ಸದನದಲ್ಲಿ ಪ್ರತಿಧ್ವನಿಸಿದ ಪಂಚೆ ಪ್ರಕರಣ

2 years ago

ಬೆಂಗಳೂರು: ತನ್ನ ಮಗನೊಂದಿಗೆ ಸಿನಿಮಾ ನೋಡಲು ಮಾಲ್ ಗೆ ಬಂದ ಹಾವೇರಿಯ ರಾಣೇಬೆನ್ನೂರಿನ ರೈತನಿಗೆ ಪಂಚೆ ಧರಿಸಿ ಬಂದಿದ್ದಾರೆ ಎಂದು ಒಳಗೆ ಪ್ರವೇಶಿಸಲು ಬಿಡದ ಬೆಂಗಳೂರಿನ ಜಿಟಿ ಮಾಲ್ ಗೆ ಒಂದು ವಾರ ಕಾಲ ಬೀಗ ಹಾಕಲಾಗಿದೆ.

ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ  ಮಾಡುತ್ತಿರುವ ಮಗನನ್ನು ನೋಡಲು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ರೈತ ಫಕೀರಪ್ಪ ಆಗಮಿಸಿದ್ದರು. ಇವರನ್ನು ಅವರ ಮಗ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಗೆ ಸಿನಿಮಾ ತೋರಿಸಲು ಕರೆದೊಯ್ದಿದ್ದರು. ಈ ವೇಳೆ ಮಾಲ್ ಸಿಬ್ಬಂದಿ ರೈತ ಪಕೀರಪ್ಪ ಪಂಚೆ ಧರಿಸಿ ಬಂದಿದ್ದಾರೆ ಎಂದು ಹೇಳಿ ಅವರನ್ನು ಒಳಗೆ ಬಿಡಲು ನಿರಾಕರಿಸಿದ್ದರು.

ತಮ್ಮ ತಂದೆಯನ್ನು ಒಳಗೆ ಕರೆದುಕೊಂಡು ಹೋಗಲು ಯತ್ನಿಸಿದ ನಾಗರಾಜ ಮಾಲ್ ಸಿಬ್ಬಂದಿ ಬಳಿ ಪರಿಪರಿಯಾಗಿ ವಿನಂತಿ ಮಾಡಿದ್ದರು. ಆದರೂ ಮಾಲ್ ಸಿಬ್ಬಂದಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಒಳಗೆ ಪ್ರವೇಶಿಸಲು ಬಿಡಲಿಲ್ಲ ಇದರಿಂದ ಆಕ್ರೋಶಗೊಂಡ ಅವರು ಕೆಲಕಾಲ ಅಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ವಿಷಯ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಮಾಲ್ ಆಡಳಿತ ಮಂಡಳಿ ರೈತ ಪಕೀರಪ್ಪ ಅವರಲ್ಲಿ ಕ್ಷಮೆಯಾಚನೆ ಮಾಡಿತ್ತು. ಅಷ್ಟೇ ಅಲ್ಲ ಅವರನ್ನು ಬಾಗಿಲಲ್ಲಿ ತಡೆದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿತ್ತು ಈ ವಿಷಯ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಪಂಚೆ ಧರಿಸಿದ ಶಾಸಕರು: ಜಿಟಿ ಮಾಲ್ ನಡೆಯನ್ನು ವಿರೋಧಿಸಿ ರಾಣೇಬೆನ್ನೂರಿನ ಶಾಸಕ ಪ್ರಕಾಶ್ ಕೋಳಿವಾಡ್ ಸೇರಿದಂತೆ ಹಲವು ಯುವ ಶಾಸಕರು ಪಂಚೆ ಧರಿಸಿಕೊಂಡು ವಿಧಾನಸೌಧ ಪ್ರವೇಶಿಸಿ ವಿಧಾನಸಭೆಯ ಕಲಾಪದಲ್ಲೂ ಪಾಲ್ಗೊಂಡು ಗಮನ ಸೆಳೆದರು.

ಶಾಸಕರ ಈ ಉಡುಗೆಯ ಬಗ್ಗೆ ತಿಳಿದುಕೊಂಡ ಸಭಾಧ್ಯಕ್ಷ ಯುಟಿ ಖಾದರ್ ಅವರು ಸದನದಲ್ಲಿ ತಾವೇ ಈ ವಿಷಯ ಪ್ರಸ್ತಾಪಿಸಿ ರೈತನಿಗೆ ಅಗೌರವ ತೋರಿದ ಮಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಇದನ್ನು ಬೆಂಬಲಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಹಲವರು, ಅತಿರೇಖದ ವರ್ತನೆ ತೋರಿದ ಮಾಲ್ ಅನ್ನು ಮುಚ್ಚಬೇಕು. ಅಲ್ಲದೆ ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸಮ್ಮತಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ರೈತನಿಗೆ ಅಪಮಾನ ಮಾಡಿದ ಮಾಲ್‌ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸದ್ಯ ಈ ಮಾಲ್ ನಲ್ಲಿ ಒಂದು ವಾರ ಯಾವುದೇ ವಹಿವಾಟು ನಡೆಯದಂತೆ ಬೀಗ ಮುದ್ರೆ ಹಾಕಲಾಗುವುದು ಎಂದರು.

ಕ್ಲಬ್‌ಗಳಲ್ಲಿ ಪಂಚೆ, ಚಪ್ಪಲಿ ಹಾಕುವಂತಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಪಂಚೆ ಉಟ್ಟುಕೊಂಡು ಹೋದರೆ ಆಗಲೂ ಹಾಗೆಯೇ ಮಾಡುತ್ತಾರಾ? ಸಾಂಪ್ರದಾಯಿಕ ಉಡುಗೆಗೆ ಗೌರವ ಸಿಗುವಂತಾಗಬೇಕು ಎಂದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ರೈತರಿಗೆ ಮಾಲ್‌ ಪ್ರವೇಶ ಮಾಡಲು ಅವಕಾಶ ಕೊಡದೇ ಇರವುದು ಸರಿಯಲ್ಲ. ಮಾಲ್‌ ಮಾಲೀಕರಾಗಲೀ, ಆಡಳಿತ ವರ್ಗದವರಾಗಲೀ ಅಪಮಾನ ಮಾಡುವುದು, ಘನತೆ, ಸ್ವಾಭಿಮಾನಕ್ಕೆ ಧಕ್ಕೆ ತರುವುದು ಸಂವಿಧಾನದ ಪ್ರಕಾರ ಅವಕಾಶವಿಲ್ಲ. ಇಂತಹ ನಡವಳಿಕೆಯನ್ನು ಖಂಡಿಸುತ್ತೇವೆ. ವರದಿ ಪಡೆದು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

Leave a Reply