ಬೆಂಗಳೂರು: ಬೆಳಗಾವಿ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಮದುರ್ಗ ಮತ್ತು ಸವದತ್ತಿ ವಿಧಾನ ಸಭಾ ಮತಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರ ಸಮ್ಮಿಲನ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕ ಅಶೋಕ್ ಪಟ್ಟಣ ಭಾಗಿಯಾಗಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪರ ಮತ ಯಾಚಿಸಿದರು.
ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ತಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆಶೀರ್ವದಿಸಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುತ್ತಿರಿ ಎಂಬ ಆತ್ಮ ವಿಶ್ವಾಸ ನನ್ನಲ್ಲಿದೆ ಎಂದು ಅಶೋಕ್ ಪಟ್ಟಣ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಬಲಿಷ್ಠಗೊಳ್ಳುತ್ತಿದ್ದು, ಬರುವ ದಿನಮಾನಗಳಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಬಡವರ, ಶ್ರಮಿಕರ, ರೈತರ ಹಾಗೂ ಹಿಂದುಳಿದ ವರ್ಗಗಳ ಏಳೆಗೆಗಾಗಿ ಶ್ರಮಿಸಲು ಇನ್ನೂ ಶಕ್ತಿಯುತವಾಗಿ ಬೆಳೆಯಲಿದೆ ಎಂದರು.
ಈ ಸಂದರ್ಭದಲ್ಲಿ ಚುನಾವಣೆಯ ವಿಕ್ಷಕ ಹಾಗೂ ಶಾಸಕರಾದ ಎನ್ ಎ ಹ್ಯಾರಿಸ್, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ವಿಶ್ವಾಸ ವೈದ್ಯ, ಆರ್ ವಿ ಪಾಟೀಲ, ಪಂಚನಗೌಡ ದ್ಯಾಮನಗೌಡರ ಹಾಗೂ ಬ್ಲಾಕ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅವರಿವರೆನ್ನದೆ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.



