ಉಪ್ಪಿನಂಗಡಿ ಅಶಾಂತಿ ಪ್ರಕರಣ: ಪಿಎಫ್‌ಐ, ಸಂಘ ಪರಿವಾರ ಮತ್ತು ಪೊಲೀಸ್ ಇಲಾಖೆ ಸಮಾನ ಹೊಣೆಗಾರರು: ಸಿಪಿಐ(ಎಂ)

4 years ago

ಮಂಗಳೂರು:   ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಸಂಭವಿಸಿದ ಲಾಠಿಚಾರ್ಜ್ ಮತ್ತು ಅಶಾಂತಿಯ ಪ್ರಕರಣಗಳು ಜಿಲ್ಲೆಯಲ್ಲಿ ಕಳೆದ 4 ತಿಂಗಳಿನಿಂದ ನಡೆದುಕೊಂಡು ಬರುತ್ತಿರುವ ಸಂಘ ಪರಿವಾರ ಮತ್ತು ಪಿಎಫ್‌ಐ ಸಂಘಟನೆಗಳು ಸಂಯೋಜಿಸಿ ನಿರ್ದೇಶಿಸುತ್ತಿರುವ ಮತೀಯ ಹುನ್ನಾರ ಮತ್ತು ಕೋಮು ಗಲಭೆಗೆ ವೇದಿಕೆ ನಿರ್ಮಿಸುವ ಪೂರ್ವ ಯೋಜಿತ ಕೃತ್ಯಗಳ ಮುಂದುವರಿದ ಭಾಗವೇ ಆಗಿದೆ ಸಿ.ಪಿ.ಐ(ಎಂ) ದ.ಕ.ಜಿಲ್ಲಾ ಸಮಿತಿ ಕಾರ‍್ಯದರ್ಶಿ ಕೆ.ಯಾದವ ಶೆಟ್ಟಿ ಆರೋಪಿಸಿದರು.

ವಿದ್ಯಾರ್ಥಿಗಳ ಮೇಲೆ ಹಲ್ಲೆ, ಭಿನ್ನ ಧರ್ಮಿಯ ಸಹಭೋಜನ ಮತ್ತು ಸಹಕೂಟಗಳ ಮೇಲೆ ಗುಂಪು ಹಲ್ಲೆ, ಪರಸ್ಪರ ವ್ಯಾಪಾರ-ವ್ಯವಹಾರಗಳ ಮೇಲೆ ದಾಂಧಲೆ, ಲವ್ ಜಿಹಾದ್ ಕಟ್ಟುಕತೆಗಳು, ದನ ಕಳ್ಳತನ ಮತ್ತು ನಾಗಬನ ಧ್ವಂಸದ ಪ್ರಕರಣ ಹಾಗೂ ಪೂಜಾ ಸ್ಥಳಗಳ ಅಪವಿತ್ರ ಇವೇ ಮೊದಲಾದ ಸಮಾಜ ಬಾಹಿರ ಕೃತ್ಯಗಳು ಒಂದಾದ ಮೇಲೆ ಒಂದರಂತೆ ಜಿಲ್ಲೆಯಲ್ಲಿ ಕಳೆದ 4 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿವೆ ಎಂದರು.

ಇವುಗಳ ಹಿಂದೆ ಸಂಘ ಪರಿವಾರದ ಸಂಘಟನೆಗಳ ಸಿದ್ಧಾಂತ ಮತ್ತು ಕಾರ‍್ಯಕರ್ತರು ಭಾಗಿಯಾಗಿದ್ದಾರೆ. ಅದೇ ರೀತಿ ಅದಕ್ಕೆ ಪ್ರತಿಯಾಗಿ ಪಿ.ಎಫ್.ಐ.ನ ಸಿದ್ಧಾಂತದಿಂದ ಪ್ರಭಾವಿತರಾದ ಕಾರ‍್ಯಕರ್ತರು ಕ್ರಿಯೆಗೆ ಪ್ರತಿಕ್ರಿಯೆ ಎಂಬ ನೆಲೆಯಲ್ಲಿ ಸಕ್ರಿಯವಾಗಿ ಸಮಾಜ ಬಾಹಿರ ಶಾಂತಿ ಭಂಗದ ಕೃತ್ಯಗಳಲ್ಲಿ ಭಾಗವಹಿಸಿ ಕಾನೂನನ್ನು ಕೈಗೆತ್ತಿಕೊಂಡಿರುತ್ತಾರೆ ಎಂದರು.

