ಚುನಾವಣಾ ಫಲಿತಾಂಶ – ಒಂದು ಪ್ರತಿಕ್ರಿಯೆ.
ಪಂಚರಾಜ್ಯ ಚುನಾವಣೆಯಲ್ಲಿ ಜನಾದೇಶ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆಗಳು.
ಪ್ರಜಾಪ್ರಭುತ್ವದಲ್ಲಿ ಜನಾದೇಶವೇ ಅಂತಿಮವಾಗಿದ್ದು ಸಂವಿಧಾನದಲ್ಲಿ ನಂಬಿಕೆಯಿಟ್ಟ ಎಲ್ಲರೂ ಅದನ್ನು ಗೌರವಿಸಬೇಕು.
ಇದರ ಜೊತೆಗೆ ಬಿಜೆಪಿಗರು ಎಂತಹ ಕೆಟ್ಟ ಹಾದಿಯಲ್ಲಿ ಸಾಗುತ್ತಾ ಕಳಪೆ ಆಡಳಿತ ನೀಡುತ್ತಿದ್ದರೂ ಅದನ್ನು ಮೀರಿದ ಚುನಾವಣಾ ತಂತ್ರಗಳು ಕೋಮುವಾದವನ್ನು ಎದುರಿಸಲು ಜಾತ್ಯತೀತ ರಾಜಕೀಯ ಶಕ್ತಿಗಳು ಸ್ವ ಪ್ರತಿಷ್ಠೆಯನ್ನು ಬದಿಗಿಟ್ಟು ಒಗ್ಗೂಡಿ ಜನ ಸಾಮಾನ್ಯರ ಬದುಕಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನೇ ಸಾರಿ ಸಾರಿ ಹೇಳುತ್ತಿದೆ. ನನ್ನ ಪ್ರಕಾರ ಜಾತ್ಯಾತೀತ ಪಕ್ಷಗಳ ಅಹಂ ಇಲ್ಲದ ಒಗ್ಗೂಡುವಿಕೆ ಮಾತ್ರವೇ ಜನಾದೇಶದ ಜೊತೆಗೆ ಜನರ ಪ್ರೀತಿ ಮತ್ತು ನಂಬಿಕೆಯನ್ನೂ ಗಳಿಸಲು ಸಾಧ್ಯವಾಗುವ ಮಾರ್ಗವೆಂದು ತೋರುತ್ತಿದೆ.
ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಎಂದಿನಂತೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಜನಾದೇಶ ಪಡೆದಿದ್ದರೂ ಕೂಡಾ, ಬೆಲೆ ಏರಿಕೆ, ನಿರುದ್ಯೋಗ, ಧಾರ್ಮಿಕ ದ್ವೇಷದ ಕಾರಣಕ್ಕೆ ಹುಟ್ಟು ಹಾಕಿರುವ ಸಾಮಾಜಿಕ ಅಶಾಂತಿ, ಕರೋನಾ ನಿರ್ವಹಣೆಯ ವೈಫಲ್ಯ ಮತ್ತು ಆ ವೈಫಲ್ಯದಿಂದ ತಮ್ಮ ದೈನಂದಿನ ಬದುಕಿನಲ್ಲಿ ಅಕ್ಷರಶಃ ತೊಂದರೆಗಳನ್ನು ಎದುರಿಸಿದ ಜನ ಸಾಮಾನ್ಯರ ಪ್ರೀತಿ ಮತ್ತು ನಂಬಿಕೆಯನ್ನು ಅವರು ಗಳಿಸಿಲ್ಲ ಎಂಬುದೇ ನನ್ನ ದೃಢವಾದ ನಂಬಿಕೆ.
