ಕರ್ನಾಟಕ ಅರಣ್ಯ ಇಲಾಖೆಯ ಆದಾಯ ಹೆಚ್ಚಳ: ಈಶ್ವರ್ ಖಂಡ್ರೆ

2 years ago

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ ತನಗೆ ನೀಡಲಾದ ವಾರ್ಷಿಕ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡಿರುವುದೇ ಅಲ್ಲದೆ, ರಾಜ್ಯದ ಅರಣ್ಯ ವಲಯ ವ್ಯಾಪ್ತಿಯ ಜೊತೆಗೆ ತನ್ನ ಆದಾಯವನ್ನೂ ಹೆಚ್ಚಿಸಿಕೊಂಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20ರ ಸಾಲಿನಲ್ಲಿದ್ದ ಅರಣ್ಯ ಇಲಾಖೆಯ ರಾಜಸ್ವ ಸಂಗ್ರಹಣೆ 263.41 ಕೋಟಿಯಿಂದ 2023-24ರ ಸಾಲಿನಲ್ಲಿ 417.84 ಕೋಟಿ ರೂ.ಗೆ ಹೆಚ್ಚಳವಾಗಿದೆ. 2023-24ನೇ ಸಾಲಿನಲ್ಲಿ ಅಧಿಸೂಚಿತ ಕಾಯ್ದಿಟ್ಟ ಅರಣ್ಯ (ಸೆಕ್ಷನ್ 17) ವ್ಯಾಪ್ತಿ 3395.73 ಹೆಕ್ಟೇರ್ ಅಂದರೆ ಸುಮಾರು 8300 ಎಕರೆಯಷ್ಟು ಹೆಚ್ಚಳವಾಗಿದ್ದರೆ, ರಕ್ಷಿತ ಅರಣ್ಯ ಪ್ರದೇಶ (ಸೆಕ್ಷನ್ 33) 184.52 ಹೆಕ್ಟೇರ್ ಅಂದರೆ 456 ಎಕರೆ ಹೆಚ್ಚಳವಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, 3 ಎಕರೆಗಿಂತಲೂ ಕಡಿಮೆ ಭೂಮಿ ಮಾತ್ರ ಇರುವ ಬಡ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಹಾಗೂ 3 ಎಕರೆಗಿಂತಲೂ ಹೆಚ್ಚು ಅರಣ್ಯ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 371 ಪ್ರಕರಣಗಳಲ್ಲಿ ಸುಮಾರು 2602.30 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ತೆರವು ಮಾಡಲಾದ ಅರಣ್ಯ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು 1500 ಕೋಟಿ ರೂ. ಆಗುತ್ತದೆ ಎಂದರು.

ಕೋಲಾರದಲ್ಲಿ ಅತಿ ಹೆಚ್ಚು 1392.41ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಮಡಿಕೇರಿಯಲ್ಲಿ 5 ಎಕರೆ 50 ಗುಂಟೆ, ಬೆಂಗಳೂರಿನ ಕೊತ್ತನೂರಿನಲ್ಲಿ 17 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 500 ಕೋಟಿ ರೂ.ಗೂ ಅಧಿಕ ಎಂದರು.

ಕಳೆದ ವರ್ಷ ವಿಶ್ವ ಪರಿಸರ ದಿನದಂದು ಘೋಷಿಸಿದಂತೆ 5ಕೋಟಿ 40ಲಕ್ಷ ಸಸಿಗಳನ್ನು ರಾಜ್ಯದಾದ್ಯಂತ ನೆಡಲಾಗಿದ್ದು, ಇವುಗಳ ಪೈಕಿ ಎಷ್ಟು ಬದುಕುಳಿದಿವೆ ಎಂದು ತಿಳಿಯಲು ಆಡಿಟ್ ಮಾಡಿ 3 ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಸಾಲಿನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕಾಗಿ ಹೆಚ್ಚುವರಿಯಾಗಿ 100 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.

Leave a Reply