ಇಂತಹ ಸಂದರ್ಭಗಳಲ್ಲಿ ನೆಲದ ಕಾನೂನನ್ನು ಎತ್ತಿ ಹಿಡಿದು ಕಾನೂನಿನನ್ವಯ ಕಾರ ಪ್ರವೃತ್ತರಾಗಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಮತ್ತೆ ಇದೇ ಸಂಘಟನೆಗಳ ನಾಯಕರೊಂದಿಗೆ ಒಪ್ಪಂದ ನಡೆಸಿ ಅಪರಾಧಿಗಳನ್ನು ಹಸ್ತಾಂತರ ಮತ್ತು ಕೆಲವು ಘಟನೆಗಳಲ್ಲಿ ಅಪರಾಧಿಗಳ ಅದಲು ಬದಲಿನಂತಹ ಪರಸ್ಪರ ಸಂಯೋಜನೆಯನ್ನು ರೂಪಿಸುವ ಮೂಲಕ ಸಂಘ ಪರಿವಾರ ಮತ್ತು ಪಿಎಫ್‌ಐನಂತಹ ಸಮಾಜಬಾಹಿರ ಸಂಘಟನೆಗಳಿಗೆ ಕುಮ್ಮಕ್ಕು ನೀಡಿರುವುದನ್ನು ಕಾಣಬಹುದು. ಆದುದರಿಂದ ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆಗಳು ಈ ಎರಡು ಸಮಾಜ ಬಾಹಿರ ಕೃತ್ಯಗಳ ವಾರಸುದಾರ ಸಂಘಟನೆಗಳೊಂದಿಗೆ ಪೊಲೀಸ್ ಇಲಾಖೆಯೂ ಹೊಣೆಯಾಗಿದೆ ಎಂದು ಆರೋಪಿಸಿದರು.

ಸಂಘ ಪರಿವಾರ ಹಾಗೂ ಪಿಎಫ್‌ಐ ಇತ್ತೀಚಿನ ಪೊಲೀಸ್ ಠಾಣೆಗಳ ಮುಂಭಾಗದ ಪ್ರತಿಭಟನೆಯಲ್ಲಿ ಭಜನೆ, ನಮಾಜಿನಂತಹ ಪವಿತ್ರ ಧಾರ್ಮಿಕ ಆಚರಣೆಗಳನ್ನು ಬಳಕೆ ಮಾಡಿರುವುದು ಸಮಾಜದಲ್ಲಿ ಮತೀಯ ದ್ರುವೀಕರಣ ಮತ್ತಷ್ಟು ಆಳಗೊಳಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಇಂತಹ ಅಪಾಯಕಾರಿ ಬೆಳವಣಿಗೆಗಳನ್ನು ಜನತೆ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ ಎಂದು ಕರೆ ನೀಡಿದರು.

ಜಿಲ್ಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೂದಿಮುಚ್ಚಿದ ಕೆಂಡದಂತಿರುವ ಕೋಮು ಉದ್ವಿಘ್ನತೆಯ ಸಮಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ನೀಡಿರುವ ಹೇಳಿಕೆ ಸಮಾಜ ಬಾಹಿರ ಕೃತ್ಯಗಳಲ್ಲಿರುವ ಸಂಘ ಪರಿವಾರದ ಕಾರ‍್ಯಕರ್ತರನ್ನು ಹುರಿದುಂಬಿಸಿದೆ ಎಂದರು.

ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಮತ್ತು ಬಿಜೆಪಿ ಪಕ್ಷದ ಸಂಸದರು, ಶಾಸಕರು ಮತ್ತು ನಾಯಕರು ಪೊಲೀಸ್ ಇಲಾಖೆಯ ಸ್ವತಂತ್ರ ಕಾರ‍್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದ್ದಾರೆ. ಇದರ ಪರಿಣಾಮವಾಗಿ ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಆಚರಣೆಯು ಸಂಘ ಪರಿವಾರದ ಡ್ರೆಸ್ ಕೋಡಿನೊಂದಿಗೆ ನಡೆದಿದೆ. ಇದನ್ನು ಬಲವಾಗಿ ಉನ್ನತ ಪೊಲೀಸರು ಬೆಂಬಲಿಸಿ ಪ್ರತಿಪಾದಿಸಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು ಎಂದರು.