ಇದರ ಜೊತೆಯಲ್ಲಿ ಕೃಷಿ ತಿದ್ದುಪಡಿ ಕಾಯ್ದೆಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಧಾರ್ಮಿಕ ಕಾರಣದ ಸಾಮಾಜಿಕ ಅಶಾಂತಿ, ನಿರುದ್ಯೋಗ, ತೈಲ ಬೆಲೆ ಏರಿಕೆ ಹೀಗೆ ಜನರು ಹಲವಾರು ಸಮಸ್ಯೆಗಳನ್ನು ಎದುರಿಸಿ ಒದ್ದಾಟ ನಡೆಸಿದ್ದರೂ ಕೂಡಾ ಏನೂ ಆಗದವರಂತೆ ತಮ್ಮ ಚುನಾವಣಾ ಆಯ್ಕೆಯನ್ನು ಮಾಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
ಇನ್ನು ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರು ಮತ್ತು ಕೃಷಿಯ ಭವಿಷ್ಯಕ್ಕೆ ವಿರುದ್ಧವಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಮತ್ತು ಕಾರ್ಮಿಕ ತಿದ್ದುಪಡಿ ಕಾಯ್ದೆ, ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ವಿಪರೀತ ಬೆಲೆ ಏರಿಕೆ, ಹೊಸ ಶಿಕ್ಷಣ ನೀತಿಯ ತೊಂದರೆಯ ಆದಿಯಾಗಿ ಜನರ ಬದುಕಿನ ಹಿತಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಎಷ್ಟೋ ಸಮಸ್ಯೆಗಳ ವಿರುದ್ಧ ನಾವೆಲ್ಲರೂ ಸಹ ವಿಷಯಾಧಾರಿತ ಹೋರಾಟವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಮತ್ತೆ ಮತ್ತೆ ಸಮಸ್ಯೆಯನ್ನು ಉಂಟು ಮಾಡಿದ ಜನ ವಿರೋಧಿಗಳಿಗೇ ಜನರು ಮಣೆ ಹಾಕುತ್ತಿರುವುದು, ನಮ್ಮ ಹೋರಾಟದ ಪ್ರಯತ್ನಗಳ ಬಗ್ಗೆ ನಮಗೇ ಒಂದು ಕ್ಷಣ ಅನುಮಾನ ಮೂಡುವಂತೆ ಮಾಡಿವೆ.
ಸಂವಿಧಾನಾತ್ಮಕವಾಗಿ ಈ ದೇಶದ ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು, ನಿರಂತರವಾಗಿ ಅವಕಾಶ ವಂಚಿತರಾದ ನಿಮ್ನ ವರ್ಗಗಳಿಗೆ ಸರ್ಕಾರಿ ಮಟ್ಟದಲ್ಲಿ ಅವಕಾಶಗಳು ದೊರೆಯಬೇಕು ಎಂಬ ಕಾರಣಕ್ಕೆ SCP/STP ಕಾಯ್ದೆ ಜಾರಿಗೊಳಿಸಲಾಗಿದೆ, ಅಪೌಷ್ಟಿಕತೆಯನ್ನು ತೊಡೆಯಲು ಆಹಾರದ ವ್ಯವಸ್ಥೆ, ವಿದ್ಯಾಭ್ಯಾಸಕ್ಕೆ ಧನ ಸಹಾಯ ಮತ್ತು ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಹಸಿವು ಮುಕ್ತ ಸಮಾಜಕ್ಕಾಗಿ ಅನ್ನ ಭಾಗ್ಯ ಯೋಜನೆಯಡಿ ಧಾನ್ಯವನ್ನು ನೀಡುವ ಕೆಲಸವಾಗಿದೆ, ಉತ್ತಮ ಕೃತಿಗಳು, ಸಂವಿಧಾನಾತ್ಮಕ ವಿಚಾರಗಳ ದಾಖಲೀಕರಣದ ಜೊತೆಗೆ ಕಲಾವಂತಿಕೆಗೂ ಸೂಕ್ತ ಪ್ರೋತ್ಸಾಹ ನೀಡುವ ಕೆಲಸವಾಗಿದೆ.
ಇನ್ನು ದೇಶದ ಬೆನ್ನೆಲುಬಾದ ರೈತನ ಶ್ರಮಕ್ಕೆ ಕೈಲಾದಷ್ಟು ಬೆಂಬಲ ಸೂಚಿಸಬೇಕೆಂಬ ಉದ್ದೇಶದಿಂದ ಸಾಲಮನ್ನಾ ಮಾಡುವುದು, ಸಬ್ಸಿಡಿ ದರದಲ್ಲಿ ಕೃಷಿ ಯಂತ್ರ ನೀಡುವುದು, ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಿ, ಗ್ರಾಮೀಣ ಭಾಗದ ರೈತರಿಗೆ ತುಸು ಹೆಚ್ಚಿನ ಆದಾಯ ಸಿಗಲಿ ಎಂದು ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಸಹಾಯ ಧನವನ್ನು ಹೆಚ್ಚಿಸುವ ಕೆಲಸವನ್ನು ಮಾಡಿ ತೋರಿಸಲಾಗಿದೆ. ಇನ್ನು ಬಳ್ಳಾರಿಯ ಪಾದಯಾತ್ರೆ ಮತ್ತು ಗಣಿ ಮಾಲೀನ್ಯದ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನೋಡಿದ್ದ ಫ್ಲೋರೈಡ್ ನೀರಿನ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಬೆಳೆಯುವ ಮಕ್ಕಳ ಆರೋಗ್ಯದ ಮೇಲಿನ ಕಾಳಜಿಯಿಂದ ನಗರದ ವಾರ್ಡ್ ಮತ್ತು ಹಳ್ಳಿಯ ಪಂಚಾಯತ್ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಇನ್ನು ನೀರಾವರಿ ವಿಷಯದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಲಾಗಿದ್ದು, ಕಾಂಗ್ರೆಸ್ ನ ಅವಧಿಯಲ್ಲೇ ವ್ಯವಸ್ಥಿತವಾದ ಕಾನೂನು ಹೋರಾಟದ ಮೂಲಕ ಕಾವೇರಿ ನದಿ ನೀರಿನ ಹೋರಾಟಗಳಿಗೆ ಒಂದು ತೀರ್ಪು ಬರುವಂತೆ ಕೆಲಸ ಮಾಡಿ ಆ ಜಲ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಲಾಗಿದ್ದು.
