ಯಾವುದೇ ಕಾರಣಕ್ಕೂ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು: ಸಿದ್ದರಾಮಯ್ಯ

1 year ago

ಬೆಂಗಳೂರು: ಯಾವುದೇ ಕಾರಣಕ್ಕೂ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು. ಒಂದು ವೇಳೆ ಒಂದಿಬ್ಬರು ಅನರ್ಹರು ಸೇರಿಕೊಂಡರೂ ಪರವಾಗಿಲ್ಲ, ಅರ್ಹರಿಗೆ ತಪ್ಪಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಪಿಎಲ್, ಎಪಿಎಲ್ ಅಂದರೇನು ? ಬಡತನ ರೇಖೆಗಿಂತ ಕೆಳಗಿರುವವರು, ಮೇಲಿರುವವರು ಎಂದು. ಬಡವರಿಗೆ ಬಿಪಿಎಲ್ ಕಾರ್ಡ್ ಬಿಟ್ಟು ಹೋಗಬಾರದು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರಿಗೆ ಸೂಚಿಸಿದರು.

ಶ್ರೀಮಂತರು, ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಬಿಪಿಎಲ್ ಗೆ ಅರ್ಹರಲ್ಲ. ಅವರಿಗೆ ಎಪಿಎಲ್ ಕೊಡಿ, ಅದಕ್ಕೂ ಕೆಲ ಸವಲತ್ತುಗಳಿವೆ ಎಂದರು.

ಯಾರಾದರೂ ಬಿಪಿಎಲ್ ನವರು ಇದ್ದರೆ ಅರ್ಜಿ ಹಾಕಿ. ಅಂತಹವರಿಗೆ ಮತ್ತೆ ಕಾರ್ಡ್ ಕೊಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಪ್ರತಿಕ್ರಿಯಿಸಿ, ಬಿಜೆಪಿಯವರು ಬಿಪಿಎಲ್ ಕಾರ್ಡ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇವರಿಗೆ ಬಡವರಿಗೆ ಅಕ್ಕಿ ಕೊಡೋದು ಸಮಾಧಾನ ಇಲ್ಲ. ಶೇ 20 – 25 ಬಿಪಿಎಲ್ ಗೆ ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ಬಡವರಲ್ಲದವರು ಅರ್ಹರಲ್ಲದವರೂ ಕೂಡ ಸೇರಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಶೇ 80ರಷ್ಟು ಬಡವರ ಪ್ರಮಾಣ ಇದೆ.‌ ಇದು ಸಾಧ್ಯವೇ? ರಾಜ್ಯದಲ್ಲಿ ಶೇ 80ರಷ್ಟು ಬಡವರು ಇದ್ದಾರಾ? ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಮೇಲಿದ್ದಾರೆಂಬ ಸತ್ಯವಾದ ಮಾಹಿತಿ ಹೊರಗೆ ಬಿಡ್ತೇನೆ. ಬಿಪಿಎಲ್ ನವರು ಯಾರೂ ಕೂಡ ಭಯಪಡಬೇಕಿಲ್ಲ. ನಿಜವಾದ ಬಿಪಿಎಲ್ ನವರಿಗೆ ಯಾರಿಗೂ ತೊಂದರೆ ಆಗುವುದಿಲ್ಲ ಎಂದರು.

ಬಡತನ ರೇಖೆಗಿಂತ ಕೆಳಗಿರುವವರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ. ಈ ವಾಸ್ತವಾಂಶವನ್ನ ಜನರಿಗೆ ತಿಳಿಸಬೇಕಿದೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ಎಲ್ಲಾ ಮಾಹಿತಿ ಕೊಡುತ್ತೇನೆ. ಈ ಮಾಹಿತಿಯನ್ನು ಸಚಿವರು, ಜಿಲ್ಲಾಧ್ಯಕ್ಷರ ಮೂಲಕ ವಾಸ್ತವಾಂಶವನ್ನ ತಿಳಿಸಬೇಕು ಎಂದು ಮನವಿ ಮಾಡಿದರು.

‌ಬಿಜೆಪಿಯವರು ಈ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ.‌ ಯಾರನ್ನಾದರೂ ಬಿಪಿಎಲ್ ನಿಂದ ಕೈಬಿಟ್ಟಿದ್ರೆ ಅಂತಹರಿಗೆ ಮತ್ತೆ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಮೀಟಿಂಗ್ ನಲ್ಲಿ ಖುದ್ದು ನನಗೆ ಹೇಳಿದ್ದಾರೆ ಎಂದರು.

Leave a Reply