ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು: ಸಿದ್ದರಾಮಯ್ಯ

2 years ago

ಬೆಂಗಳೂರು: ಸಾಂಕ್ರಾಮಿಕ ಕೋವಿಡ್ ಸಮಯದಲ್ಲಿ ನಡೆದ ಖರೀದಿ ಪ್ರಕರಣ ಸೇರಿದಂತೆ ವಿವಿಧ ವಲಯಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ನ್ಯಾಯಮೂರ್ತಿ, ಮೈಕಲ್ ಡಿ ಕುನ್ಹಾ ನೀಡಿರುವ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ  ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಮೂರ್ತಿಗಳು ತಮ್ಮ ಮಧ್ಯಂತರ ವರದಿಯನ್ನು ನೀಡಿದ್ದಾರೆ. ನಾನಿನ್ನೂ ವರದಿಯನ್ನು ನೋಡಿಲ್ಲ. ಗುರುವಾರದ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚಿಸುತ್ತೇವೆ. ಏನು ಶಿಫಾರಸ್ಸು ಮಾಡಿದ್ದಾರೆ ಎಂದು ನೋಡಿ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಈ ವರದಿಯ ಬಗ್ಗೆ ಅಂದಿನ ಆರೋಗ್ಯ ಸಚಿವ‌ ಹಾಗೂ ಬಿಜೆಪಿ ಸಂಸದ ಡಾ. ಸುಧಾಕರ್ ಈಗಲೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು. ನಾನೇ ಇನ್ನೂ ವರದಿ ನೋಡಿಲ್ಲ ಎಂದರು.

ಸುಧಾಕರ್ ಚಡಪಡಿಸುತ್ತಿರುವುದೇಕೆ? ಸುಧಾಕರ್ ವರದಿ ನೋಡಿದ್ದಾರೆಯೇ?ತಪ್ಪು ಮಾಡಿರುವ ಮನೋಭಾವದಿಂದಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸುಳ್ಳು ವರದಿ ಪಡೆದಿದ್ದೇವೆ ಎಂದು ಅವರಿಗೆ ಹೇಗೆ ಗೊತ್ತಾಗಲು ಸಾಧ್ಯ? ಸುಧಾಕರ್ ಮನಸ್ಥಿತಿ ಅರ್ಥವಾಗುತ್ತಿದೆ. ತಪ್ಪು ಮಾಡಿರುವ ಪಾಪಪ್ರಜ್ಞೆ ಕಾಡುತ್ತಿರಬಹುದು. ವರದಿ ಬಹಿರಂಗಗೊಂಡು ಅದರಲ್ಲಿನ ಮಾಹಿತಿಗಳು ತಿಳಿಯದ ಹೊರತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಈ ಹಿಂದೆ ನಾವು ಸಾಕಷ್ಟು ಆರೋಪಗಳನ್ನು ಮಾಡಿದ್ದೇವೆ. ಆದರೆ ವಿಚಾರಣಾ ಆಯೋಗದ ವರದಿ ಬಂದಿರುವುದರಿಂದ ಖಚಿತ ಮಾಹಿತಿ ಇಲ್ಲದೆ ಪ್ರತಿಕ್ರಿಯಿಸುವುದಿಲ್ಲ. ಗುರುವಾರ ಸಚಿವ ಸಂಪುಟದ ಬಳಿಕ ಸೂಕ್ತ ಮಾಹಿತಿ ನೀಡಲಾಗುತ್ತದೆ ಎಂದರು.

Leave a Reply