ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಗಳು ಶೀಘ್ರ ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಘಟಕದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಚರ್ಚಿಸಿಯೇ ಆಯ್ಕೆ ಮಾಡುತ್ತೇವೆ. ಬೂತ್ ಸಮಿತಿ ಅಧ್ಯಕ್ಷ ಸ್ಥಾನದಿಂದ ರಾಜ್ಯ ಘಟಕದವರೆಗೂ ಚುನಾವಣೆ ನಡೆಯಲಿದೆ ಎಂದರು.
ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ ವೈ ವಿಜಯೇಂದ್ರ ಅವರನ್ನು ಕೆಳಗಿಳಿಸುವಂತೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ತಂಡ ಪಟ್ಟು ಹಿಡಿದಿದೆ. ಅಧ್ಯಕ್ಷನಾಗಿ ನಾನೇ ಮುಂದುವರಿಯುವೆ ಎಂದು ವಿಜಯೇಂದ್ರ ಬಹಿರಂಗ ಹೇಳಿಕೆ ನೀಡಿದ ಮರುದಿನವೇ ಶಿವರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ.
ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದ್ದು, ಇದೀಗ ಸಾಂಸ್ಥಿಕ ಚುನಾವಣೆಗಳ ಮೂಲಕ ಅವರನ್ನು ಆಯ್ಕೆ ಮಾಡುವ ಮೂಲಕ ವಿಜಯೇಂದ್ರ ರಾಜ್ಯದ ಚುನಾಯಿತ ಅಧ್ಯಕ್ಷ ಎಂದು ಘೋಷಿಸಲು ಸಿದ್ಧತೆ ನಡೆದಿದೆ.
ಸಾಂಸ್ಥಿಕ ಚುನಾವಣೆಯ ಸಮಯದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ವಿರುದ್ಧ ಯಾರೂ ಕೂಡ ಸ್ಪರ್ಧೆ ಮಾಡಿದಂತೆ ನೋಡಿಕೊಳ್ಳಲು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಂತ್ರ ರೂಪಿಸುತ್ತಿದ್ದಾರೆ. ಈ ಮೂಲಕ ಅವರನ್ನು ಅವಿರೋಧವಾಗಿ ಆಯ್ಕೆ ನಡೆಸುವ ಪ್ರಯತ್ನಗಳು ನಡೆದಿವೆ.
ಯಡಿಯೂರಪ್ಪ ಅವರ ಬಣದಲ್ಲಿ ಇಂತಹ ಕಾರ್ಯತಂತ್ರ ರೂಪಿಸುತ್ತಿರುವ ನಡುವೆ ಎದುರಾಳಿ ಬಣದಲ್ಲಿ ಮತ್ತೊಂದು ರೀತಿಯ ಪ್ರತಿ ತಂತ್ರ ಸಿದ್ಧಗೊಳ್ಳುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ ವೈ ವಿಜಯೇಂದ್ರ ವಿರುದ್ಧ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ ಚಿಂತನೆ ನಡೆಸಿದೆ.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಯತ್ನಾಳ್ ಬಣ ಇಂತಹ ತಂತ್ರ ರೂಪಿಸಿದೆ. ಪಕ್ಷದಲ್ಲಿ ಎಷ್ಟೋ ಬಾರಿ ಚುನಾವಣೆ ನಡೆದ ಉದಾಹರಣೆಗಳಿವೆ. ಆದ್ದರಿಂದ ವಿಜಯೇಂದ್ರ ಸ್ಪರ್ಧಿಸಿದರೆ ಅವರ ವಿರುದ್ಧ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗುವುದು. ಆದರೆ, ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ತೀರ್ಮಾನಿಸಿಲ್ಲ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಶಾಸಕ ರಮೇಶ ಜಾರಕಿಹೊಳಿ ಅವರ ಬಗ್ಗೆ ವಿಜಯೇಂದ್ರ ಟೀಕಾ ಪ್ರಹಾರ ನಡೆಸಿದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ರಮೇಶ ಜಾರಕಿಹೊಳಿ ಅವರು ಬಾಯಿ ಹಿಡಿತದಲ್ಲಿಟ್ಟುಕೊಳ್ಳಬೇಕು. ಹೀಗೆ ಬಹಿರಂಗವಾಗಿ ಮಾತನಾಡುವುದರಿಂದ ಯಡಿಯೂರಪ್ಪ ಅವರ ಲಕ್ಷಾಂತರ ಅಭಿಮಾನಿಗಳಿಗೆ ನೋವಾಗುತ್ತದೆ. ಕಾರ್ಯಕರ್ತರು ಅಸಮಾಧಾನಗೊಂಡರೆ ರಮೇಶ ಓಡಾಡುವುದೇ ಕಷ್ಟವಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಅಧ್ಯಕ್ಷರಾದವರಿಗೆ ತಾಳ್ಮೆ, ಸಮಾಧಾನ ಇರಬೇಕು. ಅದೇ ಅವರಲ್ಲಿ ಕಾಣುತ್ತಿಲ್ಲ. ಇನ್ನು ಇವರು ಎಲ್ಲರನ್ನೂ ಹೇಗೆ ಒಟ್ಟಿಗೆ ಕರೆದೊಯ್ಯುತ್ತಾರೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿದುಬಂದಿದೆ.
ರಮೇಶ ಅವರು ವೈಯಕ್ತಿಕವಾಗಿ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಟೀಕೆ ಮಾಡಿಲ್ಲ. ಅವರ ಬಗ್ಗೆ ಗೌರವ ಇಟ್ಟುಕೊಂಡೇ ಕೆಲವು ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೇ ವಿಜಯೇಂದ್ರ ವ್ಯಗ್ರರಾದರೆ ಹೇಗೆ? ಅದು ಸರಿಯಲ್ಲ ಎಂಬುದಾಗಿ ಕೆಲವು ನಾಯಕರು ಹೇಳಿದರು. ಸಭೆಯಲ್ಲಿ ರಮೇಶ ಜಾರಕಿಹೊಳಿ ಹೊರತುಪಡಿಸಿ ಗುಂಪಿನ ಉಳಿದ ನಾಯಕರು ಹಾಜರಿದ್ದರು.




