ಸಿನಿಮಾ ನೋಡುವುದಕ್ಕೂ ಮೊದಲು ‘ವಿಜ್ಞಾನ, ಸಮಾಜ, ಭೂಗೋಳ’ ಮುಂತಾದ ಪಠ್ಯಗಳನ್ನು ಓದಿಕೊಂಡು ಹೋಗಬೇಕು ಎಂದು ಎಲ್ಲಿಯೂ ಹೇಳಲಿಲ್ಲ. ಹೇಳದಿರುವುದನ್ನು ತಲೆಗೆ ಕಟ್ಟಿದರೆ ಉತ್ತರಿಸುವ ಅಗತ್ಯವೂ ಇಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಪ. ರಂಜಿತ್ ಅವರ ‘ಅಟ್ಟಕತ್ತಿ- ನಚ್ಚತ್ತಿರಂ…’ವರೆಗಿನ ಸಿನಿಮಾಗಳನ್ನು ಪೂರ್ವ ಸಿದ್ಧತೆಯಿಂದ ನೋಡಿ ಅಂತ ಯಾರೊಬ್ಬರೂ ಹೇಳಲಿಲ್ಲ, ಯಾಕೆಂದರೆ ಅದರ ಅಗತ್ಯವೇ ಇಲ್ಲ. ಆದರೆ ‘ತಂಗಲಾನ್’ ರಂಜಿತ್ ಅವರ ಮಹತ್ವಾಕಾಂಕ್ಷೆಯ, ಅನೇಕ ಪ್ರಯೋಗಗಳನ್ನು ಒಳಗೊಂಡ ಸಿನಿಮಾ. ಹೀಗಾಗಿ ಕೆಲವು ಪೂರ್ವ ಅಧ್ಯಯನ ಬೇಕು ಎಂದಷ್ಟೇ ಹೇಳಿರುವುದು.
ತಂಗಲಾನ್ ಆನೇಕ ಪದರುಗಳನ್ನು ಹೊಂದಿದೆ. ಬೌದ್ಧ ಮತ್ತು ಧಮ್ಮ, ಅದನ್ನು ನಾಶಪಡಿಸಲು ಮುಂದಾದ ಬ್ರಾಹ್ಮಣರು, ಕೊನೆಯ ಮೌರ್ಯ ಬೃಹದ್ರಥತನನ್ನು ವಂಚನೆಯಿಂದ ಕೊಲೆ ಮಾಡಿ ದ್ರೋಹದ ಮೂಲಕ ಅಧಿಕಾರ ಪಡೆದುಕೊಂಡ ಪುಷ್ಯಮಿತ್ರ ಈ ಎಲ್ಲಾ ಇತಿಹಾಸದ ಕನಿಷ್ಠ ಮಾಹಿತಿ ಬೇಕಾಗುತ್ತದೆ. ಇಲ್ಲದಿದ್ದರೆ ತಂಗಲಾನ್ ನೋಡಿದ ಬ್ರಾಹ್ಮಣರು ‘ನಮ್ಮನ್ನು ಬೌದ್ಧ ಧರ್ಮದ ವಿರೋಧಿಗಳು ಅಂತ ತೋರಿಸಿದ್ದಾರೆ’ ಎಂದು ಪ್ರತಿಭಟಿಸಿದರೆ ಪ್ರಜಾಪ್ರಭುತ್ವವಾದಿಗಳು ‘ಅವರ ಭಾವುಕತೆಯನ್ನು ಗೌರವಿಸಿ’ ಎಂದು ಬ್ರಾಹ್ಮಣರನ್ನು ಬೆಂಬಲಿಸಬಹುದೇನೋ…
ರಾಮಾನುಜಾಚಾರ್ಯರು ಅಸ್ಪೃಶ್ಯರನ್ನು ಸವರ್ಣೀಯರಾಗಿ ದೀಕ್ಷೆ ಕೊಟ್ಟು, ಜನಿವಾರ ತೊಡಿಸಿ ಶುದ್ಧೀಕರಿಸುವ ಚರಿತ್ರೆಯ ಮಾಹಿತಿ ಬೇಕಾಗುತ್ತದೆ. ಇಲ್ಲದೆ ಹೋದರೆ ಶ್ರೀವೈಷ್ಣವರು ‘ರಂಜಿತ್ ನಮ್ಮನ್ನು ಲೇವಡಿ ಮಾಡಿದ್ದಾರೆ’ ಎಂದು ಪ್ರತಿಭಟಿಸಿದರೆ ಪ್ರಜಾಪ್ರಭುತ್ವವಾದಿಗಳು ‘ಅವರ ಭಾವುಕತೆಯನ್ನು ಗೌರವಿಸಿ’ ಎಂದು ಶ್ರೀವೈಷ್ಣವರನ್ನು ಬೆಂಬಲಿಸಬಹುದೇನೋ…
