ಬಂಜಾರರ ಬದುಕಿನ ಕಥನ ಸಂಕಲನ ಗೋರ್ ಮಾಟಿ

2 years ago

ಬಂಜಾರ ನಾಟಕ “ಗೋರ್ ಮಾಟಿ” ಪ್ರಯೋಗದ ನಿರ್ದೇಶಕರಾದ ಸಿ. ಬಸವಲಿಂಗಯ್ಯ ಅವರು ನಮ್ಮ ನಡುವೆ ಇರುವ ಒಬ್ಬ ಪ್ರಯೋಗಶೀಲಶ್ರೇಷ್ಠ ರಂಗ ನಿರ್ದೇಶಕರು. ಇವರು ನಾನು ಪಿ ಎಚ್ ಡಿ ಸಂಶೋಧನೆ ಮಾಡಿದ ರಂಗ ಗುರುಗಳಾದ ರಂಗಭೀಷ್ಮ ಬಿ.ವಿ ಕಾರಂತರ ಶಿಷ್ಯರು ಎಂಬುದು ಇಲ್ಲಿ ವಿಶೇಷ.

ರಂಗಾಯಣ ಹಾಗೂ ಎನ್ ಎಸ್ ಡಿ ಆರ್ ಆರ್ ಸಿ ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದವರು. ಈ ಪ್ರಯೋಗವಾಗಲು ವಿಶೇಷ ಕಾಳಜಿ ವಹಿಸಿದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮತ್ತು ಮುಖ್ಯಮಂತ್ರಿಗಳು, ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳು ಜಂಟಿ ಕಾರ್ಯದರ್ಶಿ ನಿರ್ಮಲ ಮಠಪತಿ, ಸಾಕಷ್ಟು ಜನ.

ಬಸವಲಿಂಗಯ್ಯ ಅವರು ಕುಸುಮಬಾಲೆ, ಮಲೆಗಳಲ್ಲಿ ಮದುಮಗಳು, ಕಾ ತಾ ಚಿ ಕಥಾ ರಂಗದಂತಹ ನೂರಾರು ಶ್ರೇಷ್ಠ ರಂಗ ಕೃತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದವರು. ಸ್ವತಹ ಕುವೆಂಪು ಅವರು ತಮ್ಮ ನಾಟಕ ಕೃತಿಗಳನ್ನು ಮನಪಟಲದಲ್ಲಿ ಕಲ್ಪಿಸಿಕೊಳ್ಳಿ ರಂಗ ಪ್ರಯೋಗಕ್ಕೆ ನಿಲುಕುವುದಿಲ್ಲ ಎಂದಿದ್ದರು. ಈ ಮಾತನ್ನು ಚಾಲೆಂಜ್ ಆಗಿ ತೆಗೆದುಕೊಂಡ ಬಸವಲಿಂಗಯ್ಯ ಶ್ರೇಷ್ಠ ರಂಗಕೃತಿಗಳಾಗಿ ಕುವೆಂಪು ಅವರ ನಾಟಕಗಳನ್ನು ಕೃತಿಗಳನ್ನು ಪ್ರಯೋಗಿಸಿ ಯಶಸ್ವಿಯಾದವರು.

ಬಸವಲಿಂಗಯ್ಯ ಅವರು ಇತ್ತೀಚೆಗೆ “ಬಂಜಾರರ ಬದುಕಿನ ಕಥನ ಸಂಕಲನ ಗೋರ್ ಮಾಟಿ” ಹೆಸರಿನಲ್ಲಿ ರಂಗಾಯಣದ ಮೂಲಕ ರಂಗ ಪ್ರಯೋಗ ಕಟ್ಟಿಕೊಟ್ಟಿದ್ದಾರೆ. ಇವರು ವಿಶೇಷವಾಗಿ ನಮ್ಮ ಬಂಜಾರರ ಪ್ರಥಮ ಬರಹಗಾರ ಬೆನಕನಹಳ್ಳಿ ಜಿ ನಾಯಕ್ ಅವರ ಕಥೆ, ಬಿ . ಟಿ ಲಲಿತಾ ನಾಯಕ ಅವರ ಹಬ್ಬ ಮತ್ತು ಬಲಿ ಶಾಂತನಾಯಕ್ ಅವರ ಗೋರ್ಮಾಟಿ ಅಲ್ಲದೆ ಹತ್ತಾರು ಕೃತಿಗಳ ಸಾರವನ್ನು ಇಲ್ಲಿ ಸಂಗ್ರಹಿಸಿದ್ದಾರೆ. ವಿಶೇಷವಾಗಿ ಬಿಡಿಬಿಡಿಯಾಗಿ ಬಂಜಾರರ ಸಾಹಿತಿಗಳು, ಕಲಾವಿದರು ಬರೆದಂತ ಲೇಖನಗಳು, ಕೃತಿಗಳು ನಾಟಕಕ್ಕೆ ಆಕರವಾಗಿ ಬಳಸಿದ್ದಾರೆ. ಬಂಜಾರರ ಮೂರನೇ ಶತಮಾನದಿಂದ ಹಿಡಿದು ಇಂದಿನವರೆಗಿನ ಇತಿಹಾಸದ ಬಿಡಿ ಬಿಡಿ ಚಿತ್ರಣವನ್ನು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಪ್ರಯೋಗದಲ್ಲಿ ಮೂಲತಃ ಅಲೆಮಾರಿ ಬುಡಕಟ್ಟು ಸಮುದಾಯದ ಹಿನ್ನೆಲೆ. ಇವರ ಕೌಶಲ್ಯ, ವ್ಯಾಪಾರ ವೃತ್ತಿ ಇವರ ಮೇಲೆ ವಿವಿಧ ರೀತಿಯ ಶೋಷಣೆಗಳು, ದಮನಕಾರಿ ಕಾನೂನುಗಳ ಜಾರಿಯ ಪರಿಣಾಮಗಳು, ಇವರು ಸಾಮಾಜಿಕವಾಗಿ, ಆರ್ಥಿಕ ವಾಗಿ ಕೊಟ್ಟ ಪ್ರಥಮಗಳು. ಇವರ ಹೋರಾಟ, ಬಂಜಾರರ ಮೂಲಪುರುಷ ಧನಗಾಹಿ ದಾದಾ ಮೂಲನು ಕೃಷ್ಣನ ಸ್ನೇಹಿತನಾಗಿ ಮೊದಲು ಕೃಷ್ಣನಿಗೆ ಅಪ್ಪನಿಂದ ಬಳುವಳಿಯಾಗಿ ಬಂದ ಕೊಳ ಲುಕೊಟ್ಟ ಮಾಹಿತಿ, ಬೆನಕನಹಳ್ಳಿ ಜಿ ನಾಯಕ್ ಅವರ ಕೃತಿಯಿಂದ ಪಡೆದದ್ದು.

