“ನಾನು ಎರಡು ದಿನದಿಂದ ಏನೂ ತಿಂದಿಲ್ಲ, ನೀರೂ ಕುಡಿದಿಲ್ಲ, ಮಲಗಿಯೂ ಇಲ್ಲ, ಹಸಿದ ಹೊಟ್ಟೆಯಲ್ಲಿ ಮಲಗಲಾದೀತೆ? ನಾನು ಗೆದ್ದಿದ್ದರೆ?… ಇಂದು ನಾನು ಏನೇ ಹೇಳಿದರು ಜನ ನಂಬುವುದಿಲ್ಲ, ನಾನು ಸುಳ್ಳು ಹೇಳುತ್ತಿದ್ದೇನೆ ಎನ್ನುವರು, ಸಾಕು ಹೆಚ್ಚಿಗೇನು ಹೇಳಲಾರೆ” ಅವಳ ಕಣ್ಣುಗಳಿಂದ ನೀರು ಬರಲಾರಂಭಿಸಿತು. ಅದು ಹೆಚ್ಚಾಗಲಾರಂಭಿಸಿತು. ಉಬ್ಬಿದ ಗಂಟಲು ಪ್ರಯಾಸದಿಂದ ಆಂದೊಂದೆ ಶಬ್ದ ಹೊರಬರುತ್ತಿತ್ತು. “ನಾನು ಎಲ್ಲವನ್ನು ಪ್ರಯೋಗಿಸಿದೆ. ಆಗಲಿಲ್ಲ. ನನಗೀಗ ಬಿಡುವು ಬೇಕಾಗಿದೆ” ಎಂದಳು. ಭಾರತಕ್ಕೆ ಬಂಗಾರದ ಆಶಾಕಿರಣವಾಗಿದ್ದ ಹೈದರಾಬಾದಿನ ನಿಖತ್ ಝರೀನ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇವಳೇನು ಸಾಮಾನ್ಯಳಲ್ಲ, ಬಾಕ್ಸಿಂಗ್ ನಲ್ಲಿ ವಿಶ್ವಕಪ್ ವಿಜೇತೆ, ಬಾಕ್ಸಿಂಗ್ ನ ದೃವತಾರೆ. ‘ಪದಕ ತಂದೇ ತರುವಳು ಎಂದು ಕೋಟಿ ಕೋಟಿ ಹಣ ಹೂಡಿತ್ತು ಭಾರತ ಸರಕಾರ’. ಎಲ್ಲವೂ ಒಂಬತ್ತು ನಿಮಿಷದಲ್ಲಿ ಕೊಚ್ಚಿಕೊಂಡು ಹೋಗಿತ್ತು.
“ಟೈಗರ್ ಅಭಿ ಜಿಂದಾ ಹೈ” ಎಂದ ಸಹ ಪತ್ರಕರ್ತ. ಆದರೆ ೨೫ ವರ್ಷದ ಹೆಣ್ಣು ಹುಲಿ ಜರ್ಜರಿತವಾಗಿತ್ತು. ಅದಕ್ಕೆ ಗಾಯವಾಗಿತ್ತು. ಆ ಗಾಯ ತಕ್ಷಣ ಮಾಯವಾಗುವ ಗಾಯವಲ್ಲ. ಆಳವಾದ ಗಾಯ, ದೇಹದ ಗಾಯಗಳು ದಿನವೂ ಆಗುತ್ತವೆ ಈ ಹುಲಿಗೆ, ಆದರೆ ಅವು ಮಾಸುತ್ತವೆ. ಈ ಗಾಯ ಹೃದಯಕ್ಕಾದ ಗಾಯ. ಮಾಸದ ಗಾಯ.
ಕಣ್ಣೀರ ವರೆಸಿಕೊಂಡಳು, ಮಾತಾಡಲು ಬಯಸಿದ್ದಳು. ಗಂಟಲು ಸಹಕರಿಸಲಿಲ್ಲ. ಕಟ್ಟಿದ ಗಂಟಲಿನಿಂದ ಒಂದೊಂದು ಶಬ್ದಗಳು ಹೊರಬಂದವು “ಹೌದು ನನಗೆ ಟೈಗರ್ ಎನ್ನುತ್ತಾರೆ, ನನಗೆ ಬಾಕ್ಸಿಂಗ್ ಕಲಿಸಿದ ಗುರುಗಳು. ನಾನು ಏನು ಗುರುಕಾಣಿಕೆ ನೀಡಲಿ? ಸೋತ ಮುಖ ತೋರಿಸಲೆ?” ಮತ್ತೊಮ್ಮೆ ಕಣ್ಣಾಲಿಗಳು ತುಂಬಿದವು.
