ಮುಂಬೈ: ಮುಂಬೈನ ಕರಿ ರಸ್ತೆಯಲ್ಲಿರುವ 61 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಬಲಿಯಾದ ವ್ಯಕ್ತಿಯನ್ನು ಅರುಣ್ ತಿವಾರಿ (30) ಎಂದು ಗುರುತಿಸಲಾಗಿದೆ.
ಇದ್ದಕ್ಕಿದ್ದಂತೆ ವ್ಯಾಪಿಸಿಕೊಂಡ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸೆಕ್ಯೂರಿಟಿ ಗಾರ್ಡ್ 19ನೇ ಅಂತಸ್ತಿನ ಫ್ಲಾಟ್ನಿಂದ ಹೊರಗೆ ಬಂದಿದ್ದು, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಮಾರ್ಗಮಧ್ಯದಲ್ಲೇ ಅವರು ಅಸುನೀಗಿದ್ದಾರೆ.
ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಹಾಲ್ ಮಾಹಿತಿ ನೀಡಿದ್ದಾರೆ.
ಬೆಂಕಿ ನಂದಿಸಲು 15 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಇತರ ಮಹಡಿಗಳಿಗೆ ವ್ಯಾಪಿಸಿದಂತೆ ತಡೆದಿವೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.




