ಡಾ. ರೆಪಲ್ಲೆ ಶಿವ ಪ್ರವೀಣ್ ಕುಮಾರ್ ವಿವಿಧ ಕಾರಣಗಳಿಗಾಗಿ ದೇಶಾದಾದ್ಯಂತ ಸಂಚಲನ ಮೂಡಿಸಿರುವ ಹೆಸರು. ಶಿಕ್ಷಣದ ಮೂಲಕ ಸಬಲೀಕರಣ ಮತ್ತು ಸಂವಿಧಾನ ಒದಗಿಸಿಕೊಟ್ಟ ಸೌಲಭ್ಯಗಳನ್ನು ವಂಚಿತ ಸಮುದಾಯಕ್ಕೆ ಸಮರ್ಥವಾಗಿ ತಲುಪಿಸಿರುವುದಕ್ಕೆ ಮಾದರಿಯಾಗಿದ್ದಾರೆ.
ತೆಲಂಗಾಣದ ಮೆಹಬೂಬನಗರದ ಅಲಂಪಲ ಗ್ರಾಮದಲ್ಲಿ ಜನಿಸಿದ ಇವರು ಆಂಧ್ರದ ಹೈದರಾಬಾದ್ನಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಪಶುವೈದ್ಯಕೀಯ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕ ಪದವಿ ಪಡೆದಿರುವ ಆರ್.ಎಸ್.ಪ್ರವೀಣ್ ಕುಮಾರ್ 1995ರಲ್ಲಿ ಐ.ಪಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದರು. ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಾತ್ತಿದ್ದಾಗಲೇ ತಮ್ಮ ಸೇವಾ ದಕ್ಷತೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಮತ್ತು ತೆಲಂಗಾಣ ಎಕ್ಸಲೆನ್ಸ್ ಅವಾರ್ಡ್ ಗಳಿಸಿದರು. ಅವರು ಐ.ಪಿ.ಎಸ್. ಹುದ್ದೆಯಲ್ಲಿದ್ದಾಗ ಸಮುದಾಯಗಳ ಭಾಗವಹಿಸುವಿಕೆಯ ಮೂಲಕ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಜನಸ್ನೇಹಿ ಪೊಲೀಸ್ ಪ್ರಕಿಯೆಗಳನ್ನು ಜಾರಿಗೊಳಿಸಿದ್ದಾರೆ. ಸಾಮಾಜಿಕ ಅನಿಷ್ಠ ಪದ್ಧತಿಗಳು ಮತ್ತು ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಸಾವಿರಾರು ಜನ ತಳಸಮುದಾಯಗಳ ಯುವ ಜನರನ್ನು ನಕ್ಸಲ್ ಹೋರಾಟದಿಂದ ಹೊರಬರುವಂತೆ ಪ್ರಕ್ರಿಯೆಗಳನ್ನು ರೂಪಿಸಿ ಪರ್ಯಾಯ ಉದ್ಯೋಗಗಳಲ್ಲಿ ತೊಡಗುವಂತೆ ಮಾಡಿದ್ದಾರೆ. ಅವರು ತಳಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ತೀರ್ಮಾನಿಸಿ, ಉನ್ನತ ಶಿಕ್ಷಣ ಪಡೆಯಲು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆಡಳಿತ ಪದವಿಯನ್ನು ಪಡೆದು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವೆಂದು ಅರ್ಥಮಾಡಿಕೊಂಡರು.

