ಚುನಾವಣಾ ಫಲಿತಾಂಶಗಳನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಮರ್ಶಿಸಬೇಡಿ

1 year ago

ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದಂತಹ ಉಪಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಚುನಾವಣೆಯ ಫಲಿತಾಂಶಕ್ಕೆ ವಿಶ್ಲೇಷಕರು ಜಾತಿ ಮತ್ತು ಧರ್ಮವನ್ನು ಮಾನದಂಡವನ್ನಾಗಿ ಮಾಡಿಕೊಂಡು ವಿಮರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅದರಲ್ಲೂ ವಿಶೇಷವಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವುದು ಸಹ ಗಮನಿಸಬಹುದಾಗಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕೇವಲ ಮುಸ್ಲಿಮರ ಮತಗಳಿಂದ ಗೆಲ್ಲಲು ಹೇಗೆ ತಾನೇ ಸಾಧ್ಯ? ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳು ಬಂದಿರುವುದು ಬೇರೆ ಎಲ್ಲಾ ಜಾತಿ ಮತ್ತು ಧರ್ಮದವರು ಅವರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣಕ್ಕೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.

ಅದೇ ರೀತಿಯಲ್ಲಿ ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಅಭ್ಯರ್ಥಿಗಳ ಗೆಲುವಿಗೆ ಕೇವಲ ಅಲ್ಪಸಂಖ್ಯಾತರ ಮತಗಳೆ ಕಾರಣವಾಗುವುದಿಲ್ಲ. ಬೇರೆ ವರ್ಗದ ಮತಗಳು ದೊರೆತರೆ ಮಾತ್ರವೇ ಗೆಲುವು ಸಾಧ್ಯವಾಗುತ್ತದೆ. ಇದನ್ನು ಮರೆತು ಕೇವಲ ಒಂದು ಧರ್ಮದವರ ಕಾರಣದಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಬಿಂಬಿಸುವುದು ಸರಿಯಾದ ವಿಮರ್ಶೆ ಅಲ್ಲ .

ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗಳಿಗೆ ಕೆಲವು ಜಾತಿಯ ಮತಗಳು ಸಾರಾಸಗಟಾಗಿ ಬರುತ್ತದೆ, ಆಗ ಅವರ ಗೆಲುವಿಗೆ ಕೇವಲ ಆ ಮತಗಳೊಂದೇ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಗೆಲುವಿನಲ್ಲಿ ಆ ಮತಗಳ ಪಾತ್ರ ಹೆಚ್ಚು ಇರಬಹುದು ಅಷ್ಟೇ.

ಮತದಾರರಿಗೆ ವಿಶೇಷವಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಯ ವಿಚಾರವೇ ಆಸಕ್ತಿ ಆಗಿರುತ್ತದೆಯೇ ಹೊರತು, ಬೇರೆ ಯಾವ ವಿಚಾರಗಳು ಅಲ್ಲ. ವಿಮರ್ಶಕರು ಬೇರೆಬೇರೆ ರೀತಿಯಲ್ಲಿ ವಿಮರ್ಶಗಳನ್ನ ಮಾಡಬಹುದು. ಯಾವುದೇ ಒಬ್ಬ ಅಭ್ಯರ್ಥಿ ಯಾವುದೇ ಒಂದು ಧರ್ಮ ಅಥವಾ ಜಾತಿಯ ಮತವನ್ನ ಪಡೆಯಬೇಕಾದರೆ ಆ ಜನರ ವಿಶ್ವಾಸಕ್ಕೆ ಪಾತ್ರರಾಗಿರಬೇಕಾಗುತ್ತದೆ. ಆಗ ಅಲ್ಲಿ ಜಾತಿ, ಧರ್ಮಗಳು ಪ್ರಮುಖವಾಗುವುದೇ ಇಲ್ಲ.

ಕರ್ನಾಟಕದಲ್ಲಿ ಅನೇಕ ವಿಧಾನಸಭಾ ಕ್ಷೇತ್ರದಲ್ಲಿ ಕೆಲವೇ ಕೆಲವು ಸಾವಿರ ಮತಗಳು ತಮ್ಮ ಜಾತಿಯವರು ಇಲ್ಲದ ಕ್ಷೇತ್ರಗಳಲ್ಲಿ, ಹತ್ತಾರು ಮುಖಂಡರು ಹಲವಾರು ಬಾರಿ ಚುನಾವಣೆಗಳಲ್ಲಿ ಗೆದ್ದಿರುತ್ತಾರೆ. ಇಲ್ಲಿ ಮತದಾರರ ಪ್ರಬುದ್ಧತೆಯನ್ನು ನಾವು ಯಾಕೆ ಮೆಚ್ಚುವುದಿಲ್ಲ?

