ಧಾರವಾಡ: ಆಧುನಿಕ ತಂತ್ರಜ್ಞಾನ ಇಂದಿನ ದಿನಗಳಲ್ಲಿ ಅಗತ್ಯವಾಗಿದ್ದು ಇದರಿಂದಾಗಿ ಹೊಸ ಹೊಸ ಬದಲಾವಣೆಯನ್ನು ಕಾಣುತ್ತಿದ್ದೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ವಿದ್ಯಾಶಂಕರ ಎಸ್. ಹೇಳಿದರು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯಲ್ಲಿ ಆಯೋಜಿಸಲಾದ ಅಭಿಯಂತರರ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು, ಅಭಿಯಂತರರು ಮರುಸೃಷ್ಠಿಕರ್ತರು ಮಾತ್ರವಲ್ಲ, ತಂತ್ರಜ್ಞಾನ ಜಗತ್ತಿನ ಸೃಷ್ಠಿಕರ್ತರಾಗಿದ್ದಾರೆ. ಸ್ವಂತಂತ್ರ ಭಾರತದ ಶತಮಾನೋತ್ಸವದ ವೇಳೆಗೆ ವಿಕಸಿತ ಭಾರತ ಕನಸು ನನಸಾಗುವುದು ಆಧುನಿಕ ತಂತ್ರಜ್ಞಾನದ ಮೂಲಕ ಮಾತ್ರ ಸಾಧ್ಯವಾಗುವುದು ಎಂದರು.
ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಅವಶ್ಯಕತೆ ಇದೆ. ಇಂಥ ವಿನ್ಯಾಸಗಳು ಹವಾಮಾನ ಚಕ್ರ ಬದಲಾವಣೆಗೆ ಅನುಗುಣವಾದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತವೆ. ಸುಸ್ಥಿರ ಬದುಕಿಗಾಗಿ ನೈಸರ್ಗಿಕ ಸಂಪನ್ಮೂಲಗಳಾದ ಕೃಷಿ ಭೂಮಿ, ಅರಣ್ಯ, ನೆಲ, ಜಲ, ಗಾಳಿ ಸಂರಕ್ಷಣೆ ಗಮನದಲ್ಲಿರಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಅವಶ್ಯಕತೆ ಇದೆ ಎಂದರು.
ಇತ್ತೀಚೆಗೆ ತುಂಗಭದ್ರ ಜಲಾಶಯದ ಗೇಟ್ನ ದುರಸ್ಥಿಯಲ್ಲಿ ಭಾಗವಹಿಸಿದ್ದ, ಹೈದ್ರಾಬಾದ್ನ ರಾಷ್ಟ್ರ ಮಟ್ಟದ ಹೈಡ್ರಾಲಿಕ್ ಗೇಟ್ ಮತ್ತು ನಿರ್ವಹಣಾ ಉಪಕರಣಗಳ ತಜ್ಞಾ ಇಂಜಿನೀಯರ ಕನ್ನಯ್ಯ ನಾಯ್ಡು, ಅವರು ಮಾತನಾಡಿ, ಕರ್ನಾಟಕ ರಾಜ್ಯದ ನೀರಾವರಿ ಹಾಗೂ ನನ್ನ ವೈಯಕ್ತಿಕ ವೃತ್ತಿ ಜೀವನಕ್ಕೂ ಅವಿನಾಭಾವ ಸಂಬಂಧವಿದೆ ಎಂದರು. ದಕ್ಷಿಣ ಭಾರತದ ರೈತಾಪಿ ನನ್ನ ಕುಟುಂಬವಿದ್ದಂತೆ. ರೈತರ ಅನುಕೂಲಕ್ಕಾಗಿ ರಾಜ್ಯದ ತುಂಗಭದ್ರಾ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು ನಿರ್ಮಾಣ, ನೀರಾವರಿ ವ್ಯವಸ್ಥೆಯ ನಿರ್ಮಾಣ ಮತ್ತು ನಿರ್ವಹಣೆಗಳ ವಿನ್ಯಾಸ ರೂಪಿಸಲು ಕೈಜೋಡಿಸಿದ್ದೇವೆ ಎಂದರು.
ತುಂಗಭದ್ರಾ ಅಣೆಕಟ್ಟಿನ ಗೇಟ್ನ ದುರಸ್ಥಿ ಮಾಡಿ ಆಣೆಕಟ್ಟಿನ ಅಗಾಧ ಪ್ರಮಾಣದ ನೀರಿನ್ನು ಸಂರಕ್ಷಿಸಿದ್ದ ಪ್ರಯತ್ನದ ಘಟನಾವಳಿಗಳನ್ನು ಸ್ಮರಿಸಿಕೊಂಡು. ಈ ಅವಕಾಶವನ್ನು ನೀಡಿದ ಕರ್ನಾಟಕ ಹಾಗೂ ಆಂಧ್ರ ಸರ್ಕಾರಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಕರ್ನಾಟಕ, ಗುಜರಾತ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳ ನೀರಾವರಿ ಯೋಜನೆಗಳ ವಿನ್ಯಾಸ ಕೈಕೊಳ್ಳುವ ಕಾರ್ಯವನ್ನು ಗುರುತಿಸಿ ವಾಲ್ಮಿ ಸಂಸ್ಥೆ ಗೌರವಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.