ತಮ್ಮ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಪೊಲೀಸ್ ಅಧಿಕಾರಿ ಹುದ್ದೆಯನ್ನು ತೊರೆದು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರು. ಅವರ ಕೋರಿಕೆಯ ಮೇರೆಗೆ ತೆಲಂಗಾಣ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆಯ ಕಾರ್ಯದರ್ಶಿಯಾಗಿ ನೇಮಿಸಲ್ಪಟ್ಟರು. ಅಂದಿನಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮೌನ ಶೈಕ್ಷಣಿಕ ಕ್ರಾಂತಿಯೊಂದು ಆರಂಭವಾಯಿತು. ವಸತಿ ಶಾಲೆಗಳಲ್ಲಿ ಓದುತ್ತಿದ್ದ ತಳಸಮುದಾಯಗಳ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸಿದರ ಫಲವಾಗಿ ಮಕ್ಕಳಲ್ಲಿ ಕನಸುಗಳು ವಿಸ್ತಾರವಾಗಬೇಕು, ಆತ್ಮವಿಶ್ವಾಸ ಮೂಡಬೇಕು, ಮಕ್ಕಳನ್ನು ಭಯದಿಂದ ಹೊರಗೆ ತರಬೇಕು, ಕಲಿಕೆಗೆ ಪೂರಕವಾದ ಸಮಗ್ರವಾದ ವಾತಾವರಣ ರೂಪಿಸಬೇಕೆಂದು ಆ ಶಾಲೆಗಳಲ್ಲಿ ಅವರು ತಂದ ಸುಧಾರಣೆಗಳು ದೇಶದಾದ್ಯಂತ ಸಂಚಲನ ಮೂಡಿಸಿದವು. ವಸತಿ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳು ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆಯಾಗತೊಡಗಿದರು.
ಇವರ ಪ್ರೇರಣೆಯಿಂದ ಪೂರ್ಣ ಮಲಾವತ್ ಎಂಬ 11 ವರ್ಷದ ಹಾಗು 15 ವರ್ಷದ ಆನಂದ ಎಂಬ ಮಕ್ಕಳು ಹಿಮಾಲಯದ ಎವರೆಸ್ಟ್ ಶಿಖರವನ್ನೇರಿದರು. ಈ ಪ್ರಕ್ರಿಯೆಯಿಂದ ತೆಲಂಗಾಣದ ಶೋಷಿತ ಸಮುದಾಯಗಳಲ್ಲಿ ಹೊಸ ರೀತಿಯ ಸಂಚಲನ ಉಂಟಾಯಿತು. ಶಿಕ್ಷಣ ಎಂದರೆ ಸಮಗ್ರ ಸಾಮೂಹಿಕ ಚಟುವಟಿಕೆ ಎಂಬುದನ್ನು ತೋರಿಸಿಕೊಟ್ಟರು. ಶಿಕ್ಷಣದಲ್ಲಿ ಅಕ್ಷರಗಳೊಂದಿಗೆ ಸಮುದಾಯಗಳಲ್ಲಿ ಬದಲಾವಣೆ ತಂದರು. ಶಿಕ್ಷಣ ಪಡೆದು ಮುಂದೆ ಬಂದಿರುವ ಯುವ ಜನರು ಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಸ್ವೆರೋಸ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗಳನ್ನು ಕೇಂದ್ರವಾಗಿಟ್ಟುಕೊಂಡು ಲಕ್ಷಾಂತರ ಯುವ ಜನರಿಗೆ ಆದರ್ಶವಾಗಿ ತಳಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಅಂಬೇಡ್ಕರ್ ಅಂತರರಾಷ್ಟ್ರೀಯ ಪ್ರಶಸ್ತಿ 2020ರಲ್ಲಿ ನಾರ್ಥ್ ಅಮೇರಿಕಾದ ಅಂಬೇಡ್ಕರ್ ಸಂಘಟನೆ ನೀಡಿದೆ.
ಸಾವಿತ್ರಿ ಬಾ ಫುಲೆ, ಜೋತಿಬಾ ಫುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್, ಕಾನ್ಷಿರಾಂ ಹೆಜ್ಜೆ ಗುರುತುಗಳಲ್ಲಿ ನಡೆಯುತ್ತಿರುವ ಪ್ರವೀಣ್ ಕುಮಾರ್ರ ಹಿಂದೆ ಲಕ್ಷಾಂತರ ಯುವಜನರು ನಡೆಯತೊಡಗಿದ್ದಾರೆ. ಬಹುಜನರ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಬಹಳ ಮುಖ್ಯ. ಗುಣಮಟ್ಟದ ಶಿಕ್ಷಣ ನೀಡಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಸಿದ್ದರಾಗುವ ರೀತಿಯಲ್ಲಿರಬೇಕು. ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಮಕ್ಕಳ ಅಭಿರುಚಿಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾದ ಅವಕಾಶಗಳನ್ನು ಒದಗಿಸಬೇಕು. ಇದಕ್ಕಾಗಿ ಎಲ್ಲಾ ಬಹುಜನರು ಒಟ್ಟಾಗಿ ಪ್ರಯತ್ನಿಸಬೇಕು.
