ಶಿರೂರು ಭೂಕುಸಿತ: ಬಲಿಯಾದವರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ: ಸಿದ್ದರಾಮಯ್ಯ

2 years ago

ಪರಿಹಾರ ಕಾರ್ಯಾಚರಣೆ ವೀಕ್ಷಿಸಿದ ಸಿಎಂ

ತ್ವರಿತ ಕಾರ್ಯಾಚರಣೆಗೆ ಸೂಚನೆ

ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ  ಮಿಲಿಟರಿ ಹಾಗೂ  ನೌಕಾಪಡೆ

ಉಡುಪಿ: ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಎಸ್.ಡಿ.ಆರ್. ಎಫ್ ನಿಂದ 46 ಜನ ಎನ್.ಡಿ.ಆರ್.ಎಫ್ ನಿಂದ 24 ಜನ   ಹಾಗೂ 44 ಜನ ಮಿಲಿಟರಿಯವರು ಹಾಗೂ  ನೌಕಾಪಡೆ ಯವರೂ ಕೂಡ ಕೈಜೋಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶಿರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಾ ಮತ್ತು ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು  ಭೂ ಕುಸಿತವಾಗಿದೆ. ಭೂ ಕುಸಿತದಿಂದ 10 ಜನ ಕಾಣೆಯಾಗಿದ್ದಾರೆ. ಅದರಲ್ಲಿ ಏಳು ಜನರ ಶವಗಳು ಪತ್ತೆಯಾಗಿದ್ದು ಇನ್ನೂ ಮೂವರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಪರಿಹಾರ ಕಾರ್ಯಾಚರಣೆ ಜಾರಿಯಲ್ಲಿದೆ ಎಂದರು.

ಘಟನೆಯಲ್ಲಿ  ಖಾಲಿ ಗ್ಯಾಸ್ ಟ್ಯಾಂಕರ್ ಹಾಗೂ ಭರ್ತಿಯಾಗಿರುವ ಗ್ಯಾಸ್ ಟ್ಯಾಂಕರ್ ಕೂಡ ಸಿಕ್ಕಿಹಾಕಿಕೊಂಡಿದ್ದು, ಅಲ್ಲಿಯೇ ವಾಸವಾಗಿರುವ ಒಂದೇ ಕುಟುಂಬದವರು ಟೀ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವರಲ್ಲಿ ಐವರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ರಿಸ್ಕ್ ಆಪರೇಶನ್ ಅನ್ನು  ತ್ವರಿತವಾಗಿ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದರು.

ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ: ವಿಧಾನಸಭಾ ಅಧಿವೇಶನ ನಡೆಯುತ್ತಿದ್ದುದರಿಂದ ಇಂದು ಭೇಟಿ ನೀಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಎಲ್ಲಾ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೆ. ಸಾವನ್ನಪ್ಪಿದವರ ಕುಟುಂಬಕ್ಕೆ  5 ಲಕ್ಷ ಪರಿಹಾರ ನೀಡಬೇಕೆಂದು ಘೋಷಿಸಲಾಗಿದೆ. ಈಗಾಗಲೇ ಅದನ್ನು ವಿತರಿಸಲಾಗಿದೆ. ಒಂದು ವೇಳೆ ಭೂ ಕುಸಿತದಲ್ಲಿ ಇನ್ಯಾರಾದರೂ ಸಾವನ್ನಪ್ಪಿದ್ದಾರೆ ಅವರಿಗೂ 5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು ಎಂದರು.

ನೌಕಾದಳ ಹಾಗೂ ರಕ್ಷಣಾ ತಂಡದವರಿಗೆ ಎಲ್ಲೆಡೆ ಹುಡುಕುವಂತೆ ಸೂಚನೆ ನೀಡಲಾಗಿದೆ. 10 ಜನರು ಕಾಣೆಯಾಗಿದ್ದಾರೆ. ಘಟನೆ ನಡೆದ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನೂ ಹಾಗೂ ಶಾಸಕರನ್ನು  ಸ್ಥಳಕ್ಕೆ ಕಳುಹಿಸಲಾಗಿದೆ ಎಂದರು.