ಅದೇ ರೀತಿಯಲ್ಲಿ ಪ್ರತಿಯೊಂದು ಚುನಾವಣೆಯ ಫಲಿತಾಂಶಕ್ಕೆ ತನ್ನದೇ ಆದಂತಹ ಕಾರಣಗಳಿರುತ್ತವೆ. ಸ್ಥಳೀಯ ಸಮಸ್ಯೆಗಳು, ಚುನಾವಣೆಗೆ ನಿಂತ ಅಭ್ಯರ್ಥಿಗಳ ವ್ಯಕ್ತಿತ್ವ, ಅವರ ಜನ ಸಂಪರ್ಕ, ಅವರ ಸಾಧನೆ ಮತ್ತು ಹಿನ್ನೆಲೆ ಇವುಗಳು ಸಹ ಹೆಚ್ಚು ಪರಿಣಾಮ ಬೀರುತ್ತವೆ.

ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅರ್ಥವಿಲ್ಲದ ರೀತಿಯಲ್ಲಿ ವಿಮರ್ಶೆಗಳನ್ನ ಮಾಡುತ್ತಿರುವುದರಿಂದ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಗೆ ಅಪಾಯವಾಗುತ್ತದೆ. ಚುನಾವಣೆಗಳು ಬರುತ್ತವೆ, ಚುನಾವಣೆಗಳು ಹೋಗುತ್ತವೆ, ಯಾರೋ ಒಬ್ಬರು ಗೆಲ್ಲುತ್ತಾರೆ, ಮತ್ತೆ ಯಾರೋ ಸೋಲುತ್ತಾರೆ. ಆದರೆ ಸಮಾಜದಲ್ಲಿನ ಶಾಂತಿ ನೆಮ್ಮದಿ ಮತ್ತು ಸಾಮರಸ್ಯ ಪ್ರಮುಖವಾಗಿರುತ್ತದೆ. ಯಾವುದೇ ಕಾರಣಕ್ಕೂ ಇವುಗಳು ಕೆಡಬಾರದು. ಈ ಹಿನ್ನೆಲೆಯಲ್ಲಿ ವಿಮರ್ಶಕರು ಬಹಳ ಎಚ್ಚರಿಕೆಯಿಂದ ಚುನಾವಣೆಯ ಫಲಿತಾಂಶಗಳನ್ನ ವಿಮರ್ಶೆ ಮಾಡಲಿ.

ಯಾವುದೇ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಒಂದು ಜಾತಿ ಅಥವಾ ಒಂದು  ಧರ್ಮದ ಮತಗಳಿಂದ ಖಂಡಿತವೂ ಗೆಲ್ಲಲು ಸಾಧ್ಯವಿಲ್ಲ.

ನಮಗೆ ಅನುಕೂಲವಾದರೆ ಒಂದು ರೀತಿಯ ಮಾತು, ಅನುಕೂಲವಾಗದಿದ್ದರೆ ಮತ್ತೊಂದು ರೀತಿಯ ಮಾತು, ಇಂತಹ ಇಬ್ಬದಿಯ ನೀತಿಯನ್ನು ಯಾರು ಅನುಸರಿಸಬಾರದು.

ಮತದಾರರು ಯಾರು ಸಹ ಯಾವುದೇ ಪಕ್ಷದ ಗುಲಾಮರಲ್ಲ ಮತ್ತು ಯಾವ ಮತದಾರರನ್ನು ಯಾರು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ತಮಗೆ ಇಷ್ಟ ಬಂದ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಅವರಿಗೆ ಇರುತ್ತದೆ. ಕೇವಲ ಒಂದು ಚುನಾವಣೆಗಾಗಿ ಸಮಾಜದಲ್ಲಿ ಬೇಕಿಲ್ಲದ ವಿಚಾರಗಳನ್ನು ಚರ್ಚಿಸುವ ಅವಶ್ಯಕತೆ ಇಲ್ಲ. ತಮ್ಮ ಪಕ್ಷದಿಂದ ಗೆದ್ದರೆ ಮಾತ್ರ ಅವರು ಒಂದು ಧರ್ಮದ ಪ್ರತಿನಿಧಿಗಳು, ಬೇರೆ ಪಕ್ಷದಿಂದ ನಿಂತು ಗೆದ್ದರೆ ಅವರು ಧರ್ಮ ವಿರೋಧಿಗಳು ಎಂಬ ಅಭಿಪ್ರಾಯಗಳು ಸಂಕುಚಿತವಾದಂತಹ ದೃಷ್ಟಿಕೋನದಿಂದ ತುಂಬಿರುತ್ತವೆ.

ಯಾವುದೇ ಅಭ್ಯರ್ಥಿ ಯಾವುದೇ ಪಕ್ಷದಿಂದ ಗೆದ್ದರೂ, ತನ್ನ ಮೂಲ ಆಶಯಗಳು, ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಇದನ್ನು ಎಲ್ಲರೂ ಗಮನಿಸಿರುತ್ತೇವೆ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply