ಸಿದ್ದರಾಮಯ್ಯ ಹಿಟ್ಲರ್ ರೀತಿಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

2 years ago

ಬೆಂಗಳೂರು: ಸಿದ್ದರಾಮಯ್ಯ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದ ನಂತರ ಹಿಟ್ಲರ್ ರೀತಿಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಒಂದು ರೀತಿಯ ಆಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಸುಳ್ಳು ಮೊಕದ್ದಮೆಗಳ ಹೆಸರಿನಲ್ಲಿ ಎಫ್ಐಆರ್ ದಾಖಲಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರು ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಅಂದರೂ ಮಂಗಳೂರಿನಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಲಿಲ್ಲ. ಶಾಸಕ ಚನ್ನರೆಡ್ಡಿ ಹಾಗೂ ಅವರ ಮಗ ಕಿರುಕುಳ ಕೊಡುತ್ತಿದ್ದಾರೆ ಎಂದು  ಸಬ್ ಇನ್ಸ್ ಪೆಕ್ಟರ್ ಪರಶುರಾಂ ಅವರು ಆತ್ಮಹತ್ಯೆ  ಮಾಡಿಕೊಂಡರೂ ಅವರ ವಿರುದ್ಧ ದೂರು ದಾಖಲಾಗಿಲ್ಲ. ಆದರೆ ಅನೇಕ ಬಿಜೆಪಿ ನಾಯಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದರು.

ಪತಿಪಕ್ಷ ನಾಯಕ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಹರೀಶ್ ಪುಂಜಾ,ಬಸನಗೌಡ ಪಾಟೀಲ್ ಯತ್ನಾಳ್, ಭರತ್ ಶೆಟ್ಟಿ, ಮುನಿರತ್ನ ಸೇರಿದಂತೆ ಹಲವರ ಮೇಲೆ ಎಫ್ಐಆರ್ ದಾಖಲಾಗುತ್ತಿದೆ. ಕರ್ನಾಟಕದಲ್ಲಿ ಒಂದು ರೀತಿಯ ಅಘೋಷಿತ ತುರ್ತುಪರಿಸ್ಥಿತಿ ಎಂದರು.

ಮಾಜಿ ಸಚಿವ ಬಿ. ನಾಗೇಂದ್ರ ಅವರು ವಾಲ್ಮೀಕಿ ನಿಗಮದಲ್ಲಿ ಕೋಟ್ಯಾಂತರ ರೂ. ಗುಳುಂ ಮಾಡಿದರೂ ಎಫ್ ಐ ಆರ್ ನಲ್ಲಿ ಅವರ ಹೆಸರೇ ಇಲ್ಲ. ಎಸ್ಐಟಿಯಲ್ಲಿ ಅವರ ಹೆಸರೇ ಇಲ್ಲ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ? ಎಂದರು.

ರಾಜ್ಯದಲ್ಲಿ ಮೊದಲ ಬಾರಿಗೆ ಪ್ಯಾಲೆಸ್ತೀನ್ ಧ್ವಜ ಹಾರಿಸಲಾಗಿದೆ. ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜ ತೆಗೆದು ಉರ್ದುವಿನಲ್ಲಿ ಬರೆಯಲಾಗಿದೆ. ಇಷ್ಟು ಧೈರ್ಯ ಹೇಗೆ ಬಂದಿದೆ? ಅಲ್ಪಸಂಖ್ಯಾತರು ಇಷ್ಟು ಮಾಡಲು ಇಂದು ನೀವು ಕೊಟ್ಟಿರುವ ಸಲುಗೆ ಕಾರಣ. ಕರ್ನಾಟಕ ರಾಜ್ಯದಲ್ಲಿ ನಿಮ್ಮಿಂದ ಗಲಭೆಗಳು ನಡೆಯುತ್ತಿವೆ ಎಂದರು.

ತಮ ವಿರುದ್ದ ಪೊಲೀಸರು ಎಫ್ ಐ ಆರ್ ದಾಖಲು ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹೋರಾಟದಿಂದಲೇ ಮೇಲೆ ಬಂದವಳು. ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ನಾನು ಸುಳ್ಯ, ಪುತ್ತೂರು, ಮಂಗಳೂರು, ಕಲ್ಲಡ್ಕದಲ್ಲಿ ಹೋರಾಟ ಮಾಡಿ ಬಂದವಳು ಎಂದರು.

Leave a Reply