ಅದೇ ರೀತಿ ಇತ್ತೀಚೆಗೆ ಕರಾವಳಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಂಘ ಪರಿವಾರ ಪ್ರತಿಭಟನೆಯ ಭಾಗವಾಗಿ ಭಜನೆ ಹಾಡುವ ಕ್ರಮವನ್ನು ಪೊಲೀಸರು ತಡೆಯದಿರುವುದು. ಇದೇ ರೀತಿಯಲ್ಲಿ ಉಪ್ಪಿನಂಗಡಿ ಠಾಣೆ ಆವರಣದಲ್ಲಿ ಪ್ರತಿಭಟನಾಕಾರರು ಧಾರ್ಮಿಕ ನಮಾಜನ್ನು ಕೂಡಾ ಮಾಡಲು ಅವಕಾಶ ನೀಡಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯವಾಗಿದೆ ಎಂದರು.

ಅಲ್ಲದೆ ಕೆಲವು ಪೊಲೀಸ್ ಠಾಣೆಗಳಲ್ಲಿ ಗರ್ಭಿಣೆ ಮಹಿಳೆಯರಿಗೆ ಸಂಪ್ರದಾಯದ ಹಿನ್ನೆಲೆಯ ಸೀಮಂತ ಇವೇ ಮೊದಲಾದ ಕಾರ‍್ಯಕ್ರಮಗಳನ್ನು ನಡೆಸುವ ಮೂಲಕ ಪೊಲೀಸ್ ಕರ್ತವ್ಯದ ಪರಿಧಿಯನ್ನು ದಾಟಿರುವ ಪ್ರಕರಣಗಳು ನಡೆದಿವೆ. ಈ ರೀತಿಯ ಸಂಘ ಪರಿವಾರದ ಕ್ರಿಯೆ ಪಿಎಫ್‌ಐನಂತಹ ಸಂಘಟನೆಗಳ ಪ್ರತಿತಂತ್ರ ಮತ್ತು ಪೊಲೀಸರ ಓಲೈಕೆಯ ಅಧಿಕಾರ ತಂತ್ರಗಳು ಜಿಲ್ಲೆಯನ್ನು ಕೋಮು ಉದ್ವಿಘ್ನತೆ ಅಗ್ನಿ ಕುಂಡದ ಬಳಿ ತಂದಿರಿಸಿದೆ ಎಂದರು.

ಜಿಲ್ಲೆಯ ಶಾಂತಿ, ಸಾಮರಸ್ಯ, ಸಹಬಾಳ್ವೆ ಮರೀಚಿಕೆಯಾಗಿದೆ. ಕೊರೋನಾ ಸಾಂಕ್ರಮಿಕದಿಂದ ಮತ್ತು ಕೇಂದ್ರ, ರಾಜ್ಯ ಸರಕಾರದ ತಪ್ಪು ಆರ್ಥಿಕ ನೀತಿ, ಕೈಗಾರಿಕಾ ನೀತಿಯಿಂದ ವ್ಯಾಪಕ ಬಡತನ, ಹಸಿವು, ಬೆಲೆ ಏರಿಕೆ, ನಿರುದ್ಯೋಗದಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆಯರ ಮೇಲೆ, ಅಪ್ರಾಪ್ತ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಸಂಘ ಪರಿವಾರದ ಸಂಘಟನೆಗಳು ಮತ್ತು ಪಿ.ಎಫ್.ಐ. ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯಲು ಕೋಮು ದ್ವೇಷದ ವಿಷ ಪ್ರಸರಿಸುತ್ತಿರುವುದು ತೀವ್ರ ಖಂಡನೀಯ ಎಂದರು.

ಜಿಲ್ಲೆಯ ಜಾತ್ಯತೀತ ಪರಂಪರೆ, ಶಾಂತಿ ಮತ್ತು ಅಭಿವೃದ್ಧಿಗಾಗಿ ಪ್ರಗತಿಪರ ಶಕ್ತಿಗಳೊಂದಿಗೆ ಸೇರಿ ಪರಸ್ಪರ ಶಾಂತಿ ಸೌಹಾರ್ದತೆಗಾಗಿ ಕಾರ‍್ಯಕ್ರಮ ರೂಪಿಸುವುದಾಗಿ ಅವರು ಹೇಳಿದರು.

Leave a Reply