ಬಂಜಾರರ ಪಂಚಾಯಿತಿ ವ್ಯವಸ್ಥೆ, ಸರ್ಕಾರದ ನೀತಿಗಳು, ಬಂಜಾರ ಪ್ರಮುಖರು ಎಲ್ಲರನ್ನು ಕೃತಿ ಒಳಗೊಳ್ಳುತ್ತದೆ. ಈ ಪ್ರಯೋಗವನ್ನು ಒಟ್ಟಾರೆ ನಿರ್ದೇಶಕರು ದೃಶ್ಯಕಾವ್ಯವಾಗಿಸಿದ್ದಾರೆ. ಈ ಕೃತಿಯು ಬಿ ವಿ ಕಾರಂತರ ಗೋಕುಲ ನಿರ್ಗಮನವನ್ನು ನೆನೆಪೀಸುವುದು. ಮತ್ತು ಇದನ್ನು ಮೀರಿದ ದೃಶ್ಯಕಾವ್ಯದಂತೆ ಕಟ್ಟಿದ್ದಾರೆ. ಬಂಜಾರರ ಸಾಮಾಜಿಕ ಆರ್ಥಿಕ ಸ್ಥಿತಿಗತಿ, ಉತ್ತಮವಾಗಿ ಕಟ್ಟಿ ಕೊಟ್ಟಿದ್ದಾರೆ. ಬಸವಲಿಂಗಯ್ಯ ಅವರು ಈ ಗೋರಮಾಟಿ ನಾಟಕದ ಪ್ರಯೋಗದಲ್ಲಿ ಹೊಸ ರಂಗಭೂಮಿ ಶೈಲಿಯನ್ನು ಬಳಸಿದ್ದಾರೆ. ಬಸವಲಿಂಗಯ್ಯನವರ ರಂಗ ಶೈಲಿಯಲ್ಲಿ ಗೋರ್ಮಾಟಿ ಪ್ರಯೋಗ ಒಂದು ದೃಶ್ಯ ಕಾವ್ಯವಾಗಿದೆ.

ಇಲ್ಲಿ ಇಡೀ ಬಂಜಾರರ ಕಥೆಯನ್ನು ನಾಟಕದ ರೂಪದಲ್ಲಿ ಓದುವ ಆಟವನ್ನಾಗಿ ಪರಿವರ್ತಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ನೂತನ ರಂಗಭಾಷೆಯನ್ನು ಬಳಸಿದ್ದಾರೆ. ಈ ಪ್ರಯೋಗದ ಕಥೆಗಳೆಲ್ಲವೂ (ಲಲಿತ ನಾಯಕ್, ಶಾಂತ ನಾಯಕ್, ಬೆನಕನಹಳ್ಳಿ ಜಿ ನಾಯಕ್, ಡಿ ರಾಮ ನಾಯಕ್, ಡಾ ಎ ಆರ್ ಗೋವಿಂದ ಸ್ವಾಮಿ, ಜಾಧವ್, ಭಾಂಗ್ಯ ಭೂಕ್ಯ, ಅನಂತನಾಯ್ಕ, ರವೀಂದ್ರನಾಥ ಹೀಗೆ ಅನೇಕರ ಬರವಣಿಗೆಗಳು, ಕಥೆಗಳು, ನೇರವಾಗಿ ಸಂಭಾಷಣೆ ಮೂಲಕ ಕೃತಿಯನ್ನು ಉತ್ತಮವಾಗಿಸಿರುವುದು ಸೇರಿದಂತೆ) ಬಸವಲಿಂಗಯ್ಯ ಅವರಿಗೆ ಇಲ್ಲಿ ಎಲ್ಲವೂ ತಲ್ಲಣಗಳ ಕಥೆಗಳಂತೆ ಕಂಡಿದೆ.