“ನೀವು ನನಗೆ ಈಗಲೂ ಒಂದು ಐಸ್ ಕ್ರೀಮ್ ಕೊಡಿಸುತ್ತೀರಾ? ಒಂದು ಥಮ್ಸ್ ಅಪ್…., ಒಂದಿಷ್ಟು ಚಾಕಲೇಟ್…..” ಬೇಡಿಕೊಂಡಿತು ಭಾರತದ ಭವಿಷ್ಯ. ಅಲ್ಲಿದ್ದ ಬಾಟಲಿ ಎತ್ತಿ ಗಳಗಳನೆ ಕುಡಿದು ಬಿಟ್ಟಳು ಭವಿಷ್ಯದ ಚಿಂತನೆಯನ್ನು ಬಿಟ್ಟು. ( ಅಥ್ಲೀಟ್ ಗಳು ಸಾಮಾನ್ಯವಾಗಿ ಯಾರ ನೀರನ್ನು ಕುಡಿಯುವುದಿಲ್ಲ)
ನಾನು ಜೀವನದಲ್ಲಿ ಮೊದಲಬಾರಿ ಚೀನಾದ ಯೂ ವೂ ನೊಂದಿಗೆ ಆಡಿದ್ದು. ಮೊದಲನೆಯ ರೌಂಡ್ಸ್ ನಲ್ಲಿ ಸಮಸಮವಾಗಿದ್ದ ಪಂದ್ಯದಲ್ಲಿಯೂ ನಾನು ಸ್ವಲ್ಪವೇ ಹಿಂದಿದ್ದೆ. ಎರಡನೆಯ ರೌಂಡ್ಸ್ ನಲ್ಲಿ ನನಗೊಂದು ಪಂಚ್ ಬಿತ್ತು, ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಪ್ರಹಾರವಾಗಿತ್ತು ನನ್ನ ಮುಖದ ಮೇಲೆ. ಅಷ್ಟೇ ಸಾಕಿತ್ತು. ಅವಳು ಮೇಲುಗೈ ಸಾಧಿಸಿದ್ದಳು. ಅಲ್ಲಿಂದ ಪ್ರಾರಂಭಿಸಿದಳವಳು ತಪ್ಪಿಸಿಕೊಳ್ಳುವ ಆಟ. ಹತ್ತಿರ ಬರುವುದು, ದೂರ ಓಡುವುದು. ಎರಡೂವರೆ ಮೂರು ನಿಮಿಷದ ಆಟ ಉಳಿದಿತ್ತು. ಅವಳಿಗೆ ಮೇಲುಗೈ ಉಳಿಸಿಕೊಳ್ಳಬೇಕಾಗಿತ್ತು. ನನಗೆ ಪಂಚ್ ಕೋಡಬೇಕಾಗಿತ್ತು. ಕೈಗೆ ಎಟುಕಲೇಯಿಲ್ಲ ಚೈನಾದ ಜಿಂಕೆ. ಆ ಎರಡೂವರೆ ನಿಮಿಷದಲ್ಲಿ ನಾಲ್ಕು ವರ್ಷದ ಶ್ರಮ, ಪಡೆದ ಸಾವಿರಾರು ಪಂಚ್ ಗಳು, ನಾಲ್ಕು ವರ್ಷದ ಕಸರತ್ತು. ಜಗತ್ತಿನ ಒಳ್ಳೆಯ ಟ್ರೇನಿಂಗ್ ಸೆಂಟರುಗಳ ತರಬೇತಿ, ಮನೆ, ಊಟ, ಮನ ಬಯಸಿದ ಚಟುವಟಿಕೆ ಎಲ್ಲವೂ ನೀರು ಪಾಲಾಗಿತ್ತು… ಮತ್ತೊಮ್ಮೆ ಕಣ್ಣೀರು ಅವಳ ಕಣ್ಣುಗಳಲ್ಲಿ…
ನನಗೂ ಬರೆಯಲಾಗುತ್ತಿಲ್ಲ…
– ಜಿ.ಬಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ
ಮೂಲ: ಸ್ಪೊರ್ಟ್ಸ್ ಜರ್ನಲಿಸ್ಟ್ ಬೊರಿಯಾ ಮುಜುಮದಾರನ ವರದಿ ಆಧರಿಸಿ




