ಅಂತರ್ಜಾಲದಿಂದ ಆಗುವ ಉಪಯೋಗಕ್ಕಿಂತ ಅದರಿಂದ ಆಗುವ ಸಮಸ್ಯೆಗಳೇ ಹೆಚ್ಚಾಗಿದೆ: ಸಾಜೀದ್ ಮುಲ್ಲಾ

1 year ago

ಕಾರವಾರ: ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಪ್ರತೀ ಕ್ಷಣ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು. ಅಂತರ್ಜಾಲದಿಂದ ಆಗುವ ಉಪಯೋಗಕ್ಕಿಂತ ಅದರಿಂದ ಆಗುವ ಸಮಸ್ಯೆಗಳೇ ಹೆಚ್ಚಾಗಿದ್ದು, ಅಂತರ್ಜಾಲದ ಸುರಕ್ಷಿತ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಮಂತ್ರಾಲಯ, ಜಿಲ್ಲಾ ಮಾಹಿತಿ ಕೇಂದ್ರ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ತಂತ್ರಜ್ಞಾನ ಬೆಳದಂತೆ ಅದನ್ನು ಬಳಸುವ ಜನರ ಸಂಖ್ಯೆಯೂ ಹೆಚ್ಚಾಗಿದ್ದು, ಜಾಲತಾಣವನ್ನು ಜಾಲಾಡುವಾಗ ಅನವಶ್ಯಕವಲ್ಲದ ಜಾಲತಾಣಗಳನ್ನು ಪರಿಶೀಲಿಸಿ ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವ ವಂಚಕರು ಜನರನ್ನು ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತರಾಗದೇ ಹೋದರೆ ವಂಚಿಸುವವರ ಸಂಖ್ಯೆಯೂ ಹೆಚ್ಚಾಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸುರಕ್ಷಿತ ಅಂತರ್ಜಾಲ ಬಳಕೆಯ ಕುರಿತು ಜಾಗೃತರಾಗಬೇಕು ಎಂದರು.

ಸಿ.ಇ.ಎನ್ ಅಪರಾಧ ಪೊಲೀಸ್ ವಿಭಾಗದ ಡಿವೈಎಸ್ಪಿ ಬಿ.ಅಶ್ವಿನಿ ಮಾತನಾಡಿ, ಅಂಗೈಯಲ್ಲೇ ಜಗತ್ತು ತೋರಿಸುವ ಅಂತರ್ಜಾಲ ಇಂದು ಪ್ರತಿಯೊಬ್ಬರ ಬದುಕನ್ನು ಆವರಿಸಿಕೊಂಡಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಜನಸಾಮಾನ್ಯನಿಂದ ಹಿಡಿದು ತಜ್ಞರವರೆಗೂ ಅಂತರ್ಜಾಲದ ಬಳಕೆ ವ್ಯಾಪಿಸಿದೆ. ಅಂತರ್ಜಾಲ ಬಳಕೆದಾರರನ್ನು ವಂಚಿಸುವುದಕ್ಕಾಗಿಯೇ ಸಂಘಟಿತ ಅಪರಾಧ ಮಾಡುವ ಜಾಲ ಇಂದು ಜಗತ್ತನ್ನೇ ಆಳುತ್ತಿದೆ. ಡಾರ್ಕ್ ವೆಬ್ ನಂತಹ ಜಾಲತಾಣದಲ್ಲಿ ಕಾನೂನು ಹಾಗೂ ಕಾನೂನು ಬಾಹಿರವಾಗಿ ಮಾಡಬಹುದಾದ ಎಲ್ಲಾ ರೀತಿಯ ಸೌಲಭ್ಯಗಳು ಇದ್ದು ಈ ಜಾಲತಾಣದಲ್ಲಿ ಕಾನೂನು ಬಾಹಿರ ಅಪರಾಧಗಳು ನಡೆಯುತ್ತವೆ ಈ ಬಗ್ಗೆ ಜನರು ಎಚ್ಚವಾಗಿರುವುದು ಅತೀ ಅವಶ್ಯ ಎಂದರು.

ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೈಬರ್ ವಂಚನೆಯ ಜಾಲಕ್ಕೆ ಒಳಗಾಗುತ್ತಿದ್ದು, ಸರಿಯಾದ ಜ್ಞಾನ-ತಿಳುವಳಿಕೆ ಇಲ್ಲದೇ ನಾವಾಗಿಯೇ ಅಂತರ್ಜಾಲ ಬಳಕೆ ವೇಳೆ ತಪ್ಪುಗಳನ್ನು ಮಾಡಿ ತೊಂದರೆಗೀಡಾಗುತ್ತೇವೆ. ಆನ್ಲೈನ್ ಹೂಡಿಕೆ, ಉದ್ಯೋಗ, ವಿವಾಹ ಸೇರಿದಂತೆ ಅನೇಕ ವಂಚನೆಗಳಿಗೆ ಒಳಗಾಗುವ ಯುವ ಜನತೆಗೆ ಬೇಸಿಕ್ ಮಾಹಿತಿ ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ ಎಂದರು.

