ಪ್ರಜ್ವಲ್ ರೇವಣ್ಣ ಖಾತೆಗಳ ಮುಟ್ಟುಗೋಲು ಹಾಕಿಕೊಳ್ಳುವ ಚಿಂತನೆ

2 years ago

ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಗಳಲ್ಲಿ ಎಸ್‍ಐಟಿ ಗೆ ಬೇಕಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯಲು ತನಿಖಾ ತಂಡ ನಾನಾ ಮಾರ್ಗಗಳ ಮೊರೆ ಹೋಗುತ್ತಿದೆ.

ಬ್ಲೂ ಕಾರ್ನರ್ ನೋಟಿಸ್ ಸೇರಿದಂತೆ ಹಲವಾರು ಕಾನೂನು ಕ್ರಮಗಳನ್ನು ಕೈಗೊಂಡರೂ ತಲೆಮರೆಸಿಕೊಂಡಿರುವ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಹಿಂತಿರುಗಿಲ್ಲ. ಬೆಂಗಳೂರಿಗೆ ವಾಪಸ್ ಆಗಲು ಸುಮಾರು ಐದು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿರುವ ಅವರು ಇದೀಗ ಜರ್ಮನಿಯಿಂದ ಲಂಡನ್ ನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂಗ್ಲೆಂಡ್‌ನಲ್ಲಿರುವ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಪ್ರಜ್ವಲ್‌ ತನ್ನ ಇಬ್ಬರು ಗೆಳೆಯರೊಂದಿಗೆ ರೈಲು ಮೂಲಕ ಜರ್ಮನಿಯ ಮ್ಯೂನಿಚ್‌ನಿಂದ ಲಂಡನ್‌ಗೆ ಹೋಗಿದ್ದಾರೆ ಎಂದು ಗೊತ್ತಾಗಿದೆ.

ವಿದೇಶದಲ್ಲಿರುವ ಪ್ರಜ್ವಲ್‌ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಎಸ್‌‍ಐಟಿ  ನೋಟಿಸ್‌‍ ಗಳನ್ನು ಕೊಟ್ಟಿತ್ತು. ಇದಕ್ಕೆ ಪ್ರಜ್ವಲ್ ಪರ ವಕೀಲರು ವಿಚಾರಣೆಗಾಗಿ ಕಾಲಾವಕಾಶ ಕೇಳಿದ್ದರು. ಕಾಲಾವಕಾಶ ಅವಧಿ ಮುಗಿದರೂ ಪ್ರಜ್ವಲ್‌ ವಿಚಾರಣೆಗೆ ಹಾಜರಾಗದ ಕಾರಣ ಲುಕ್‌ಔಟ್‌ ನೋಟಿಸ್‌‍ ಸಹ ಜಾರಿ ಮಾಡಲಾಗಿತ್ತು.

ನಂತರ ಬ್ಲೂಕಾರ್ನರ್‌ ನೋಟಿಸ್‌‍ ನೀಡಿದ್ದರೂ ಪ್ರಜ್ವಲ್‌ ವಿಚಾರಣೆಗೆ ಬಂದಿಲ್ಲ. ಹಾಗಾಗಿ ಇದೀಗ ರೆಡ್‌ ಕಾರ್ನರ್‌ ನೋಟಿಸ್‌‍ ನೀಡಲು ಎಸ್‌‍ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ಅವರನ್ನು ಆರ್ಥಿಕವಾಗಿ ಕಟ್ಟಿಹಾಕಲು ವಿಶೇಷ ತನಿಖಾ ತಂಡ ಮುಂದಾಗಿದೆ.

ಪ್ರಜ್ವಲ್ ರೇವಣ್ಣಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯಲಾಗಿದ್ದು, ಅವರಿಗೆ ಸೇರಿದ ಬ್ಯಾಂಕ್ ಅಕೌಂಟ್‍ಗಳನ್ನು ಫ್ರೀಝ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈಗಾಗಲೇ ಪ್ರಜ್ವಲ್ ಖಾತೆಗೆ ಹಣ ಸಂದಾಯ ಆಗಿರುವ ಎಲ್ಲಾ ಮಾಹಿತಿಯನ್ನು ಎಸ್‍ಐಟಿ ಕಲೆಹಾಕಿದೆ. ಎಸ್‍ಐಟಿ ಮೂಲಗಳ ಮಾಹಿತಿಯ ಪ್ರಕಾರ ಪ್ರಜ್ವಲ್ 7 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಆ ಬ್ಯಾಂಕ್‍ಗಳ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಪಡೆದಿದ್ದಾರೆ.

ಈ ಕುರಿತು ಬ್ಯಾಂಕುಗಳ ಜೊತೆ ಸಮಾಲೋಚನೆ ನಡೆಸಿರುವ ತನಿಖಾ ತಂಡ, ಪ್ರಜ್ವಲ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅವರಿಗೆ ಹಣಕಾಸಿನ ಲಭ್ಯತೆ ಇಲ್ಲದಂತೆ ಮಾಡಿ ಬೆಂಗಳೂರಿಗೆ ಕರೆತರುವ ಪ್ರಯೋಗಕ್ಕೆ ಮುಂದಾಗಿದೆ.

Leave a Reply