ರಾಜ್ಯದ ರೈತರು ಕಾಲುವೆ ವ್ಯವಸ್ಥೆಯನ್ನು ಸ್ವಚ್ಚವಾಗಿಟ್ಟುಕೊಂಡು ಪ್ರತಿ ಹನಿ ನೀರಿನ ಪ್ರಯೋಜನ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಪ್ರತಿ ನೀರಾವರಿ ಅಣೆಕಟ್ಟುಗಳ ನಿರ್ವಹಣೆಗೆ ಹೆಚ್ಚಿನ ಒತ್ತು ಕೊಟ್ಟು ನಿರ್ವಹಿಸಿದ್ದಲ್ಲಿ ಯೋಜನೆಗಳು ಸಫಲವಾಗುತ್ತವೆ. ಅದೇ ರೀತಿ ಅರಣ್ಯ ಸಂರಕ್ಷಣೆಯಿಂದ ಉತ್ತಮ ಮಳೆ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬ ರೈತ ಪ್ರತಿ ವರ್ಷ ಒಂದಾದರೂ ಗಿಡ ನೆಡಬೇಕು ಎಂದು ಕರೆನೀಡಿದರು.
ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಎನ್. ಪೋದ್ದಾರ ಅವರು ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ, ಬಾಳೆಕುಂದ್ರಿ ಮತ್ತು ಇಂ. ಕನ್ನಯ್ಯ ನಾಯ್ಡು ಇವರಂಥಹ ಆದರ್ಶ ಅಭಿಯಂತರರ ಸಂದೇಶಗಳನ್ನು ಪಾಲಿಸುವುದುದರ ಮೂಲಕ ಆಧುನಿಕ ಭಾರತದ ಸವಾಲುಗಳನ್ನು ಎದುರಿಸಲು ಅಭಿಯಂತರರು ಶಕ್ತಿಯಾಗಿ ಹೊರಹೊಮ್ಮಬೇಕೆಂದರು. ಇಂಜಿನಿಯರ್ಗಳು ವಿಷಯ ಪರಿಣಿತಿಯ ಜೊತೆಗೆ ಸಾಮಾಜಿಕ ಅಭಿಯಾಂತ್ರಿಕತೆಯನ್ನು ರೂಢಿಸಿಕೊಂಡಾಗ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದರು.
ಈ ವರ್ಷದ ಅಭಿಯಂತರರ ದಿನಾಚರಣೆಯ ಘೋಷವಾಕ್ಯವಾದ ಸುಸ್ಥಿರತೆಯಲ್ಲಿ ಅಭಿಯಂತರರ ಪಾತ್ರ ಕುರಿತು ಮಾತನಾಡಿ ನಾವು ನಿರ್ಮಾಣ ಮಾಡುವ ಕಟ್ಟಡ, ಸಂರಚನೆಗಳು ಮತ್ತು ಸಮಾಜ ಸುಭದ್ರವಾಗಿರಬೇಕೆಂದರು. ಜೊತೆಗೆ, ಉತ್ತಮ ಜೀವನ ಶೈಲಿಯ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರು ವಿಮಲಾ ಕಾಳೆ, ಭಾರತೀಯ ಅಭಿಯಂತರರ ಸಂಸ್ಥೆಯ ಇಂಜಿನಿಯರ್ ವಿಜಯ ತೋಟಗೇರ, ಸಮಾಲೋಚಕ ಸಿವಿಲ್ ಅಭಿಯಂತರರ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ, ಸಮಾಲೋಚಕ ಸಿವಿಲ್ ಅಭಿಯಂತರರ ವೇದಿಕೆಯ ಅಧ್ಯಕ್ಷ ಸಂತೋಷ ಅಂಚಟಗೇರಿ, ಲಕ್ಷ್ಮೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪ ಡಾ. ಶಿವರಾಜಕುಮಾರ ಗೌಡರ, ಹೆಚ್. ಶಾಂತನಗೌಡ, ರೈತ ಪ್ರತಿನಿಧಿಗಳು, ತುಂಗಭದ್ರಾ ಯೋಜನೆ ಇವರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕ ಪ್ರೊ. ಬಿ.ವೈ. ಬಂಡಿವಡ್ಡರ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಹ ಪ್ರಾಧ್ಯಾಪಕ ಪ್ರದೀಪ ದೇವರಮನಿ ಕಾರ್ಯಕ್ರಮ ಸಂಯೋಜಿಸಿದರು. ಸಹಾಯಕ ಅಭಿಯಂತರ ಮಹದೇವಗೌಡ ಹುತ್ತನಗೌಡರ ಕಾರ್ಯಕ್ರಮ ನಿರೂಪಿಸಿದರು.
ತುಂಗಭದ್ರಾ ಯೋಜನೆ ಪ್ರದೇಶದ ರೈತರು, ಕಮಲಾ ಮತ್ತು ವೆಂಕಪ್ಪ ಎಮ್ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಲಕ್ಷ್ಮೇಶ್ವರ ವಿದ್ಯಾರ್ಥಿಗಳು, ಜಲ ಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳ ಅಭಿಯಂತರರು, ವಾಲ್ಮಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.