ಇ-ಮೇಲ್, ಹಾಗೂ ಮೊಬೈಲ್ ನಂಬರ್ ಗೆ ಬರುವ ಅನವಶ್ಯಕ ಲಿಂಕ್ ಒತ್ತುವ ಮೂಲಕ ತಮ್ಮ ವೈಯಕ್ತಿಕ ಮಾಹಿತಿ ನೀಡುವುದರಿಂದ ವಂಚನೆಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ವಂಚಕರು ವಿಡಿಯೋ ಕರೆಗಳ ಮೂಲಕ ಮಾನಸಿಕವಾಗಿ ಕುಗ್ಗಿಸಿ, ವಂಚನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಯಪಡಬಾರದು. ಸ್ಥಳೀಯ ಭಾಷೆಯಲ್ಲಿ ಮಾತನಾಡುವುದು ಉತ್ತಮ. ಡಿಜಿಟಲ್ ಅರೆಸ್ಟ್ ಎಂಬ ಕ್ರಮ ಪೊಲೀಸ್ ಇಲಾಖೆಯಲ್ಲಿ ಇರುವುದಿಲ್ಲ ಎಂದರು.

ವೈಯಕ್ತಿಕ ಮಾಹಿತಿ, ಒಟಿಪಿ, ಬ್ಯಾಂಕ್ ವಿವರ ಮತ್ತಿತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಉಚಿತವಾಗಿ ಸಿಗುವ ಆ್ಯಂಟಿ ವೈರಸ್ ಅಳವಡಿಸಿಕೊಳ್ಳುವುದಕ್ಕಿಂತ ಪಾವತಿ ಆ್ಯಂಟಿ ವೈರಸ್ ಅಳವಡಿಸಿಕೊಳ್ಳುವುದು ಉತ್ತಮ. ಜಾಲತಾಣದಲ್ಲಿ 2 ರೀತಿಯ ದೃಢೀಕರಣ ಪ್ರಕ್ರಿಯೆ ಮಾಡಿಕೊಳ್ಳಬೇಕು. ಜಾಲತಾಣ ಅಥವಾ ಇ-ಮೇಲ್ ಪಾಸ್ವರ್ಡ್ಗಳನ್ನು ಆಟೋ ಸೇವ್ ಮಾಡಬೇಡಿ, ಆಗಾಗ ಫರ್ಗೆಟ್ ಪಾಸ್ವರ್ಡ್ ಮೂಲಕ ಪಾಸ್ವರ್ಡ್ಗಳನ್ನು ರೀಸೆಟ್ ಮಾಡುವುದರ ಮೂಲಕ ಮತ್ತು ವಿಶಿಷ್ಟ ಚಿಹ್ನೆ ಮತ್ತು ಅಂಕೆಗಳನ್ನು ಒಳಗೊಂಡ ಸ್ಟ್ರಾಂಗ್ ಪಾಸ್ವರ್ಡ್ ನೀಡುವುದರಿಂದ ಜಾಲತಾಣಗಳ ವಂಚನೆಯಿಂದ ಸುರಕ್ಷಿತವಾಗಿರಬಹುದು. ಸಾರ್ವಜನಿಕ ವೈಫೈ ಮತ್ತು ಛಾರ್ಜಿಂಗ್ ಬಳಸಬಾರದು ಎಂದರು.

ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಶ್ರೀಕಾಂತ ಎಸ್ ಜೋಶಿ ಮಾತನಾಡಿ, ಪ್ರತಿ ವರ್ಷ ಫೆಬ್ರವರಿ ತಿಂಗಳ 2ನೇ ಮಂಗಳವಾರ ವಿಶ್ವ ಸುರಕ್ಷಿತ ಅಂತರ್ಜಾಲ ದಿನ ಆಚರಿಸಲಾಗುತ್ತಿದ್ದು, ಈ ಬಾರಿಯ “ಜೊತೆಯಾಗಿ ಉತ್ತಮ ಇಂಟರ್ನೆಟ್ ಕಡೆಗೆ” ಇದರ ಧ್ಯೇಯವಾಕ್ಯವಾಗಿದ್ದು, ಇಂಟರ್ನೆಟ್ ಮೂಲಕ ನಡೆಯುವ ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸುರಕ್ಷಿತ ಅಂತರ್ಜಾಲ ಬಳಕೆಯ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ISEA ವೆಬ್ಸೈಟ್ನಲ್ಲಿ ವಂಚನೆಯಾದ ಪ್ರಕರಣಗಳ ವಿವರ, ಬಗೆಹರಿಸಿದ ಪ್ರಕರಣಗಳ ಮಾಹಿತಿ ಇದ್ದು, ಪರಿಶೀಲಿಸಬಹುದಾಗಿದೆ, ಸಾರ್ವಜನಿಕರು ಯಾವುದೇ ರೀತಿಯ ಸೈಬರ್ ವಂಚನೆಯಾದಲ್ಲಿ ಉಚಿತ ದೂರವಾಣಿ ಸಂಖ್ಯೆ. 1930 ಸಂಪರ್ಕಿಸುವಂತೆ ತಿಳಿಸಿದರು.

ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Leave a Reply