ಅವೈಜ್ಞಾನಿಕ ಕಾಮಗಾರಿ: ತಪ್ಪಿತಸ್ಥರ ವಿರುದ್ಧ ಕ್ರಮ: ಭೂ ಕುಸಿತ ಪ್ರಕೃತಿ ವಿಕೋಪವಲ್ಲ ಐ.ಆರ್.ಬಿ  ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಿದೆ. ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಯಾರೇ ತಪ್ಪು ಮಾಡಿದರೂ ಕೂಡ ಅವರ ಮೇಲೆ ಕ್ರಮ ವಹಿಸಲಾಗುವುದು, ರಸ್ತೆ ನಿರ್ಮಾಣ ಮಾಡಿರುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು. ಪರಿಹಾರ ಕಾಮಗಾರಿ ಮುಗಿದ ಮೇಲೆ ಪ್ರಕರಣದ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ತಪ್ಪಿತಸ್ಥರ  ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಾಯ: ಕೇಂದ್ರ ಸರ್ಕಾರ ರಸ್ತೆ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ರಸ್ತೆ ಸಾರಿಗೆ ಸಚಿವರೊಂದಿಗೆ ನಾನು ಮಾತನಾಡುತ್ತೇನೆ. ಕಳಪೆ ಕೆಲಸವಾಗಿದ್ದಾರೆ ಅದನ್ನು ಕೂಡಲೇ   ಸರಿಪಡಿಸುವ ಕೆಲಸ ಮಾಡಬೇಕು ಹಾಗೂ  ತಪ್ಪಿತಸ್ಥರ  ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರ  ವಿಳಂಬ ಮಾಡಿಲ್ಲ: ಕೇರಳದ ಲಾರಿ ಇಲ್ಲಿ ಸಿಕ್ಕಿಹಾಕಿಕೊಡಿರುವುದರಿಂದ ಕೇರಳ ಪೊಲೀಸರು ಹಾಗೂ ಮಾಧ್ಯಮದವರು ರಾಜ್ಯ ಸರ್ಕಾರ ವಿಳಂಬ ಕಾರ್ಯಾಚರಣೆ ಮಾಡುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಮಾತನಾಡಿ, ರಾಜ್ಯ ಸರ್ಕಾರ ಯಾವುದನ್ನೂ ವಿಳಂಬ ಮಾಡಿಲ್ಲ. ಎಲ್ಲವನ್ನೂ ತ್ವರಿತವಾಗಿ ಮಾಡುತ್ತಿದ್ದೇವೆ. ಕೇರಳದ ಅರ್ಜುನ್ ಎಂಬುವರು ಕಾಣೆಯಾಗಿದ್ದು, ತಮ್ಮ ರಾಜ್ಯದವರೆಂದು  ಅವರೆಲ್ಲಾ ಬಂದಿರಬಹುದು. ಆದರೆ ನಾವು ವಿಳಂಬ ಮಾಡದೇ, ನಿರ್ಲಕ್ಷ್ಯ ತೋರದೆ ಕೆಲಸ ಮಾಡುತ್ತಿದ್ದೇವೆ ಎಂದರು.

ಭೂ ಕುಸಿತ ತಡೆಗಟ್ಟಲು ಪ್ರಯತ್ನ: 34 ಸ್ಥಳಗಳಲ್ಲಿ ಭೂ ಕುಸಿತವಾಗುತ್ತದೆ ಎಂದು ಒಂದು ವರ್ಷದ ಹಿಂದೆಯೇ ವರದಿಯಾಗಿದೆ. ಜನ ಬಲಿಯಾದ ಮೇಲೆಯೇ ಕ್ರಮವೇಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಕಳೆದ ಬಾರಿ ಬರವಿದ್ದು, ಈ ಬಾರಿ ಮಳೆಯಾಗುತ್ತಿದೆ. ಬಹಳ ವರ್ಷ ಗಳಿಂದ ಇಲ್ಲಿ ಭೂ ಕುಸಿತವಾಗಿರಲಿಲ್ಲ.  ಎಲ್ಲೆಲ್ಲಿ  ಭೂ ಕುಸಿತವಾಗುತ್ತದೆಯೋ ಅದನ್ನು ತಡೆಗಟ್ಟಲು ಪ್ರಯತ್ನಿಸಲಾಗುವುದು ಎಂದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ: ರಾತ್ರಿ ವೇಳೆ ಕಾರ್ಯಾಚರಣೆ ನಡೆಯುವುದಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ. ಕೇಂದ್ರ ಸರ್ಕಾರದ ತಂಡ ಎನ್.ಡಿ.ಆರ್. ಎಫ್ ಕೂಡ ಇಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ನೌಕಾ ತಂಡವೂ ಇದೆ. ಇಲ್ಲಿ ಇನ್ಯಾರ ಮೇಲೆಯೂ ದೋಷ ಹೊರೆಸಲು ನಾನು ಹೋಗುವುದಿಲ್ಲ ಎಂದರು.

ಸಾಧ್ಯವಾದಷ್ಟು ಜೀವ ಉಳಿಸುವ ಪ್ರಯತ್ನ: ಭೂ ಕುಸಿತದಿಂದ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದ ಸಿದ್ದರಾಮಯ್ಯ, ನಾವು ಕೊಡುವ ಪರಿಹಾರದಿಂದ ಅವರ ಜೀವ ಮರಳಿ ಬರುವುದಿಲ್ಲ. ಪ್ರಕೃತಿ ವಿಕೋಪದಿಂದಾಗಿರುವ ಘಟನೆ ಇದು. ಸಾಧ್ಯವಾದಷ್ಟು ಅವರನ್ನು ಉಳಿಸುವ ಪ್ರಯತ್ನ ಮಾಡಲಾಗುವುದು. ಇಲ್ಲದಿದ್ದರೆ ಅವರ ಮೃತ ದೇಹವನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುವುದು ಎಂದರು.

ಉಳುವರೆ ಗ್ರಾಮದಲ್ಲಿ ಮನೆಗಳ ಹಾನಿ:  ಕೂಡಲೆ ಪರಿಹಾರ: ಉಳುವರೆ ಎಂಬ ಗ್ರಾಮದಲ್ಲಿ ಮಳೆಯಿಂದಾಗಿ ಏಳು  ಮನೆಗಳು ಹಾನಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೂಡಲೇ ಪರಿಹಾರ ನೀಡಲಾಗುವುದು ಹಾಗೂ ಪರ್ಯಾಯ ಸ್ಥಳವನ್ನೂ ನೀಡಲಾಗುವುದು ಎಂದರು.

ಇನ್ನು ಕಾರವಾರದ ಜಿ.ಪಂ. ಸಭಾಂಗಣದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್,  ಭೀಮಣ್ಣ ನಾಯ್ಕ್, ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅತೀಕ್, ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್ಪಿ ನಾರಾಯಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Leave a Reply