ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ: ಎಚ್.ಡಿ.ಕುಮಾರಸ್ವಾಮಿ

2 years ago

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಆರೋಪದ ಪೆನ್ ಡ್ರೈವ್ ಬಹಿರಂಗ ಪ್ರಕರಣದ ಸೂತ್ರಧಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ನಡೆಯುತ್ತಿರುವ ವಿಶೇಷ ತನಿಖಾ ತಂಡದಿಂದ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಎಸ್ ಐ ಟಿ ಅಧಿಕಾರಿಗಳು ಸಿಎಂ ಮತ್ತು ಡಿಸಿಎಂ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಈ ಪ್ರಕರಣದಿಂದ ರಾಜ್ಯದ ಘನತೆ ಮತ್ತು ಗೌರವಕ್ಕೆ ದೊಡ್ಡ ರೀತಿಯ ಹಾನಿಯಾಗಿದೆ ಎಂಬ ಕಳವಳ ತಮ್ಮನ್ನು ಕಾಡುತ್ತಿದೆ. ಹೀಗಾಗಿ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದರು.

ಇಲ್ಲಿಯವರೆಗೆ ತನಿಖಾ ತಂಡ ಪೆನ್ ಡ್ರೈವ್ ಯಾವ ರೀತಿಯಲ್ಲಿ ಬಹಿರಂಗವಾಯಿತು? ಇದನ್ನು ಬಹಿರಂಗಪಡಿಸಿದವರು ಯಾರು? ಎಂಬ ಬಗ್ಗೆ ತನಿಖೆ ನಡೆಸುತ್ತಿಲ್ಲ. ಸುಳ್ಳು ಅಪಹರಣ ಪ್ರಕರಣ ದಾಖಲಿಸಿ ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದ್ದಾರೆ. ಯಾವುದೇ ನೋಟಿಸ್ ನೀಡದೆ ವಕೀಲ ದೇವರಾಜ ಗೌಡ ಅವರನ್ನು ಕರೆಯಿಸಿಕೊಂಡು ಸುಳ್ಳು ಹೇಳಿಕೆ ದಾಖಲಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂದರು.

ಸಿಎಂ ಅವರಿಗೆ ಕನಿಷ್ಠ ಕಾಳಜಿ ಹಾಗೂ ನೈತಿಕತೆ ಇದ್ದರೆ ತಕ್ಷಣವೇ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು. ಇಲ್ಲವೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದರು.

ರಾಜಕೀಯ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಲಭ್ಯವಿರುವ ಎಲ್ಲ ವಾಮಮಾರ್ಗಗಳನ್ನು ಬಳಸಿ ಪೆನ್ ಡ್ರೈವ್ ಪ್ರಕರಣವನ್ನು ಸಿದ್ಧಪಡಿಸಿದ್ದಾರೆ. ದೇವೇಗೌಡರ ಕುಟುಂಬವನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದ ವ್ಯವಸ್ಥಿತವಾಗಿ ಇದನ್ನು ರೂಪಿಸಿದ್ದಾರೆ. ಇಂತಹ ಪಿತೂರಿಗಳನ್ನು ಮಾಡುವುದರಲ್ಲಿ ಪ್ರಕರಣಗಳನ್ನು ಸಿದ್ಧಪಡಿಸುವಲ್ಲಿ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ ಎಂದರು.

ಈ ಪ್ರಕರಣ ಬಹಿರಂಗಗೊಂಡ ನಂತರ ಮಾನಸಿಕವಾಗಿ ಅಧೀರಗೊಂಡಿರುವ ತಮ್ಮ ತಂದೆ ಹಾಗೂ ತಾಯಿಯನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರೆ ತಮ್ಮ ಬಗ್ಗೆ ಸಿಎಂ ವ್ಯಂಗ್ಯವಾಗಿ ಮಾತನಾಡುತ್ತಾರೆ. ಇವರಿಗೆ ತಂದೆ ತಾಯಿಯ ಪ್ರೀತಿ ಏನು ಗೊತ್ತು? ಇಂತವರು ತಮ್ಮ ರಾಜ್ಯದ ಮುಖ್ಯಮಂತ್ರಿಯಾಗಿರುವುದು ದುರ್ದೈವ ಎಂದರು.

ಈ ಚುನಾವಣೆ ಮುಗಿದ ಮೇಲೆ ಬಿಜೆಪಿ ಜೊತೆಗೆ ತಮ್ಮ ಪಕ್ಷದ ಮೈತ್ರಿ ಇರುತ್ತದೆಯೋ ಇಲ್ಲವೋ ಎಂಬ ಬಗ್ಗೆ ತಾವು ತಲೆ ಕೆಡಿಸಿಕೊಂಡಿಲ್ಲ. ಈ ಪ್ರಕರಣದಿಂದ ರಾಜ್ಯದ ಪ್ರತಿಷ್ಠೆಗೆ ಆಗಿರುವ ಕಳಂಕ ತೊಳೆದು ಹಾಕಬೇಕು ಎನ್ನುವುದು ತಮ್ಮ ಉದ್ದೇಶವಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಬಿಜೆಪಿ ನಿರ್ಧರಿಸಬೇಕು. ತಮ್ಮ ಪಕ್ಷ ಈ ವಿಷಯದಲ್ಲಿ ಅತ್ಯಂತ ಸ್ಪಷ್ಟವಾಗಿದ್ದು, ಈ ಮೈತ್ರಿಗೆ ಮುಂದುವರಿಯಬೇಕಾಗಿದೆ ಎಂದರು.

Leave a Reply