ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್ ವರದಿಗೆ ಸಮ್ಮತಿಸಬಹುದು: ಈಶ್ವರ್ ಖಂಡ್ರೆ

2 years ago

ಬೆಂಗಳೂರು: ಪಶ್ಚಿಮಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯ ಜನರಲ್ಲಿ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದಕ್ಕೆ ಮುಂದಡಿ ಇಟ್ಟಿದೆ.

ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶವನ್ನು ಈಗಾಗಲೇ ಸಂರಕ್ಷಿಸಲಾಗಿದ್ದು, ಈ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್ ವರದಿಯನ್ನು ಸಮ್ಮತಿಸಬಹುದು ಎಂಬ ಸಲಹೆಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ನೀಡಿದ್ದಾರೆ.

ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಂತೆ ಪಶ್ಚಿಮ ಘಟ್ಟ ಅರಣ್ಯ ವ್ಯಾಪ್ತಿಯ 11 ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಭೆ ನಡೆಸಿದರು. ಸಭೆಯಲ್ಲಿ ವರದಿ ಅನುಷ್ಠಾನಗೊಳಿಸುವ ವಿಷಯದಲ್ಲಿ ಉಂಟಾಗಬಹುದಾದ ಸಾಧಕಬಾಧಕಗಳ ಕುರಿತಂತೆ ಸುಧೀರ್ಘ ಚರ್ಚೆ ನಡೆಸಿದ ಅವರು ಈಗಾಗಲೇ ರಾಜ್ಯ ಸರ್ಕಾರ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದೆ. ಈ ಪ್ರದೇಶಕ್ಕೆ ಮಾತ್ರ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್ ಖಂಡ್ರೆ, ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಕೇಂದ್ರ ಸರ್ಕಾರ ಆ.2 ರಂದು 6ನೇ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಈ ಮಾಸಾಂತ್ಯದೊಳಗೆ ರಾಜ್ಯ ಸರ್ಕಾರದ ನಿಲುವು ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ನಡೆದ 11 ಜಿಲ್ಲೆಗಳ ಜನಪ್ರತಿನಿಧಿಗಳ ಅಭಿಪ್ರಾಯ ಆಲಿಸಲಾಯಿತು ಎಂದರು.

ಸಭೆಯಲ್ಲಿದ್ದ ಜನಪ್ರತಿನಿಧಿಗಳು ಈಗಾಗಲೇ ರಾಜ್ಯದಲ್ಲಿ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಇದ್ದು, ಇನ್ನು ಹೆಚ್ಚಳ ಮಾಡಿದರೆ ಅರಣ್ಯದಂಚಿನ ಜನರ ಬದುಕೇ ದುಸ್ತರವಾಗುತ್ತದೆ. ಹೀಗಾಗಿ ಬಫರ್ ವಲಯವನ್ನು ಶೂನ್ಯಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಹಾಲಿ ಇರುವ 16,114 ಚ.ಕಿ.ಮೀ. ಮಿತಿಗೆ ನಾವು ಸಮ್ಮತಿಸಿದರೆ ಶೂನ್ಯ ಬಫರ್ ಆಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದರು.

ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಈ ಬಗ್ಗೆ ಭೌತಿಕ ಸರ್ವೆ ನಡೆಸಿದರೆ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನೂ ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಹಲವು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲೇ ಜೀವನ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುವುದು ಸೂಕ್ತವಲ್ಲ. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿದರೂ ಅವರು ಅಲ್ಲಿಗೆ ಹೋಗುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ಸಂಪುಟ ಉಪಸಮಿತಿಯ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದರು.

ಈಗಾಗಲೇ ಇರುವ 16,114 ಚ.ಕಿ.ಪ್ರದೇಶಕ್ಕೆ ಅಂಗೀಕಾರ ನೀಡಿದರೂ ಈ ಪ್ರದೇಶದಲ್ಲಿರುವ 1576 ಗ್ರಾಮಗಳ ಜನರ ಜೀವನೋಪಾಯಕ್ಕೆ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಒತ್ತಾಯ ಮಾಡಬಹುದು ಎಂದು ತಾವು ಸಲಹೆ ನೀಡಿರುವುದಾಗಿ ಹೇಳಿದರು. 

ಪಶ್ಚಿಮ ಘಟ್ಟ ಕೇವಲ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಘಟ್ಟಪ್ರದೇಶ ಹಲವು ನದಿಗಳ ಉಗಮ ಸ್ಥಾನವಾಗಿದೆ ಮಿಗಿಲಾಗಿ ಮಳೆಯ ಮಾರುತಗಳನ್ನು ತಡೆಯುವ ಕಾರಣ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ. ಹೀಗಾಗಿ ಈ ಪಶ್ಚಿಮಘಟ್ಟ ಸಂರಕ್ಷಣೆಯ ಹೊಣೆ ಕೇಂದ್ರದ್ದೂ ಆಗಿದೆ. ಆದ ಕಾರಣ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.

ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೋಳಿ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ವಿಧಾನಪರಿಷತ್ ಉಪ ಸಭಾಪತಿ ಪ್ರಾಣೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕರಾದ ಆರಗ ಜ್ಞಾನೇಂದ್ರ, ನಯನ ಮೋಟಮ್ಮ, ರಾಜೇಗೌಡ, ಹರೀಶ್ ಪೂಂಜಾ, ಸಂಸದ ಶ್ರೇಯಸ್ ಪಟೇಲ್ ಮತ್ತಿತರರು ಹಾಜರಿದ್ದರು.

Leave a Reply