ಚಾಮರಾಜನಗರ: ಕರ್ನಾಟಕ ಜಾನಪದ ಪರಿಷತ್ತು ನೀಡುವ 2022ನೇ ಸಾಲಿನ ರಾಜ್ಯಮಟ್ಟದ ಜಾನಪದಲೋಕ ಸೋಬಾನೆ ಚಿಕ್ಕಮ್ಮ ಪ್ರಶಸ್ತಿಗೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ವಿಕಲಚೇತನ ಕಲಾವಿದೆ ಸೋಬಾನೆ ಗೌರಮ್ಮ ಆಯ್ಕೆಯಾಗಿದ್ದಾರೆ.
ಇದೇ ಮಾರ್ಚ್ 12 ಮತ್ತು 13ರಂದು ರಾಮನಗರದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಪ್ರವಾಸಿ ಜನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಬಿ.ಮಂಜಮ್ಮ ಜೋಗತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು ಪಾರಿತೋಷಕ, ಪ್ರಶಸ್ತಿ ಪತ್ರ ಹಾಗೂ 10 ಸಾವಿರ ರೂ ನಗದನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ ಜಾನಪದ ಲೋಕದ ರಾಜ್ಯಾಧ್ಯಕ್ಷ ಡಾ.ಟಿ.ತಿಮ್ಮೇಗೌಡ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಭಾಜನರಾದ 65 ವರ್ಷದ ಹಿರಿಯ ಜಾನಪದ ಕಲಾವಿದೆ ಸೋಬಾನೆ ಹೊನ್ನೂರು ಗೌರಮ್ಮ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಅಭಿನಂದಿಸಿದ್ದಾರೆ.



