ಪ್ರಾಣಿಗಳಿಗಿಂತ ಮನುಷ್ಯ ಬಹಳ ಕ್ರೂರಿ: ಅಬ್ದುಲ್ ರಶೀದ್

1 year ago

ಆದರ್ಶ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ  ಯಶಸ್ವೀ ಸಂವಾದ ಕಾರ್ಯಕ್ರಮ

ಚಾಮರಾಜನಗರ: ಪ್ರಾಣಿಗಳಿಗೆ ಕ್ರೂರ ಬುದ್ಧಿ ಇಲ್ಲ. ಆದರೆ ಮನುಷ್ಯನಿಗೆ ಎಲ್ಲರಿಗೂ ತೊಂದರೆ ಕೊಡುವ ಬುದ್ಧಿ ಇದೆ. ಆದುದರಿಂದ ಪ್ರಾಣಿಗಳಿಗಿಂತ ಮನುಷ್ಯ ಬಹಳ ಕ್ರೂರಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಹಾಗು ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.

ತಾಲೂಕಿನ ಮಲ್ಲಯ್ಯನಪುರದ ಬಳಿಯ ಆದರ್ಶ ವಿದ್ಯಾಲಯದಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ವತಿಯಿಂದ ಕವಿ ಕಥೆಗಾರ ಅಬ್ದುಲ್ ರಶೀದ್ ಅವರೊಂದಿಗೆ ಜೇನು ಕುರುಬರ  ತಾಯಿಯೂ  ಕಾಡು ಆನೆಯ ಮಗನೂ – ಎಂಬ ಪಾಠದ ಕುರಿತು ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ಕಲಿಕೆಯು ಪಠ್ಯಕ್ಕೆ ಸೀಮಿತವಾಗಿಲ್ಲ. ಹಲವು ಪ್ರಕಾರಗಳಲ್ಲಿ ಕಲಿಕೆಯಿದೆ. ಪ್ರಕೃತಿ ಮತ್ತು ಮನುಷ್ಯರ ನಡುವೆ ಬದುಕುವಾಗ ಕ್ರಿಯಾಶೀಲತೆ ಹರಿತವಾಗಿರುತ್ತದೆ. ಕಾಡಿನ ಜನರು ಮತ್ತು ಹಳ್ಳಿ ಮಕ್ಕಳಲ್ಲಿ ಕ್ರಿಯಾಶೀಲತೆ ಜಾಸ್ತಿ. ನಗರದ ಮಕ್ಕಳಲ್ಲಿ ಇದು ಕಡಿಮೆ. ಗಿರಿಜನರ ಮಕ್ಕಳಲ್ಲಿ ಕಾಡು ರಕ್ಷಣೆ ಮಾನವೀಯತೆಯ ಗುಣವಿದೆ ಎಂದು ತಿಳಿಸಿದರು.

ಶಿಕ್ಷಣ ಕಲಿಕೆ ಎಂಬುದು ಕೇವಲ ಪಠ್ಯವಲ್ಲ, ಅದೊಂದು ಬಹು ಮಾಧ್ಯಮವಾಗಿದೆ.  ಆಡಿಯೋ ವಿಡಿಯೋ ಹಾಗೂ ಇತರ ಮಾಧ್ಯಮಗಳ ಮೂಲಕ ಕಲಿಕೆ ಸಾಧ್ಯವಿದೆ ಎಂದು ಹೇಳಿದರು. ಚಾಮರಾಜನಗರ ಜಿಲ್ಲೆ, ಪ್ರಕೃತಿ ಸೊಬಗಿನ ಸುಂದರ ತಾಣ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೆ ಅರಸ್, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಕಥೆಗಾರರು ಕವಿಗಳ ಜೊತೆ ಸಂವಾದ ಅವಶ್ಯ. ಈ ನಿಟ್ಟಿನಲ್ಲಿ ದಲಿತ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯಕ್ರಮ ಆಯೋಜಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ ದಲಿತ ಸಾಹಿತ್ಯ ಪರಿಷತ್ತು ಮಕ್ಕಳಲ್ಲಿನ ಪ್ರತಿಭಾ ಪ್ರದರ್ಶನ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.

ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಕವಯಿತ್ರಿ ಬಿ. ವಿ ಭಾರತಿ, ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶಿವಕುಮಾರ್ ಸರಗೂರು, ಉಪಾಧ್ಯಕ್ಷರಾದ ಗೋವಿಂದರಾಜು, ಕಥೆಗಾರ ಅಜಯ್ ಕುಮಾರ್ ಗುಂಬಳ್ಳಿ, ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಬಸವಣ್ಣ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿಗಳೊಂದಿಗೆ ಸಂವಾದ: 9ನೇ ತರಗತಿಗೆ ಪಾಠವಾಗಿರುವ ಕಾಲು ಚಕ್ರದಲ್ಲಿ ಬರುವ ಆನೆ ಮರಿ ಶಿವನಿಗೆ ಮತ್ತೊಂದು ಹೆಸರು ಇದೆ ಅದು ಯಾವುದು? ಎಂದು ವಿದ್ಯಾರ್ಥಿನಿ ದೀಯಾ ಪ್ರಶ್ನಿಸಿದಳು. ಇದಕ್ಕೆ ಉತ್ತರಿಸಿದ ರಶೀದ್, ಆನೆಮರಿ ಶಿವನನ್ನು ಸಾಕಿ ಸಲುಹಿದ ಗೀತಾ ಅವರು ಕೊಡಗಿನ ಭಾಗದ ಅಯ್ಯಪ್ಪ ಎಂಬ ಹೆಸರಿಟ್ಟಿದ್ದರು ಎಂದರು.

ಈಗಿನ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಏನು ಮಾಡಬೇಕು? ಯಶಸ್ವಿಯಾಗಲು ಏನು ಮಾಡಬೇಕು? ಎಂದು ನಿಖಿಲ್ ರಾಜ್ ಪ್ರಶ್ನಿಸಿದ. ಇನ್ನೊಬ್ಬರನ್ನು ಅನುಸರಿಸಿ ಯಶಸ್ವಿಯಾಗಲು ಸಾಧ್ಯವಿಲ್ಲ. ಸ್ವಂತಿಕೆಯಿಂದ ಬೆಳೆಯಬೇಕು ಆಸಕ್ತಿದಾಯಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ರಶೀದ್ ಸಲಹೆ ನೀಡಿದರು.

ಕತೆ – ಕವಿತೆ ಬರೆಯಲು ಏನು ಮಾಡಬೇಕು? ಎಂದು ವಿದ್ಯಾರ್ಥಿ ಸುಹೇದ್ ಖಾನ್ ಪ್ರಶ್ನಿಸಿದ. ಸಿಕ್ಕಿದ್ದನ್ನೆಲ್ಲಾ ಓದುವ ಕುತೂಹಲ ಇರಬೇಕು. ಆಗ ಸ್ವಂತಿಕೆಯಿಂದ ಬರೆಯಲು ಶಕ್ತಿ ಬರಲಿದೆ ಎಂದು ರಶೀದ್ ಉತ್ತರಿಸಿದರು.

ವಿದ್ಯಾರ್ಥಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಹಾರ್ಡ್ ವರ್ಕ್ ಅಥವಾ ಸ್ಮಾರ್ಟ್ ವರ್ಕ್ ಮಾಡಬೇಕೇ ? ಎಂದು ವಿದ್ಯಾರ್ಥಿ ಗೌತಮ ಪ್ರಶ್ನಿಸಿದ ಹಾರ್ಡ್ ವರ್ಕ್ ಮಾಡಬೇಕು ಎಂದು ರಶೀದ್ ಸಲಹೆ ನೀಡಿದರು.

Leave a Reply