ಮಾನವಬಂಧುತ್ವ ವೇದಿಕೆಯಿಂದ ಮೂಢನಂಬಿಕೆ ವಿರೋಧಿ ಕಾರ್ಯಕ್ರಮ

5 years ago

ದಕ್ಷಿಣ ಕನ್ನಡ: ಮಾನವ ಬಂಧುತ್ವ ವೇದಿಕೆ ವತಿಯಿಂದ ಪುತ್ತೂರು ಸದಸ್ಯತ್ವ ಅಭಿಯಾನ ಮತ್ತು ವೈಜ್ಞಾನಿಕ ಮನೋಭಾವನೆ-ಪ್ರಾತ್ಯಕ್ಷಿಕೆ-ಸಂವಾದ ಕಾರ್ಯಕ್ರಮ ನಡೆಯಿತು.

ಇದರ ಭಾಗವಾಗಿ  13.03.2021ಶನಿವಾರದಂದು ಸಂಜೆ ಗಂಟೆ 07.00ರಿಂದ ರಾತ್ರಿ 10.00 ಗಂಟೆಯವರೆಗೆ ಪವಾಡ ಬಯಲು ಕಾರ್ಯಕ್ರಮವನ್ನು ನಡೆಸಲಾಯಿತು. ಅಮವಾಸ್ಯೆಯ ಕತ್ತಲಲ್ಲಿ ಊರಿಗೆ ಬೆಳಕು ಚೆಲ್ಲುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕೆಮ್ಮಾರ ದಲಿತ ಕಾಲೋನಿಯ ವಠಾರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ  ಶ್ಯಾಮಸುಂದರ ರೈ ವಹಿಸಿದ್ದರು.

ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಮತ್ತು ಅವರ ತಂಡದ ಸದಸ್ಯರು ಪವಾಡ ಬಯಲು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅತಿಥಿಗಳಾಗಿ ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗದ ಸಂಚಾಲಕ ಸತೀಶ್‌ಕುಮಾರ್ ಕೆ.ಎಸ್., ದ.ಕ.ಜಿಲ್ಲಾ ಸಂಚಾಲಕ ಚೆನ್ನಕೇಶವ, ಬಂಟ್ವಾಳ ತಾಲೂಕು ಸಂಚಾಲಕ ರಾಜ ಚಂತಿಮಾರ್ ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರಾದ ಬಾಲಕೃಷ್ಣ ಕೆ.ಎಂ. ಮತ್ತು ವೇದಾವತಿ ಭಾಗವಹಿಸಿದ್ದರು.

ಪ್ರಾತ್ಯಕ್ಷಿಕೆ ಕಾರ್ಯಕ್ರಮದ ನಂತರ ಮಾನವ ಬಂಧುತ್ವ ವೇದಿಕೆಯ ಸ್ವರೂಪ, ಕಾರ್ಯಚಟುವಟಿಕೆ ಮತ್ತು ಸೈದ್ಧಾಂತಿಕ ನಿಲುವುಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಸತೀಶ್‌ಕುಮಾರ್ ಕೆ.ಎಸ್. ಚೆನ್ನಕೇಶವ, ರಾಜ ಚಂತಿಮಾರ್ ಮತ್ತು ಮಾನವ ಬಂಧುತ್ವ ವೇದಿಕೆಯ  ಪುತ್ತೂರು ತಾಲೂಕು ಸಂಚಾಲಕ ಅಮಳ ರಾಮಚಂದ್ರ ಸಂಘಟನಾತ್ಮಕ ವಿಚಾರಗಳನ್ನು ಸಭೆಯ ಮುಂದಿಟ್ಟರು.  ಕಾರ್ಯಕ್ರಮದಲ್ಲಿ ನೂತನವಾಗಿ ಮಾನವ ಬಂಧುತ್ವ ವೇದಿಕೆಯ ಸದಸ್ಯರಾಗಿ ಹೆಸರು ನೊಂದಾಯಿಸಿದರು.

ಅಮಳ ರಾಮಚಂದ್ರ ಅತಿಥಿಗಳನ್ನು ಸ್ವಾಗತಿಸಿದರು, ತಾ.ಪಂ. ಸದಸ್ಯ ರಾಮ ಪಾಂಬಾರು ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾಮೂಹಿಕ ಭೋಜನ ನಡೆಯಿತು. ಒಟ್ಟು 125ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಹಾಜರಿದ್ದರು.  ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಂಚಾಲಕ ಅಮಳ ರಾಮಚಂದ್ರ ಆಯೋಜಿಸಿದ್ದರು.

Leave a Reply