100 ವರ್ಷ ಇತಿಹಾಸದ ಶಾಲೆಯ ಆವರಣದೊಳಗೆ ದರ್ಗಾ ಬರಲು ಹೇಗೆ ಸಾಧ್ಯ?: ಆರ್‌.ಅಶೋಕ

1 year ago

ಚಿಕ್ಕಬಳ್ಳಾಪುರ: ಸರ್‌ ಎಂ.ವಿಶ್ವೇಶ್ವರಯ್ಯ ಅವರು ಓದಿದ ಶಾಲೆಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಮಂಗಳವಾರ ಭೇಟಿ ನೀಡಿದರು. ಶಾಲೆಯ ಆವರಣದ ಜಾಗವನ್ನು ವಕ್ಫ್‌ ಜಾಗ ಎಂದು ಉಲ್ಲೇಖಿಸಿದ್ದನ್ನು ಖಂಡಿಸಿದ ಅವರು, 100 ವರ್ಷ ಇತಿಹಾಸದ ಶಾಲೆಯ ಆವರಣದೊಳಗೆ ದರ್ಗಾ ಬರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

ವಕ್ಫ್‌ ಬೋರ್ಡ್‌ ಎಂದರೆ ಕೊಳ್ಳಿ ದೆವ್ವ. ಇದು ಎಲ್ಲ ಕಡೆ ಬೆಂಕಿ ಹಚ್ಚುತ್ತಿದೆ. ವಿಶ್ವವಿಖ್ಯಾತ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಸಮಾಧಿ ಎಂದರೆ ಅದು ಪುಣ್ಯ ಸ್ಥಳ. ಈ ಸ್ಥಳ ಹಾಗೂ ಅವರು ಓದಿದ ಶಾಲೆ ಕೂಡ ವಕ್ಫ್‌ಗೆ ಸೇರಿದೆ ಎಂದು ಘೋಷಿಸಲಾಗಿದೆ ಎಂದರು.

ವಿಶ್ವೇಶ್ವರಯ್ಯನವರು ಒಂದರಿಂದ ನಾಲ್ಕನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು. ಈ ಶಾಲೆಯನ್ನು ಹಲವು ಕಂಪನಿಗಳು ಸಿಎಸ್‌ಆರ್‌ ಅನುದಾನದಲ್ಲಿ ಅಭಿವೃದ್ಧಿ ಮಾಡಿವೆ. ಈ ಶಾಲೆಗೆ ಕಾಂಪೌಂಡ್‌‌ ಕೂಡ ಇದೆ. ಆದರೂ ಶಾಲೆಯ ಆವರಣದೊಳಗೆ ಮಸೀದಿ ನಿರ್ಮಾಣವಾಗಿದೆ. 100 ವರ್ಷಗಳ ಇತಿಹಾಸವಿರುವ ಈ ಶಾಲೆ ವಕ್ಫ್‌ಗೆ ಸೇರಲು ಹೇಗೆ ಸಾಧ್ಯ ಎಂದರು.

ಶಾಲೆಯ ಒಳಗೆ ಬಂದು ಹಸಿರು ಬಾವುಟ ಹಾರಿಸಿ ಗೋರಿ ನಿರ್ಮಿಸಿದ್ದಾರೆ. ಇಲ್ಲಿ ಇಡೀ ವರ್ಷ ಬಾವುಟ ಹಾರಿಸುತ್ತಿದ್ದು, ಇದರಿಂದ ಮಕ್ಕಳಿಗೆ ಯಾವ ಸಂದೇಶ ಹೋಗುತ್ತದೆ? ಶಾಲೆಯ ಒಳಗೆ ಹಸಿರು ಬಾವುಟವನ್ನು ಎಲ್ಲೂ ನೋಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ತ್ರಿವರ್ಣ ಧ್ವಜದ ಬಗ್ಗೆ ಮಾತಾಡುತ್ತಾರೆ. ಆದರೆ ಇಲ್ಲಿ ಹಸಿರು ಬಾವುಟ ಹಾರಿಸಲು ಅವಕಾಶ ನೀಡಿದ್ದಾರೆ. ಪ್ರತಿ ದಿನ ಮಸೀದಿಯಲ್ಲಿ ಕೂಗಿದರೆ ಮಕ್ಕಳು ವ್ಯಾಸಂಗ ಮಾಡುವುದು ಹೇಗೆ? ಇದು ಮತಾಂತರಕ್ಕೆ ನೀಡುವ ಪ್ರೋತ್ಸಾಹ ಎಂದರು.

ನಾನು ಈ ಶಾಲೆಗೆ ಭೇಟಿ ನೀಡುತ್ತೇನೆ ಎಂದು ಗೊತ್ತಾದ ಕೂಡಲೇ ಪಹಣಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದು ವಿರೋಧ ಪಕ್ಷದ ಶಕ್ತಿ. ವಿಶ್ವೇಶ್ವರಯ್ಯನವರು ಕಾಲಿಟ್ಟ ಜಾಗವನ್ನು ಕಬಳಿಸಲು ವಕ್ಫ್‌ ಪ್ರಯತ್ನ ಮಾಡಿದೆ ಎಂದರು.

ಯಾವ ಪಹಣಿಯನ್ನೂ ಬದಲಾಯಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಭಾಗದ ರೈತರೊಬ್ಬರು ಮೂರು ತಲೆಮಾರಿನಿಂದ ಜಮೀನು ಹೊಂದಿದ್ದಾರೆ. ಈಗ ಅವರ ಪಹಣಿಯಲ್ಲೂ ವಕ್ಫ್‌ ಎಂದು ಹೆಸರು ಬಂದಿದೆ. ಶ್ರೀರಂಗಪಟ್ಟಣದ ಚಿಕ್ಕಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅದರ ಪಹಣಿಯಲ್ಲಿ ವಕ್ಫ್‌ ಹೆಸರು ತೆಗೆದುಹಾಕಿದ್ದಾರೆ. ಇದೇ ರೀತಿ ಎಲ್ಲ ಆಸ್ತಿಗಳಲ್ಲೂ ಬದಲಾವಣೆ ಮಾಡಬೇಕು ಎಂದರು.

Leave a Reply