ಶಾಲಾ ಕಾಲೇಜಿನ ಕಟ್ಟಡಗಳು, ನದಿ ಸೇತುವೆಗಳು, ಸಿಗಂಧೂರು ಬ್ರಿಡ್ಜ್, ಕೃಷಿ ಮತ್ತು ತೋಟಗಾರಿಕಾ ತರಬೇತಿ ಕೇಂದ್ರಗಳು, ರಸ್ತೆಗಳ ಪೈಕಿ ಬೆಂಗಳೂರು – ಮೈಸೂರು ಚತುಷ್ಪಥ ರಸ್ತೆ, ಚಾರ್ಮಡಿ ಘಾಟಿಯ ಕಾಂಕ್ರೀಟ್ ರಸ್ತೆ, ಶಿವಮೊಗ್ಗ – ಶಿಕಾರಿಪುರ – ಹಾನಗಲ್ ರಸ್ತೆ, ಶಿಕಾರಿಪುರ – ಆನಂದಪುರ ರಸ್ತೆ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಬೆಳಗಾವಿ, ಬಿಜಾಪುರ, ಕಲ್ಬುರ್ಗಿ, ಕೋಲಾರ, ತುಮಕೂರು ಮತ್ತು ಬಹುತೇಕ ಜಿಲ್ಲೆಗಳ ಮುಖ್ಯ ಮತ್ತು ಒಳ ರಸ್ತೆಗಳ ಅಚ್ಚುಕಟ್ಟಾದ ನಿರ್ಮಾಣದ ಜೊತೆಗೆ ಪಕ್ಷಾತೀತವಾಗಿ ಎಲ್ಲರ ಜನ ಪ್ರತಿನಿಧಿಗಳ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ನೀಡಲಾಗಿದೆ. ( ಈ ಮಾತನ್ನು ಸದನದ ಒಳಗೆ ಮತ್ತು ಹೊರಗೆ ನೀವೂ ಕೇಳಿರುತ್ತೀರಿ)
ಇನ್ನು ಅತಿದೊಡ್ಡ ಸೋಲಾರ್ ಪಾರ್ಕ್, ಪೌರ ಕಾರ್ಮಿಕರ ವೇತನ ಹೆಚ್ಚಳ, ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರೋತ್ಸಾಹ ಧನದ ಆದಿಯಾಗಿ ಬೇಕಾದಷ್ಟು ಕೆಲಸಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ.
ಜನರು ನಮ್ಮನ್ನು ನಂಬಿ ಜನಾದೇಶ ನೀಡಿದ್ದಕ್ಕೆ ಚ್ಯುತಿ ಬಾರದಂತೆ ಸರ್ವಾಂಗೀಣ ಆಡಳಿತ ನಡೆಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ.
ಇಂತಹ ಪ್ರಾಮಾಣಿಕ ಪ್ರಯತ್ನಗಳು ಕ್ಷುಲ್ಲಕವಾದ ಧಾರ್ಮಿಕ ವೈಷಮ್ಯ ಮತ್ತು ಜನಾಂಗೀಯ ಅಸಹನೆಯ ಕಾರಣಕ್ಕೆ ಒಂದೇ ಏಟಿಗೆ ತಿರಸ್ಕೃತವಾಗುವಂತಹ ವಾತಾವರಣ ಇದೆಯಲ್ಲಾ ಅದು ನಿಜಕ್ಕೂ ಅಪಾಯಕಾರಿ.
ಇದಕ್ಕಿಂತಲೂ ಅಪಾಯಕಾರಿ ಎಂದರೆ ಸಾಮಾಜಿಕ ನ್ಯಾಯಕ್ಕೆ ಪೂರಕವಾದ ಪ್ರಯತ್ನಗಳನ್ನು ಅರ್ಥ ಮಾಡಿಕೊಳ್ಳದೇ ಮತ್ತೆ ಕೋಮುದ್ವೇಷದ ಪ್ರಯತ್ನಗಳಿಗೆ ನಮ್ಮ ಜನತೆ ಮಣಿಯುವುದು ನಂತರ ಮತ್ತೆ ವಿಪರೀತ ತೊಂದರೆ ಅನುಭವಿಸುವುದು.