ಈ ನಡಿಗೆ ಸರ್ವವ್ಯಾಪಿಯಾಗಿದೆ. ಅವರು ಆರಂಭಿಸಿದ ಸೈರೋಸ್ ಅಂದರೆ ಗ್ರಾಮ ಕಲಿಕಾ ಕೇಂದ್ರಗಳು ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ಚಳುವಳಿ. ಆ ಚಳುವಳಿಯ ಕರ್ನಾಟಕದಲ್ಲಿಯೂ ಸದ್ದಿಲ್ಲದೆ ನಡೆಯುತ್ತಿದೆ. ಪ್ರವಿಣ್ ಕುಮಾರ್ ಅವರ ಕಾರ್ಯವ್ಯಾಪ್ತಿ ಬೇರೆ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಬಹುಜನ ಧರ್ಮದ ಆಲೋಚನೆಯನ್ನು ಜೀವನ ಕ್ರಮವಾಗಿ ಅಳವಡಿಸಿಕೊಳ್ಳಬೇಕು. ಅದರ ಮೂಲಕ ಸಮಸಮಾಜ ನಿರ್ಮಾಣದ ಕನಸನ್ನು ವಿಸ್ತರಿಸಬೇಕು ಎಂಬ ಉದ್ದೇಶದಿಂದ ಐ.ಪಿ.ಎಸ್ ಹುದ್ದೆಗೆ ರಾಜಿನಾಮೆ ನೀಡಿ 300 ದಿನಗಳ ಬಹುದಿನ ರಾಜ್ಯಾಧಿಕಾರ ಯಾತ್ರೆಯನ್ನು ಪ್ರಾರಂಭಿಸಿ ಸಮುದಾಯಗಳಲ್ಲಿ ಸಂಚಲನವನ್ನು ಮೂಡಿಸುತ್ತಿದ್ದಾರೆ. ಪ್ರವೀಣ್ ಕುಮಾರ್ ಅವರ 10 ಸೂತ್ರಗಳು ಇಂದು ದೇಶಾದ್ಯಂತ ಮಕ್ಕಳಿಗೆ ಹೊಸ ಸ್ಪೂರ್ತಿ ನೀಡುತ್ತಿವೆ. ಅವರು ವಂಚಿತ ಸಮುದಾಯಗಳ ಮಕ್ಕಳಲ್ಲಿ ಶಿಕ್ಷಣದ ಮೂಲಕ ತಂದಿರುವ ಕ್ರಾಂತಿಕಾರಕ ಪರಿವರ್ತನೆಗಾಗಿ ಸ್ಫೂರ್ತಿಧಾಮ ವತಿಯಿಂದ ನೀಡಲಾಗುವ ‘ಬೋಧಿ ವೃಕ್ಷ ಪ್ರಶಸ್ತಿ’ಯನ್ನು ನೀಡಲಾಗುತ್ತಿದೆ.
ಜೊತೆಗೆ, ಬೋಧಿ ವರ್ಧನ ಪ್ರಶಸ್ತಿಯನ್ನು ಗುರುಪ್ರಸಾದ್ ಕೆರೆಗೋಡು, ಡಿ.ನಾಗಲಕ್ಷ್ಮಿ, ಪದ್ಮಾಲಯ ನಾಗರಾಜ್, ಡಾ.ಮಹೇಂದ್ರ ಕುಮಾರ್ ಬಿ.ಪಿ., ಮೇರಿ ಲೋಬೋ ಅವರಿಗೆ ನೀಡಲಾಗುತ್ತಿದೆ.
ಕಾರ್ಯಕ್ರಮ ಏಪ್ರಿಲ್ 14, 2022ರಂದು ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ನಡೆಯಲಿದೆ. ಕಾರ್ಯಕ್ರದ ಉದ್ಘಾಟನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದು, ನ್ಯಾ.ಗೋಪಾಲಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದು, ಚಿಂತಕ ಜಿ.ರಾಮಕೃಷ್ಣ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸ್ಫೂರ್ತಿಧಾಮದ ಅಧ್ಯಕ್ಷ ಎಸ್.ಮರಿಸ್ವಾಮಿ ಅಧ್ಯಕ್ಷ್ಯತೆ ವಹಿಸಿಕೊಳ್ಳಲಿದ್ದಾರೆ.