ಚೋಳ ರಾಜವಂಶದ ಕಾಲಘಟ್ಟ ಮತ್ತು ಆಗಿನ ಫ್ಯೂಡಲಿಸಂ ಮತ್ತು ಸಬಲ್ಟ್ರಾನ್ ಮುಖಾಮುಖಿಯ ಚರಿತ್ರೆಯ ಮಾಹಿತಿ ಬೇಕಾಗುತ್ತದೆ. ಇಲ್ಲದೇ ಹೋದರೆ ಕನ್ನಡ ಹೋರಾಟಗಾರರು ‘ಕನ್ನಡದ ವೈರಿ ಚೋಳರನ್ನು ವೈಭವೀಕರಿಸಿದ್ದಾರೆ, ನಾವು ತಂಗಲಾನ್ ನ್ನು ವಿರೋಧಿಸುತ್ತೇವೆ’ ಎಂದು ಪ್ರತಿಭಟಿಸಿದರೆ ಪ್ರಜಾಪ್ರಭುತ್ವವಾದಿಗಳು ‘ಅವರ ಭಾವುಕತೆಯನ್ನು ಗೌರವಿಸಿ’ ಎಂದು ಅವರನ್ನು ಬೆಂಬಲಿಸಬಹುದೇನೋ…
19ನೇ ಶತಮಾನದ ಉತ್ತರ ಆರ್ಕಾಟ್ ನಲ್ಲಿ ವಾಸಿಸುತ್ತಿದ್ದ ವಂಚಿತ ಸಮುದಾಯಗಳು, ಅವರನ್ನು ಶೋಷಿಸುತ್ತಿದ್ದ ಮಧ್ಯ ಜಾತಿಗಳ ಇತಿಹಾಸವಿದೆ. ದಲಿತರು ತಮ್ಮ ಮೇಲಿನ ದೌರ್ಜನ್ಯದಿಂದ ಹೊರಬರಲು ಈಸ್ಟ್ ಇಂಡಿಯಾ ಕಂಪನಿಯ ಆಫರ್ ನ್ನು ಒಪ್ಪಿಕೊಂಡು ಹೊಸ ಬದುಕನ್ನು ಅರಸಿ ಕೆ.ಜಿ.ಎಫ್ ಗೆ ವಲಸೆ ಬರುತ್ತಾರೆ. ಇದು ಚರಿತ್ರೆ. ಬ್ರಿಟಿಷರ ಇಂಗ್ಲೀಷ್ ಇಲ್ಲಿನ ಬಹುಜನರಿಗೆ ಒಂದು ಹಂತದವರೆಗೂ ಬ್ರಾಹ್ಮಣಶಾಹಿಯಿಂದ ಬಿಡುಗಡೆಗೊಳ್ಳಲು ನೆರವಾಗಿದ್ದು ಚರಿತ್ರೆ. ಫುಲೆ ದಂಪತಿಗಳು, ಅಯೋತಿದಾಸ್, ಸೈಯದ್ ಅಹ್ಮದ್ ಖಾನ್ ಮುಂತಾದ ವಿಮೋಚಕರ ಬದುಕನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ ಮನವರಿಕೆಯಾಗುತ್ತದೆ. ಆದರೆ ಕಲಿಕೆಯ ನೆಪದಲ್ಲಿ ಬ್ರಿಟಿಷರ ಸ್ವಾರ್ಥ ಮತ್ತು ದ್ರೋಹದ ಕುರಿತು ಸಹ ಇತಿಹಾಸದಲ್ಲಿ ದಾಖಲಾಗಿದೆ. ತಂಗಲಾನ್ ನಲ್ಲಿ ಇದರ ಸಂಕೀರ್ಣತೆಯನ್ನು ಮುಖ್ಯವಾಹಿನಿಗೆ ಒಗ್ಗುವಂತೆ ಚಿತ್ರಕತೆ ರಚಿಸಿದ್ದಾರೆ.
