ಸಂಸ್ಕೃತ ವಿವಿ ಬೇಡ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ

4 years ago

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಇಂದು ಕೈಗೊಂಡಿದ್ದ #ಸಂಸ್ಕೃತವಿವಿಬೇಡ #SayNoToSanskrit ಟ್ವಿಟರ್ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಸಾವಿರಾರು ಕನ್ನಡಿಗರು ಸಂಸ್ಕೃತ ವಿವಿ ಸ್ಥಾಪನೆ ವಿರುದ್ಧ ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾಡಿರುವ ಕೆಲವು ಟ್ವೀಟ್ ಗಳು ಇಲ್ಲಿವೆ.

ಕನ್ನಡದ ಮಕ್ಕಳಿಗೆ ಕನ್ನಡದ ಬದಲು ಸಂಸ್ಕೃತವನ್ನು ಕಲಿಸುವ ದೊಡ್ಡ ಹುನ್ನಾರ, ಪಿತೂರಿಯನ್ನು ನಾವು ಗಮನಿಸುತ್ತಿದ್ದೇವೆ. ಸಂಸ್ಕೃತದ ಸಂಸ್ಥೆಗಳು, ಅಧ್ಯಾಪಕರು ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿರುವುದು ಇದಕ್ಕೆ ತಾಜಾ ಉದಾಹರಣೆ. ಇವರನ್ನು ಸಂಚನ್ನು ವಿಫಲಗೊಳಿಸೋಣ.

#ಸಂಸ್ಕೃತವಿವಿಬೇಡ #SayNoToSanskrit

ಭಾರತ ಒಕ್ಕೂಟದಲ್ಲಿ ಎಲ್ಲ ರಾಜ್ಯಗಳೂ ತಮ್ಮ ನುಡಿಗಳನ್ನು ಪೊರೆಯುವ, ಬೆಳೆಸುವ ಹೊಣೆಗಾರಿಕೆಯನ್ನು ಹೊಂದಿವೆ. ಇದಕ್ಕೆ ಅಡ್ಡ ಬರುವವರು ಭಾರತದ ನುಡಿವೈವಿಧ್ಯದ ವಿರೋಧಿಗಳು. ಒಂದೆರಡು ನುಡಿಗಳಿಗೆ ಹೊರತಾಗಿ ಎಲ್ಲ ನುಡಿಗಳೂ ನಾಶವಾಗಬೇಕೆಂದು ಬಯಸುವವರು. ಇಂಥವರ ವಿರುದ್ಧ ನಾವು ಒಗ್ಗಟ್ಟಾಗಬೇಕಿದೆ.

#ಸಂಸ್ಕೃತವಿವಿಬೇಡ #SayNoToSanskrit

ಸಂಸ್ಕೃತ ಅಧ್ಯಾಪಕರುಗಳಿಗೆ ಕನ್ನಡ ನುಡಿಯ ಮೇಲೆ ಯಾಕಿಷ್ಟು ದ್ವೇಷ? ಯಾಕೆ ಇವರು ಕನ್ನಡ ನುಡಿಯನ್ನು ಕನ್ನಡದ ಮಕ್ಕಳಿಗೆ ಕಲಿಸಬಾರದು ಎಂದು ಹಠ ಹಿಡಿದಿದ್ದಾರೆ? ಇದು ದೊಡ್ಡ ಸಂಚಿನ ಭಾಗ. ಕನ್ನಡದ ಜಾಗದಲ್ಲಿ ಸಂಸ್ಕೃತವನ್ನು ತಂದು ತುರುಕುವ ಪಿತೂರಿ ನಡೆಯುತ್ತಿದೆ. ಕನ್ನಡಿಗರು ಈಗ ಎದ್ದುನಿಲ್ಲಲೇಬೇಕಾದ ಕಾಲ.

#ಸಂಸ್ಕೃತವಿವಿಬೇಡ #SayNoToSanskrit

ಕನ್ನಡದ ವಿರುದ್ಧ ಕೋರ್ಟಿಗೆ ಹೋದವರನ್ನು ಸರ್ಕಾರದ ಮುಖ್ಯಸ್ಥರು ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಬಹುದಿತ್ತು. ಕೋರ್ಟಿಗೆ ಹೋದವರೆಲ್ಲ ಸರ್ಕಾರ ನಡೆಸುತ್ತಿರುವ ಪಕ್ಷದ ಜತೆ ಕರುಳುಬಳ್ಳಿ ನಂಟು ಹೊಂದಿದವರು. ಹೀಗಾಗಿ ಸರ್ಕಾರವೇ ಈ ಪಿತೂರಿಯ ಭಾಗವಾಗಿದೆ ಎಂಬ ಅನುಮಾನ ನಮ್ಮದು.

#ಸಂಸ್ಕೃತವಿವಿಬೇಡ #SayNoToSanskrit

ಒಂದು ಕಡೆ ಹೊಸ ಶಿಕ್ಷಣ ನೀತಿ ಅನ್ವಯ ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡುವುದು. ಇನ್ನೊಂದೆಡೆ ತಮ್ಮ ಕರುಳುಬಳ್ಳಿ ಸಂಘಟನೆಗಳಿಂದ  ಕೋರ್ಟಿಗೆ ಅರ್ಜಿ ಹಾಕಿಸುವುದು. ಈ ಕಳ್ಳಾಟಗಳು ಏಕೆ‌? ನಾವು ಕನ್ನಡದ ವಿರುದ್ಧ ಇದ್ದೇವೆ ಎಂದು ಸರ್ಕಾರವೇ ಘೋಷಿಸಿಕೊಂಡುಬಿಡಲಿ.

#ಸಂಸ್ಕೃತವಿವಿಬೇಡ #SayNoToSanskrit

ಗೋಕಾಕ್ ಚಳವಳಿ ಯಾಕೆ ನಡೆಯಿತೆಂಬುದನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆಗಲೂ ಕೂಡಾ ಇದೇ ಸಂಸ್ಕೃತದ ಯಜಮಾನಿಕೆ ಮಾಡಲು ಬಯಸುವವರು ಕನ್ನಡದ ಬದಲು ಸಂಸ್ಕೃತ ಕಲಿಕೆಯ ಪಿತೂರಿ ನಡೆಸಿದ್ದರು. ಇಡೀ ರಾಜ್ಯವೇ ಆಗ ಒಂದಾಗಿ ಹೋರಾಡಿತ್ತು. ಈಗ ಅಂಥದ್ದೇ ಕಾಲ ಬಂದಿದೆ.

#ಸಂಸ್ಕೃತವಿವಿಬೇಡ #SayNoToSanskrit

ಅಂದು ಗೋಕಾಕ್ ಚಳವಳಿಯಲ್ಲಿ ವರನಟ ಡಾ.ರಾಜಕುಮಾರ್ ಅವರು ಭಾಗವಹಿಸಿ ದೊಡ್ಡ ಸಂಚಲನ ಮೂಡಿಸಿದ್ದರು. ಈಗಲೂ ಅಂಥದ್ದೇ ಆಪತ್ತು ಎದುರಾಗಿರುವುದರಿಂದ ಕನ್ನಡದ ಸಾಹಿತಿ, ಕಲಾವಿದರು, ಚಿಂತಕರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಎಚ್ಚೆತ್ತುಕೊಂಡು ಈ ಪಿತೂರಿಗಳ ವಿರುದ್ಧ ನಿಲ್ಲಬೇಕಿದೆ.

#ಸಂಸ್ಕೃತವಿವಿಬೇಡ #SayNoToSanskrit

ದೇಶದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಸಂಸ್ಕೃತ ನುಡಿ ಆಡುವವರ ಸಂಖ್ಯೆ ಜಗತ್ತಲ್ಲಿ ಕೇವಲ 24,000. ಇಷ್ಟು ಜನರ ನುಡಿಗೆ ಹದಿನಾರು ವಿಶ್ವವಿದ್ಯಾಲಯಗಳ ಅಗತ್ಯವಾದರೂ ಏನಿತ್ತು. ನೆನಪಿಟ್ಟುಕೊಳ್ಳಿ, ಏಳು ಕೋಟಿ ಜನರು ಮಾತನಾಡುವ ಕನ್ನಡ ನುಡಿಗೆಂದು ಇರುವುದು ಒಂದೇ ವಿಶ್ವವಿದ್ಯಾಲಯ.

#ಸಂಸ್ಕೃತವಿವಿಬೇಡ #SayNoToSanskrit

ಜಗತ್ತಿನ ಒಂದೇ ಒಂದು ಕನ್ನಡ ವಿವಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಸಿಬ್ಬಂದಿಗೆ ಸಂಬಳ ಕೊಡಲೂ ಹಣವಿಲ್ಲ. ಕರವೇ ದೊಡ್ಡ ಅಭಿಯಾನ ನಡೆಸಿ, ಅನುದಾನ ಕೊಡುವಂತೆ ಒತ್ತಾಯಿಸಿದ ಮೇಲೆ ಒಂದಷ್ಟು ದುಡ್ಡು ಕೊಡಲಾಯಿತು. ಇದು ಸರ್ಕಾರಕ್ಕೆ ಕನ್ನಡದ ಮೇಲಿರುವ ಕಾಳಜಿ!

#ಸಂಸ್ಕೃತವಿವಿಬೇಡ #SayNoToSanskrit

ರಾಮನಗರ ಜಿಲ್ಲೆಯಲ್ಲಿ ನೂರು ಎಕರೆ ಅರಣ್ಯ ಪ್ರದೇಶವನ್ನೇ ಸಂಸ್ಕೃತ ವಿವಿಗೆ ಕೊಡಲಾಗಿದೆ. ಇರುವ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಓದಲು ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಿರುವಾಗ ಇಷ್ಟು ದೊಡ್ಡ ಜಾಗವನ್ನು ಯಾಕೆ ಕೊಡಲಾಗಿದೆ? ಇದೇ ಜಾಗದಲ್ಲಿ ಇನ್ನೊಂದು ಕನ್ನಡ ವಿವಿ ತೆರೆಯಬಹುದಿತ್ತಲ್ಲವೇ?

#ಸಂಸ್ಕೃತವಿವಿಬೇಡ #SayNoToSanskrit

ಸಂಸ್ಕೃತ ವಿವಿಗೆಂದು ರಾಜ್ಯ ಸರ್ಕಾರ 359ಕೋಟಿ ರುಪಾಯಿಗಳನ್ನು ಕೊಟ್ಟಿದೆ. ಕನ್ನಡ ವಿವಿಗೆ ಎರಡು ಕೋಟಿ ರುಪಾಯಿ ಕೊಡಲು ಹಿಂದೆಮುಂದೆ ನೋಡುವ ಸರ್ಕಾರ ಇಷ್ಟೊಂದು ಹಣವನ್ನು ಯಾರೂ ಕೇಳದೇ, ಯಾವ ಹೋರಾಟವೂ ನಡೆಯದೆ ಹೇಗೆ ನೀಡಿತು?

#ಸಂಸ್ಕೃತವಿವಿಬೇಡ #SayNoToSanskrit

ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಜಾಗವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಅನುದಾನವನ್ನೂ ಸಹ ಹಿಂದಕ್ಕೆ ಪಡೆಯಬೇಕು. ಕನ್ನಡಿಗರಿಗೆ ಸಂಸ್ಕೃತ ವಿವಿ ಬೇಕಾಗಿಲ್ಲ.

#ಸಂಸ್ಕೃತವಿವಿಬೇಡ #SayNoToSanskrit

ಸರ್ಕಾರ ಹಠಮಾರಿತನ ತೋರಿದರೆ ಕರ್ನಾಟಕ ರಕ್ಷಣಾ ವೇದಿಕೆ ಇಡೀ ರಾಜ್ಯದಾದ್ಯಂತ ಆಂದೋಲನ ಆರಂಭಿಸುತ್ತದೆ. ಇದರ ಪರಿಣಾಮವನ್ನು ಆಳುವ ಬಿಜೆಪಿ ಸರ್ಕಾರವೇ ಎದುರಿಸಬೇಕಾಗುತ್ತದೆ. ಸರ್ಕಾರ ಕನ್ನಡ ನುಡಿಯನ್ನು ಬದಿಗೆ ಸರಿಸಿ, ಸಂಸ್ಕೃತವನ್ನು ಹೇರುತ್ತಿರುವ ಕುರಿತು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ.

#ಸಂಸ್ಕೃತವಿವಿಬೇಡ #SayNoToSanskrit

ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತದೆ. ಒಂದೊಮ್ಮೆ ಸರ್ಕಾರ ನಮ್ಮ ಹಕ್ಕೊತ್ತಾಯವನ್ನು ಈಡೇರಿಸದೇಹೋದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕೈಹಾಕಬೇಕಾಗುತ್ತದೆ. ನಂತರ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ.

#ಸಂಸ್ಕೃತವಿವಿಬೇಡ #SayNoToSanskrit

Leave a Reply