ಬಿಟ್‌ಕಾಯಿನ್ ಹಗರಣ: ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಆಗ್ರಹ

4 years ago

ಬೆಂಗಳೂರು: ರಾಜ್ಯದಲ್ಲಿ ಬಿಟ್‌ ಕಾಯಿನ್ ಹಗರಣ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಹಗರಣದ ಸೂತ್ರಧಾರಿ, ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾಗ ಈ ಬೃಹತ್ ಮೊತ್ತದ ಹಗರಣ ಬಯಲಿಗೆ ಬಂದಿತ್ತು ಎಂದು ಕೆಪಿಸಿಸಿ ಹೇಳಿದೆ.

ಅಂದು, ಗೃಹಮಂತ್ರಿಯಾಗಿದ್ದ ಬೊಮ್ಮಾಯಿಯವರೇ, ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಈವರೆಗೂ ರಾಜ್ಯ ಸರ್ಕಾರವು ತನಿಖೆಯ ಪೂರ್ಣ ವಿವರವನ್ನು ಬಹಿರಂಗಪಡಿಸದೇ ಇರುವುದು ಹಲವು ಅನುಮಾನ ಮೂಡಿಸಿದೆ ಎಂದಿದೆ.

ಬೊಮ್ಮಾಯಿಯವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ವಿಚಾರವನ್ನು ಮುಚ್ಚಿಟ್ಟಿದ್ದು, ಇಂಟರ್ ಪೋಲ್ ಹಾಗೂ ಅಂತರಾಷ್ಟ್ರೀಯ ತನಿಖಾ ಸಂಸ್ಥೆಗೆ ವಿಷಯವನ್ನು ತಿಳಿಸದೇ ಇರುವುದು, ಬಿಟ್ ಕಾಯಿನ್ ದಂಧೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಭಾಗಿಯಾಗಿರುವುದನ್ನು ಖಚಿತಪಡಿಸಿದೆ ಎಂದಿದೆ.

ಈ ಹಗರಣದ ಆರೋಪಿ 5000 ಬಿಟ್‌ ಕಾಯಿನ್‌ಗಳನ್ನು ದೋಚಿದ್ದು, ಅದರ ಮೊತ್ತ ಸುಮಾರು 2,283 ಕೋಟಿ ರೂ.ಗಳೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಆದರೆ, ಈ ಬಿಟ್‌ಕಾಯಿನ್‌ಗಳನ್ನು ಆರೋಪಿಯಿಂದ ಇದನ್ನು ಜಪ್ತಿ ಮಾಡಲಾಗಿದೆಯೇ? ಮಾಡಿದ್ದರೆ, ವಶಪಡಿಸಿಕೊಂಡಿರುವ ಬಿಟ್‌ಕಾಯಿನ್ ಸ್ವತ್ತು ಯಾರ ಬಳಿ ಇದೆ? ಎಂಬುದನ್ನು ಸರ್ಕಾರ ಈವರೆಗೂ ಬಹಿರಂಗಪಡಿಸಿಲ್ಲ ಎಂದಿದೆ.

ಈ ಪ್ರಕರಣದ ತನಿಖೆಯ ವಿಚಾರವಾಗಿಯೂ ಗೃಹ‌ಸಚಿವರು ಹಾಗೂ ಮುಖ್ಯಮಂತ್ರಿಗಳು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿಸ್ಸಂಶಯವಾಗಿ ಈ ಬಹುಕೋಟಿ ಹಗರಣದಲ್ಲಿ ಕಾಣದ ಕೈಗಳು ಅಡಗಿರುವುದು ಖಾತರಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರ ಬಿಟ್‌ಕಾಯಿನ್ ಹಗರಣದ ಕುರಿತು ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Leave a Reply