಿಗೆ ಹೆದರಿ ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಮನೆಯಲ್ಲಿ ಅಡಗಿಕೊಂಡಿದ್ದರು. ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಮನೆಯಲ್ಲಿದ್ದಾಗ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಒಂದಷ್ಟು ವಿಳಂಬವಾಗಿತ್ತು. ಕೊನೆಗೆ ಅದು ರಾಷ್ಟ್ರಪತಿ ಅಂಗಳಕ್ಕೂ ಹೋಗಿತ್ತು. ಸಭಾಪತಿಯವರ ತೀರ್ಪೇ ಅಂತಿಮ ಎಂದು ನ್ಯಾಯಾಲಯ ಪುನರ್ ಆದೇಶ ಹೊರಡಿಸಿದ್ದರಿಂದ ವಿವಾದಕ್ಕೊಳಗಾದ ಸದಸ್ಯ ಜೈಲುಶಿಕ್ಷೆ ಅನುಭವಿಸಲೇಬೇಕಾಯಿತು. ಆಗೆಲ್ಲಾ ಸಭಾಪತಿಯವರ ಮಾತೇ ಅಂತಿಮ ಎಂಬಂತಿತ್ತು. ಆದರೆ ಈಗ ಪರಿಸ್ಥಿತಿ ಹಾಗೆ ಇಲ್ಲ ಎಂದರು.

ನೈತಿಕ ಸಮಿತಿಗೆ ಸಿ.ಟಿ.ರವಿ ಈ ಮೊದಲು ಅಧ್ಯಕ್ಷರಿದ್ದರು. ಘಟನೆಯಾದ ತಕ್ಷಣವೇ ಅವರನ್ನು ಬದಲಾವಣೆ ಮಾಡಿ ಪಿ.ಎಚ್.ಪೂಜಾರ್ ಅವರನ್ನು ನೇಮಿಸಲಾಗಿದೆ ಎಂದರು.

ವಿಧಾನಪರಿಷತ್ತಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ 4 ಮಂದಿ ಸದಸ್ಯರನ್ನು ನೇಮಿಸಿದರೆ ಬಹುಮತ ಪಡೆದುಕೊಳ್ಳುತ್ತದೆ. ಒಂದು ವೇಳೆ ಆಗ ತಮ್ಮ ವಿರುದ್ಧ ಅವಿಶ್ವಾಸ ಸೂಚನೆ ನೀಡಿದರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ನನಗೆ ಯಾವುದೇ ಅಧಿಕಾರದ ವ್ಯಾಮೋಹ ಇಲ್ಲ. ಸಾಮಾನ್ಯ ಕುಟುಂಬದಿಂದ ಬಂದವನು. ಶಿಕ್ಷಕನಾಗಿದ್ದ ನಾನು ಸಚಿವನಾಗಿ, ಸಭಾಪತಿಯಂತಹ ಉನ್ನತ ಹುದ್ದೆಯಲ್ಲಿದ್ದೇನೆ. ನನಗೆ ಈ ಬಗ್ಗೆ ತೃಪ್ತಿ ಇದೆ ಎಂದರು.

ಈ ಮೊದಲು ವಿಧಾನಮಂಡಲದ ಕಾರ್ಯಕಲಾಪ ಪಟ್ಟಿಯ ಜೊತೆಯಲ್ಲೇ ವಿಧೇಯಕಗಳ ಅಜೆಂಡಾವೂ ಸೇರುತ್ತಿತ್ತು. ಅವುಗಳ ಅಧ್ಯಯನಕ್ಕೆ ಶಾಸಕರಿಗೆ ಸಾಕಷ್ಟು ಸಮಯ ಸಿಗುತ್ತಿತ್ತು. ಈಗ ತರಾತುರಿಯಲ್ಲಿ ಮಸೂದೆಗಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಅಧ್ಯಯನಕ್ಕೆ ಅವಕಾಶವೇ ಸಿಗುತ್ತಿಲ್ಲ. ಮೊದಲು ವಿಧಾನಪರಿಷತ್, ವಿಧಾನಸಭೆಗಿಂತ ಒಂದು ದಿನ ತಡವಾಗಿ ಆರಂಭವಾಗುತ್ತಿದ್ದವು. ಒಂದು ದಿನ ತಡವಾಗಿ ಮುಗಿಯುತ್ತಿತ್ತು. ಆದರೆ ಈಗ ಕಾಲಮಾನವೂ ಬದಲಾಗಿದೆ ಎಂದರು.

Leave a Reply