ಇದಕ್ಕೆ ಏನಾದರೂ ಅರ್ಥವುಂಟೇ?
ನಿಜಕ್ಕೂ ಚುನಾವಣೆಗಳಲ್ಲಿ ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು, ಎಲ್ಲ ಸಮುದಾಯಗಳಿಗೂ ಬೇಕಾದ ಯೋಜನೆಗಳನ್ನು ರೂಪಿಸುವವರೆಗೆ ಸಾಮಾಜಿಕ ನ್ಯಾಯಕ್ಕೆ ಪೂರಕವಾದ ಆಡಳಿತವನ್ನು ನೀಡಿದರೂ ಅದಕ್ಕೆ ಮನ್ನಣೆ ದೊರೆಯದೇ ಹೋದಾಗ ಎಲ್ಲರಂತೆಯೇ ನಾವೂ ಏಕೆ ಗೆಲುವಿನ ರಾಜಕೀಯ ಮಾಡಿಕೊಂಡು ಇರಬಾರದು? ಕೆಳ ವರ್ಗಗಳು ನಮ್ಮನ್ನು ಮತ್ತು ನಮ್ಮ ಸರ್ಕಾರದ ಯೋಜನೆಗಳ ಹಿಂದಿನ ಆಶಯವನ್ನು ಅರ್ಥ ಮಾಡಿಕೊಂಡ ಬಗೆ ಇಷ್ಟೇನಾ?
ಜನಪರ ರಾಜಕೀಯದ ಮೌಲ್ಯ ಮತ್ತು ಅದರ ನೈಜತೆಗಿಂತ ಅಪಪ್ರಚಾರದ ಮಾತೇ ಮುಖ್ಯವೇ?
ಟಿವಿಯ ಮೂಲಕ ಯುದ್ಧ, ಧರ್ಮ ಎಂದುಕೊಂಡು, ಕೆಲ ಅರ್ಥವಿಲ್ಲದ, ಜನರ ಬದುಕಿಗೆ ಕವಡೆ ಕಾಸಿನ ಅನುಕೂಲ ಮಾಡದ ಬಾಲಿಶ ಸಂಗತಿಗಳನ್ನು ತೋರಿಸಿ ಮರಳು ಮಾಡಿದರೆ ಸಾಕೇ? ಎನ್ನುವಂತಹ ಆಲೋಚನೆಗಳು ಬರುತ್ತವೆ.
ಆದರೆ ಗೆಲುವಿರಲಿ ಸೋಲಿರಲಿ ಬಾಬಾ ಸಾಹೇಬರು ಹೇಳಿದಂತೆ ಸಾರ್ವಜನಿಕ ಬದುಕಿನ ಉದ್ದೇಶವು “ನಮ್ಮ ಆಲೋಚನೆ ಮತ್ತು ಬದ್ಧತೆಯ ಮೂಲಕ ಜನರಿಗೆ ಒಳಿತು ಮಾಡುವುದೇ ಹೊರತು ಚುನಾವಣೆ ತಂತ್ರ ಮತ್ತು ಕುತಂತ್ರಗಳನ್ನು ಮಾಡುತ್ತಲೇ ಇರುವುದಲ್ಲ” ಎಂಬ ಸಂಗತಿಯು ಮನಸ್ಸಿನ ಇಂತಹ ಎಲ್ಲ ಬೇಸರ ಮತ್ತು ಗೊಂದಲಗಳನ್ನು ಸರಿಸಿ ಸ್ಪಷ್ಟತೆಯ ಬೆಳಕನ್ನು ನೀಡುತ್ತದೆ.
ಹೀಗಾಗಿ ಯಾರು ನಮಗಾಗಿ ಇದ್ದಾರೆ, ಯಾರು ನಮಗಾಗಿ ಇಲ್ಲ, ಜನಪರ ಆಡಳಿತ ಇಲ್ಲದೇ ಹೋದರೆ ಏನಾಗುತ್ತದೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು.
ಅದನ್ನು ಬಿಟ್ಟು, ಜಾತಿಯ ದೌರ್ಜನ್ಯ ಮತ್ತು ಅಸಮಾನತೆಗಳನ್ನು ಮರೆ ಮಾಚಲೆಂದೇ ರೂಪಿಸಿ ಮುನ್ನೆಲೆಗೆ ತರುವ ಧಾರ್ಮಿಕ ಅಸಹನೆ ಮತ್ತು ಕೋಮುದ್ವೇಷದ ಕುತಂತ್ರಗಳಿಗೆ ಶರಣಾಗುತ್ತಾ ಹೋದರೆ ನಷ್ಟ ಯಾರಿಗೆ? ಜನ ಸಾಮಾನ್ಯರಿಗೇ ತಾನೇ?
– ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ



