ಬೆಂಗಳೂರು: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಏಳು ನಿಯಮಗಳು ಇವೆ ಎಂದು ಒಕ್ಕಲಿಗರ ವೇದಿಕೆ ಅಧ್ಯಕ್ಷ ಸಿ.ಎ.ನಾಗರಾಜ್ ಗೌಡ ಹಾಗೂ ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಎ.ಎನ್.ನಟರಾಜ್ ಗೌಡ ಹೇಳಿದರು.
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯ ಕುರಿತು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ಏಳು ನಿಯಮಗಳನ್ನು ವಿವರಿಸಿದರು.
೧. ಯಾವ ವ್ಯಕ್ತಿಯು ಒಕ್ಕಲಿಗರ ಸಂಘವು ಒಂದು ಸೇವಾ ಸಂಸ್ಥೆಯೆಂದು ಪರಿಗಣಿಸಿ ಸಂಘದ ಧೇಯೋದ್ದೇಶ ತತ್ವ ಸಿದ್ಧಾಂತ ಹಾಗೂ ಆದರ್ಶಗಳನ್ನು ಪಾಲಿಸುತ್ತಾನೋ ಆತನನ್ನು ಮತದಾರರು ಗಮನಿಸಬೇಕು.
೨. ರಾಜ್ಯ ಒಕ್ಕಲಿಗರ ಸಂಘವು ತನ್ನದೇ ಆದ ಇತಿಹಾಸವನ್ನು ಅಸ್ತಿತ್ವವನ್ನು ಭವಿಷ್ಯವನ್ನು ಹೊಂದಿದೆ. ಇದನ್ನು ಮನಗಾಣದೆ ಯಾವುದೋ ರಾಜಕೀಯ ಪಕ್ಷಗಳ ಸಿದ್ಧಾಂತ ರಾಜಕೀಯ ಪಕ್ಷಗಳ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳನ್ನು ಖಂಡಿತವಾಗಿ ಮತದಾರರು ತಿರಸ್ಕರಿಸಬೇಕು. ಯಾಕೆಂದರೆ ಆ ರಾಜಕೀಯ ಪಕ್ಷದ ರಾಜಕೀಯ ನಾಯಕರ ವಿಚಾರಗಳನ್ನು ಮಾತ್ರ ಆ ನಿರ್ದೇಶಕ ಮುಂದೆ ಪಾಲಿಸಲೇಬೇಕಾಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಎಲ್ಲಾ ಮತದಾರರು ಎಚ್ಚರವನ್ನು ವಹಿಸಬೇಕು.
೩. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಪೇಟೆ ಗಳನ್ನು ನಿರ್ಮಿಸಿ ಅಕ್ಕಿಪೇಟೆ ಬಳೆಪೇಟೆ ರಾಗಿ ಪೇಟೆ ತರಗುಪೇಟೆ ಚಿಕ್ಕಪೇಟೆ ದೊಡ್ಡಪೇಟೆ ತಿಗಳರ ಪೇಟೆ ಗಾಣಿಗರಪೇಟೆ ಕಂಬಾರರ ಪೇಟೆ ಕುಂಬಾರಪೇಟೆ ಹೀಗೆ ಸುಮಾರು ನಲವತ್ತು ಪೇಟೆಗಳನ್ನು ನಿರ್ಮಿಸಿದರು. ವೃತ್ತಿಗನುಗುಣವಾಗಿ ಕೌಶಲ್ಯಕ್ಕನುಗುಣವಾಗಿ ಎಲ್ಲಾ ವರ್ಗದ ಜನ ಜಾತಿಯನ್ನು ಸೇರಿಸಿ ಈ ನಗರವನ್ನು ನಿರ್ಮಾಣ ಮಾಡಿದರು, ಬ್ರಾಹ್ಮಣರಿಗಾಗಿ ಅಗ್ರಹಾರಗಳನ್ನು ನಿರ್ಮಿಸಿದರು.