ಪ್ರಜ್ವಲ್ ರೇವಣ್ಣ ಪ್ರಕರಣ: ಅಮಿತ್ ಶಾ ಅಸಮಾಧಾನ

2 years ago

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದ ಸುಳಿಯಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಬಿಜೆಪಿ ನಾಯಕರಿಗೆ ಮುಜುಗರ ತಂದಿದೆ. ಪ್ರಜ್ವಲ್ ರೇವಣ್ಣ ಎನ್ ಡಿ ಎ ಅಭ್ಯರ್ಥಿಯಾಗಿ ಹಾಸನದಿಂದ ಚುನಾವಣೆಗೆ ಸ್ಪರ್ಧಿಸಿದ್ದು ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಪ್ರಹಾರ ನಡೆಸಲು ಅವಕಾಶ ಕಲ್ಪಿಸಿದೆ.

ಈ ಪ್ರಕರಣ ಕೇವಲ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಸುದ್ದಿ ಮಾಡುತ್ತಿರುವ ಬೆನ್ನೆಲ್ಲೇ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಇಂತಹ ಗಂಭೀರ ಆರೋಪ ಇದೆ ಎಂಬ ಮಾಹಿತಿ ಇದ್ದರೂ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು ಯಾಕೆ? ಹೈಕಮಾಂಡ್ ಗೆ ಈ ವಿಷಯವನ್ನು ತಿಳಿಸದೆ ಮುಚ್ಚಿಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿರುವ ಅಮಿತ್ ಶಾ ಅವರು ಇದರಿಂದ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಮುಜುಗರ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಚುನಾವಣೆ ಸಮಯದಲ್ಲಿ ಈ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ವರ್ಚಸ್ಸಿಗೆ ತರುವ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದೊಂದು ಅನಗತ್ಯ ವಿವಾದವಾಗಿದ್ದು, ಬಿಜೆಪಿ ನಾಯಕರು ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ತನಿಖೆ ವಿಚಾರದಲ್ಲಿ ಮಾತಾಡಬಾರದು. ವಿವಾದಾತ್ಮಕ ಹೇಳಿಕೆ ಕೊಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಅಮಿತ್ ಶಾ ಅವರ ಸೂಚನೆಯ ಹಿನ್ನೆಲೆಯಲ್ಲಿಈ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ನಾಯಕರು ಯಾರೂ ಸಮರ್ಥನೆ ಮಾಡುತ್ತಿಲ್ಲ. ಪ್ರಕರಣದ ಬಗ್ಗೆ ಬಿಜೆಪಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅಂತರ ಕಾಯ್ದುಕೊಳ್ಳುತ್ತಿದೆ. ಜೆಡಿಎಸ್ ಎನ್ಡಿಎ ಭಾಗ ಅಷ್ಟೇ. ಹಾಗಾಗಿ ಪ್ರಜ್ವಲ್ ಮೈತ್ರಿ ಅಭ್ಯರ್ಥಿ. ಅವರು ಮಾಡಿದ ತಪ್ಪಿಗೆ ನಾವು ಹೊಣೆ ಅಲ್ಲ ಎಂದು ವಾದಿಸುತ್ತಿದೆ.

Leave a Reply