#SayNoToSanskrit ಭಾರತಮಟ್ಟದಲ್ಲಿ ಐದನೇ ಸ್ಥಾನದಲ್ಲಿ ಟ್ರೆಂಡ್
ಸಂಸ್ಕೃತ ವಿರೋಧಿಸಿ ಕರವೇ ಅಭಿಯಾನಕ್ಕೆ ನೆಟ್ಟಿಗರ ಬೆಂಬಲ
ಬೆಂಗಳೂರು: ರಾಜ್ಯದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಿರಲಿಲ್ಲ. ಕನ್ನಡಿಗರ ಮೇಲೆ ಪರನುಡಿಯನ್ನು ಹೇರುವ ಇಂಥ ಯತ್ನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ಸರ್ಕಾರ ಏನೇ ಬಲಪ್ರಯೋಗ ಮಾಡಿದರೂ ವಿಶ್ವವಿದ್ಯಾಲಯ ಆರಂಭಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಕನ್ನಡ ನುಡಿಯನ್ನು ಹಿಂದಕ್ಕೆ ತಳ್ಳುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ 16-1-2022 ಬೆಳಿಗ್ಗೆ 11 ಗಂಟೆಯಿಂದ ಇಡೀ ದಿನ ಟ್ವಿಟರ್ ಅಭಿಯಾನ ನಡೆಸುವ ಮೂಲಕ ಬಹುದೊಡ್ಡ ಹೋರಾಟವನ್ನು ಆರಂಭಿಸಲಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಹಂತದಲ್ಲಿ ಸಂಸ್ಕೃತ ವಿವಿ ಸ್ಥಾಪನೆ ಹಿನ್ನೆಲೆಯ ಹುನ್ನಾರಗಳನ್ನು ಬಯಲಿಗೆಳೆದು ಜನಜಾಗೃತಿ ನಡೆಸಲಾಗುವುದು. ಮುಂದೆ ಹಂತಹಂತವಾಗಿ ಇಡೀ ರಾಜ್ಯದ ಎಲ್ಲೆಡೆ ಬೀದಿಹೋರಾಟಗಳನ್ನು ಸಂಘಟಿಸಲಾಗುವುದು. ಸರ್ಕಾರ ಸಂಸ್ಕೃತ ವಿವಿ ರದ್ದುಗೊಳಿಸದಿದ್ದರೆ ಅನಿವಾರ್ಯವಾಗಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಮಾಗಡಿ ಸಮೀಪ ನೂರು ಎಕರೆ ಜಾಗವನ್ನು ಸಂಸ್ಕೃತ ವಿವಿಗಾಗಿ ನೀಡಲಾಗಿದೆ. 359 ಕೋಟಿ ರುಪಾಯಿಗಳನ್ನು ಈಗಾಗಲೇ ನೀಡಲಾಗಿದೆ. ಇನ್ನೂ ಸಾವಿರಾರು ಕೋಟಿ ರುಪಾಯಿ ನಮ್ಮ ಹಣವನ್ನು ಕೊಡುವ ಸಾಧ್ಯತೆ ಇದೆ. ಸರ್ಕಾರ ಈ ಎಲ್ಲ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಂಪಿಯಲ್ಲಿನ ಕನ್ನಡ ವಿವಿಯ ಸಿಬ್ಬಂದಿಗೆ ಹಣಕೊಡಲೂ ಸಹ ಇದೇ ಸರ್ಕಾರ ಹಣವಿಲ್ಲವೆಂಬ ಸಬೂಬು ನೀಡುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ, ಹೋರಾಟ ನಡೆಸಿ ಅನುದಾನ ಕೊಡಿಸಬೇಕಾಯಿತು. ಕನ್ನಡ ವಿವಿಗೆ ಇಲ್ಲದ ಹಣ ಸಂಸ್ಕೃತ ವಿವಿಗೆ ಎಲ್ಲಿಂದ ಬಂತು? ಸರ್ಕಾರ ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸ್ಕೃತ ಅಧ್ಯಾಪಕರು, ಸಂಸ್ಕೃತಕ್ಕೆ ಸಂಬಂಧಪಟ್ಟ ಸಂಸ್ಥೆಗಳು ನ್ಯಾಯಲಯಕ್ಕೆ ಹೋಗಿ ಪದವಿ ಹಂತದಲ್ಲಿ ಕನ್ನಡ ಕಲಿಕೆಗೆ ಅಡ್ಡಿಯಾಗಿವೆ. ಇವರೆಲ್ಲ ಯಾರು, ಈ ಸಂಚುಕೂಟದ ಹುನ್ನಾರಗಳೇನು, ಇವರ ಹಿಂದೆ ಯಾರಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿದೆ ಎಂದಿದ್ದಾರೆ.
ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು. ಕನ್ನಡವನ್ನು ಕತ್ತುಹಿಸುಕುವ ಯಾವುದೇ ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಇಂಥವರಿಗೆ ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ ಹಲವು ರೀತಿಯಲ್ಲಿ ಪಾಠ ಕಲಿಸಿದ್ದೇವೆ. ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡಕ್ಕೆ ದ್ರೋಹ ಎಸಗುವವರು ಮೈಮೇಲೆ ಪ್ರಜ್ಞೆ ಇಟ್ಟುಕೊಂಡಿರಲಿ ಎಂದಿದ್ದಾರೆ.
ಟ್ವಿಟರ್ ಅಭಿಯಾನದಲ್ಲಿ ಎಲ್ಲ ಕನ್ನಡದ ಮನಸುಗಳೂ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ. ಇದು ದೊಡ್ಡ ಚಳವಳಿಯ ಸಣ್ಣ ಆರಂಭವಷ್ಟೆ. ನಾವು ಸಾಗಬೇಕಾದ ಹಾದಿ ದೂರವಿದೆ. ಕನ್ನಡದ ಜನತೆ ಸಂಸ್ಕೃತಪ್ರಿಯರ ಹುನ್ನಾರಗಳನ್ನು ಅರಿತು ಹೋರಾಡಲೇಬೇಕಾದ ಅನಿವಾರ್ಯತೆ ಈಗ ಉಂಟಾಗಿದೆ ಎಂದು ಕರೆ ನೀಡಿದ್ದಾರೆ.
ಕರವೇ ನೀಡಿರುವ ಟ್ವಿಟರ್ ಅಭಿಯಾನಕ್ಕೆ ನೆಟ್ಟಿಗರು ಬೆಂಬಲ ನೀಡಿದ್ದು, ಬೆಳಿಗ್ಗೆ 11.30ರ ಹೊತ್ತಿಗೆ #SayNoToSanskrit ಭಾರತಮಟ್ಟದಲ್ಲಿ ಐದನೇ ಸ್ಥಾನದಲ್ಲಿ ಟ್ರೆಂಡ್ ಆಗಿದೆ.