ಹೇಗೆ ಸ್ಥಳೀಯ ಫ್ಯೂಡಲಿಸಂನಿಂದ ಬಿಡುಗಡೆ ಹೊಂದಲು ನೆರವಾಗುವ ಬ್ರಿಟಿಷರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮೂಲ ನಿವಾಸಿಗಳ ವಿರುದ್ಧವೇ ತಮ್ಮಿಂದ ಯುದ್ಧ ಮಾಡಿಸುತ್ತಾರೆ ಎಂಬ ಅರಿವಿನ ಕಥನವಿದೆ. ಇದರ ಮಾಹಿತಿ ಇಲ್ಲದೇ ಹೋದರೆ ‘ಇದು ಬಂಗಾರದ ಹಿಂದೆ ಬಿದ್ದು ದಿಕ್ಕುಪಾಲಾದವರ ಕತೆ’ ಎಂದು ಸರಳೀಕರಿಸುವ ಅಪಾಯವಿದೆ.
ಮುಖ್ಯವಾಗಿ ಮೇಲಿನ ಎಲ್ಲಾ ಆಯಾಮಗಳನ್ನು ಒಂದೇ ದಾರದಲ್ಲಿ ಹೆಣೆದ ರಂಜಿತ್ ದಲಿತ assertion ಕಥನದ ಹಾರವಾಗಿ ಕಟ್ಟಿದ್ದಾರೆ. ಮೇಲಿನ ಪದರಗಳು ತಂಗಲಾನ್ ನ ರಕ್ತಮಾಂಸವಾಗಿದ್ದರೆ ನಿರ್ದೇಶಕರು ಬಳಸಿದ ‘ಮ್ಯಾಜಿಕ್ ರಿಯಲಿಸಂ’ ತಂತ್ರ ಅದರ ಆತ್ಮವಾಗಿದೆ. ಈ ತಂತ್ರದ ಪ್ರಯೋಗಗಳ ಕುರಿತು ಮಾಹಿತಿ ಬೇಕಾಗುತ್ತದೆ. ಇಲ್ಲದೆ ಹೋದರೆ ‘ಇದೇನಿದು ಇಷ್ಟೊಂದು ಮೌಢ್ಯ, ಪುರಾಣವಿದೆ’ ಎಂದು ಟೀಕಿಸುವ ಅಪಾಯವಿದೆ.
ಇದೆಲ್ಲದರ ಆಚೆಗೂ ಚಿತ್ರಕತೆಯ ಬಿಗುವಿನಲ್ಲಿ, ಸಿನಿಮಾ ಮಂಡನೆಯಲ್ಲಿ, ಸಂಕಲನದಲ್ಲಿ, ಮುಂತಾದ ಪ್ರಾಕಾರಗಳ ಕುರಿತು ಚರ್ಚೆ ಮಾಡಲೇಬೇಕು. ಅದರ ಶಕ್ತಿ ಮತ್ತು ಮಿತಿಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲೇಬೇಕು. ಇದನ್ನು ಯಾರೂ ವಿರೋಧಿಸುವುದಿಲ್ಲ, ವಿರೋಧಿಸಬಾರದು.
ತಂಗಲಾನ್ ಪ್ರಯೋಗಾತ್ಮಕ ಮುಖ್ಯವಾಹಿನಿ ಸಿನಿಮಾ. ಅದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯಿತು…..
– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು




