ಗಮನ ಬೇರೆಡೆ ಸೆಳೆಯಲು ಮತಾಂತರ ನಿಷೇಧ ಮಸೂದೆ: ಡಿಕೆಶಿ

5 years ago

ಬೆಳಗಾವಿ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುತ್ತದೆ ಹಿಂದೂ ಸಂಸ್ಕೃತಿ. ಅದಕ್ಕೆ ಬೇಕಿರುವುದು ಪ್ರೀತಿ, ನಂಬಿಕೆಯೇ ಹೊರತು. ಜಾತಿ, ಧರ್ಮ ಎನ್ನುವ ಅನಗತ್ಯ ಲೆಕ್ಕಾಚಾರಗಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದೆ. ಇದನ್ನು ವಿರೋಧಿಸಿರುವ ಅವರು, ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಮದುವೆಯಾಗಲು ಹೆಣ್ಣು ಅಥವಾ ಗಂಡಿನ ಸಮ್ಮತಿಯಲ್ಲ ಬದಲಿಗೆ ಸರ್ಕಾರದ ಸಮ್ಮತಿ ಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮತಾಂತರ ನಿಷೇಧ ಕಾಯ್ದೆಯು ಒಂದು ಕಪ್ಪು ಚುಕ್ಕೆಯಂತಿದೆ. ಶ್ರೀ ಬಾಬಾಸಾಹೇಬ್‌ ಅಂಬೇಡ್ಕರ್‌ ಹಾಗೂ ಅವರು ರಚಿಸಿರುವ ಸಂವಿಧಾನವನ್ನು ಈ ಕಾಯ್ದೆಯು ಮೀರಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾ ಸಂಸ್ಥೆಗಳು ಬಲವಂತದ ಮತಾಂತರ ಮಾಡುತ್ತಿವೆ ಎನ್ನುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರ ಮಕ್ಕಳು ಅಂತಹ ಸಂಸ್ಥೆಗಳಲ್ಲೇ ಓದುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಸಮಾಜದ ವಿದ್ಯಾರ್ಥಿಗಳನ್ನು ಮತಾಂತರ ಮಾಡುತ್ತಿರುವುದು ಕಂಡುಬಂದರೆ ಸರ್ಕಾರದ ಅನುದಾನ ನಿಲ್ಲಿಸುವುದಾಗಿ ಕಾಯ್ದೆಯಲ್ಲಿ ಹೇಳಲಾಗಿದೆ. ಇಂಥ ಸಂಸ್ಥೆಗಳು ನಡೆಯುತ್ತಿರುವುದೇ ಸರ್ಕಾರದ ಅನುದಾನದಲ್ಲಿ ತಕ್ಷಣವೇ ಅನುದಾನ ನಿಲ್ಲಿಸಿದರೆ ಮಕ್ಕಳ ಕತೆ ಏನು ಎಂದು ಸರ್ಕಾರ ಯೋಚನೆ ಮಾಡಿದೆಯೇ? ಎಂದಿದ್ದಾರೆ.

ರಾಜ್ಯದ ಜನತೆ ಅನುಭವಿಸುತ್ತಿರುವ ಸಮಸ್ಯೆಗಳು ಹಾಗೇ ಉಳಿದಿವೆ. ಕೋವಿಡ್‌ ಪರಿಹಾರ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದವುಗಳಿಂದ ಜನ ಕಂಗೆಟ್ಟಿದ್ದಾರೆ. ವಿಧಾನಸಭೆಯಲ್ಲಿ ಅಂತಹ ಪ್ರಮುಖ ವಿಷಯಗಳು ಇತ್ಯರ್ಥವಾಗಬೇಕು ಎಂದಿದ್ದಾರೆ.

ಚುನಾವಣೆಗಳ ನಿರಂತರ ಹಿನ್ನಡೆಯಿಂದ ಕಂಗೆಟ್ಟಿರುವ ಬಿಜೆಪಿಯು ತನ್ನ ಅಜೆಂಡಾವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

Leave a Reply