ಯಾವ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಲ್ಲಿ ಈ ರೀತಿಯ ಎಲ್ಲರನ್ನೂ ಒಳಗೊಳ್ಳುವ ಎಲ್ಲಾ ಜಾತಿ ಧರ್ಮದವರನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವುದೋ ಯಾರು ನಾಡಪ್ರಭು ಕೆಂಪೇಗೌಡರ ರೀತಿಯಲ್ಲಿ ಜಾತ್ಯಾತೀತ ಮನೋಭಾವವನ್ನು ಹೊಂದಿರುವರೋ ಅವರಿಗೆ ಮತದಾರರು ಪ್ರಾಶಸ್ತ್ರ ನೀಡಬೇಕು
೪. ತಮ್ಮ ಅಮೂಲ್ಯ ಬರಹಗಳಿಗಾಗಿ ವಿಶ್ವವಿಖ್ಯಾತಿಯನ್ನು ಪಡೆದ ಕುವೆಂಪುರವರು ಕೇವಲ ಕರ್ನಾಟಕ ಏಕೀಕರಣಕ್ಕೆ ಅವರ ಕೊಡುಗೆ ಕೇವಲ ಸಾಹಿತ್ಯದಲ್ಲಿ ಅವರ ಕೊಡುಗೆ ಮಾತ್ರವಲ್ಲದೆ ಕನ್ನಡದ ಅಸ್ಮಿತೆಗೆ ನಾಡಗೀತೆ ಹಾಗೂ ರೈತಗೀತೆಯನ್ನು ನೀಡಿದ್ದಾರೆ. ಮನುಜಮತ ವಿಶ್ವಪಥ ಎಂಬ ವಿಶ್ವಮಾನವ ಸಂದೇಶವನ್ನು ಸಾರಿದ್ದಾರೆ. ಇಡೀ ಪ್ರಪಂಚವೇ ಅಳವಡಿಸಿಕೊಳ್ಳಬಹುದಾದಂತಹ ಮಂತ್ರಮಾಂಗಲ್ಯ ವಿಚಾರವನ್ನು ನೀಡಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಲ್ಲಿ ಯಾರು ಇವುಗಳನ್ನು ಕುವೆಂಪುರವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದಾರೋ ಅಥವಾ ಮುಂದೆ ಪ್ರಚಾರ ಮಾಡುತ್ತಾರೋ ಕೇವಲ ಅಂಥವರನ್ನು ಮಾತ್ರ ಗುರುತಿಸಬೇಕಾಗಿದೆ.
೫. ಯಾವ ವ್ಯಕ್ತಿಯೂ ತನ್ನ ಸಂಪೂರ್ಣ ಸಮಯವನ್ನು ಸಮುದಾಯದ ಏಳಿಗೆ ಶಿಕ್ಷಣ ಆರೋಗ್ಯ ವೃತ್ತಿ ಇವುಗಳ ಕಡೆ ಕೊಡುತ್ತಾನೋ ಯಾರು ನಿರ್ದೇಶಕರಾದ ನಂತರ ತನ್ನ ವ್ಯಾಪಾರ ವ್ಯವಹಾರ ಅಭಿವೃದ್ಧಿ ರಾಜಕೀಯ ಇವುಗಳ ಕಡೆ ಗಮನ ಕೊಡುತ್ತಾನೋ ನಾವು ಪರಿಶೀಲಿಸಿ ಯಾರು ನಿಸ್ವಾರ್ಥವಾಗಿ ಸಮುದಾಯದ ಏಳಿಗೆಗಾಗಿ ದುಡಿಯುವರೋ ಅವರನ್ನು ಮಾತ್ರ ಗುರುತಿಸಿ ಮತ ಚಲಾಯಿಸಬೇಕಾಗಿದೆ.
೬. ನಿರ್ದೇಶಕ ಸ್ಥಾನದ ಆಕಾಂಕ್ಷಿಯು ರೈತರ ಮಕ್ಕಳ ಕಷ್ಟ ಕಾರ್ಪಣ್ಯಗಳನ್ನು ನೋಡಿ ಎಲ್ಲಾ ತಾಲ್ಲೂಕು ಹೋಬಳಿಯಲ್ಲಿ ಗ್ರಾಮಗಳಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಅಥವಾ ಉಚಿತವಾಗಿ ಶಾಲೆಗಳು, ಆಸ್ಪತ್ರೆಗಳನ್ನು ತೆರೆಯುವರೋ ಯಾವ ವ್ಯಕ್ತಿಗೆ ಈ ರೀತಿಯ ಮುಂದಾಲೋಚನೆ ಅಥವಾ ಪ್ರಣಾಳಿಕೆಯಲ್ಲಿ ಮಾಹಿತಿ ನೀಡಿರುವರೋ ಅವರ ಸಾಮರ್ಥ್ಯವನ್ನು ಪರಿಶೀಲಿಸಿ ಅವರಿಗೆ ಮತ ನೀಡಬೇಕಾಗಿದೆ.
೭. ಸಮುದಾಯದ ಮಕ್ಕಳ ಭವಿಷ್ಯದ ಬಗ್ಗೆ ಆಲೋಚಿಸಿ ಆಸ್ಪತ್ರೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ಶಿಕ್ಷಣ ಮತ್ತು ಆರೋಗ್ಯವನ್ನು ಒದಗಿಸಬೇಕು. ಉಚಿತ ವೃತ್ತಿ ಶಿಕ್ಷಣ ತರಬೇತಿ ಕೌಶಲ್ಯ ತರಬೇತಿ ಉಚಿತ ವಿದ್ಯಾರ್ಥಿನಿಲಯಗಳನ್ನು ಮಾಡಲು ಯಾರು ಸಾಮರ್ಥ್ಯವಿರುವವರು ಅವರನ್ನು ಎಲ್ಲಾ ಮತದಾರರು ಚರ್ಚಿಸಿ ಗುರುತಿಸಬೇಕಾಗಿದೆ.
ಜೊತೆಗೆ, ಯಾವ ವ್ಯಕ್ತಿ ನಾಡು ನುಡಿ ನೆಲ ಜಲದ ಬಗ್ಗೆ ಕಾಳಜಿ ಹೊಂದಿ ಅವುಗಳ ರಕ್ಷಣೆಗಾಗಿ ಉಳಿವಿಗಾಗಿ ಹೋರಾಡುವನೋ, ಆ ರೀತಿಯ ಛಲ ಧೈರ್ಯ ಸಂಕಲ್ಪ ಇರುವ ವ್ಯಕ್ತಿಯನ್ನು ಗುರುತಿಸಬೇಕಾಗಿದೆ ಎಂದರು.
ನಿರ್ದೇಶಕ ಸ್ಥಾನದ ಆಕಾಂಕ್ಷಿಯೂ ಮತ ಕೇಳಲು ಬಂದಾಗ ಆಮಿಷಗಳನ್ನು ಒಡ್ಡಿ ಹಣ ಅಥವಾ ಉಡುಗೊರೆ ಆಮಿಷವನ್ನು ಒಡ್ಡಿದ್ದಾದರೆ ಅಥವಾ ನೀಡಿದ್ದಾದರೆ ಅಂಥವರನ್ನು ಖಡಾಖಂಡಿತವಾಗಿ ತಿರಸ್ಕರಿಸಬೇಕಾಗಿದೆ ಎಂದು ಕರೆ ನೀಡಿದರು.
ಸಮುದಾಯದ ಅಭಿವೃದ್ಧಿ ರಾಜ್ಯದ ಅಭಿವೃದ್ಧಿ, ರಾಜ್ಯದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ಬನ್ನಿ ಸಮುದಾಯದಲ್ಲಿ ಉತ್ತಮ ನಿರ್ದೇಶಕರನ್ನ ಆಯ್ಕೆ ಮಾಡೋಣ. ಸಮುದಾಯದ ಮಕ್ಕಳ ಏಳ್ಗೆಯನ್ನು ಕಾಣೋಣ ಸುಭದ್ರ ಸಮಾಜ ಹಾಗೂ ಸುಭದ್ರ ರಾಜ್ಯವನ್ನು ನಿರ್ಮಿಸೋಣ ಎಂದರು.