ಒಂದು ರೀತಿ ಮ್ಯಾಜಿಕಲ್, ವಾಸ್ತವತೆ ಮತ್ತು ಕ್ರಿಯಾ ವಿಧಿ ರಂಗಶೈಲಿ ಬಳಸಿ ದೃಶ್ಯ ಕಟ್ಟಿದ್ದಾರೆ. ಬಸವಲಿಂಗಯ್ಯ ಅವರು ತಮ್ಮ ಪ್ರಯೋಗಗಳಲ್ಲಿ ನ್ಯಾಚುರಲಿಸ್ಟಿಕ್, ವಾಸ್ತವವಾದ (ರಿಯಲಿಸಂ) ಮುಂತಾದ ಭಿನ್ನ ರಂಗಶೈಲಿಗಳಲ್ಲೂ ಪ್ರಯೋಗ ಕಟ್ಟುವುದುಂಟು. ಒಟ್ಟಾರೆಯಾಗಿ ಸಿ ಬಸವಲಿಂಗಯ್ಯ ಅವರ ರಂಗಶೈಲಿ ಈ ಪ್ರಯೋಗದ ಮೂಲಕ ಹೀಗೆ ಗ್ರಹಿಸಬಹುದು.

ಭಾರತದಲ್ಲಿರುವ ಅಸಂಖ್ಯಾತ ತಳ ಸಮುದಾಯಕ್ಕೆ ಹೊಂದುವ ಒಂದು ರಂಗಶೈಲಿ ಬಸವಲಿಂಗಯ್ಯ ಬಳಸಿದ್ದಾರೆನ್ನಬಹುದು. ಬಸವಲಿಂಗಯ್ಯ ಅವರ ರಂಗ ಶೈಲಿ ಗಮನಿಸಿದರೆ ಇವರಿಗೆ ನಾಟಕ ಒಂದು ಶಾಸ್ತ್ರವಾಗಿ ನಿಯಮದ ಚೌಕಟ್ಟು ಅನಗತ್ಯ. ಇದೇ ರಂಗಶೈಲಿಯನ್ನು ಕಾತಾಚಿ ಕಥಾ ರಂಗ ಪ್ರಯೋಗದಲ್ಲೂ ಬಳಸಿದ್ದರು. ಕಥಾ ಚಿಕ್ಕಣ್ಣನವರ ಸಣ್ಣ ಸಣ್ಣ ಕಥೆಗಳನ್ನು ನಾಟಕವಾಗಿಸಿದ ಸಂದರ್ಭದಲ್ಲಿ. ಒಟ್ಟಾರೆ ಬಸವಲಿಂಗಯ್ಯನವರು ಈ ಪ್ರಯೋಗದ ಮೂಲಕ ನಮ್ಮ ಕಾಲವನ್ನೇ ಪುರಾಣವಾಗಿ ಮಾಡಿದ್ದಾರೆ. ಬಸವಲಿಂಗಯ್ಯ ಅವರ ರಂಗಕೃತಿಗೆ ರಂಗಸಜ್ಜಿಕೆ ಶಶಿಧರ ಅಡಪ ಮಾಡಿರುವುದು ವಿಶೇಷ. ಇಲ್ಲಿ ತ್ರಿಕೋನ, ಚತುರ ಕೋನ ಚೌಕಟ್ಟುಗಳು, ಸಾಂಕೇತಿಕವಾದ ವಸ್ತುಗಳಿಂದ ಪರಿಪೂರ್ಣವಲ್ಲದ ಶೈಲಿಯ ಬಳಕೆ ಇದೆ. ತಿರುಗಾಟಕ್ಕೆ ಅನುಕೂಲವಾಗುವಂತೆ ರೂಪಿಸಿದ್ದಾರೆ. ಕಥೆಯ ಆರಂಭ ಬೆಳವಣಿಗೆ ಕ್ಲೈಮ್ಯಾಕ್ಸ್, ಪರಿಹಾರ, ಅಂತ್ಯ, ಸಂದೇಶ ಎಂಬ ನೀತಿಗೆ ವಿರುದ್ಧವಾಗಿ ಕಥೆಗಳನ್ನು ಎಪಿಸೋಡಿಕ್ ಅಂದರೆ ಮೆಘಾ ಧಾರಾವಾಹಿಯಂತೆ ಯಾವುದೇ ಕಥೆಯನ್ನು ಸೇರಿಸುವ ತೆಗೆಯುವ ಸರಳ ಶೈಲಿ ಬಳಕೆ ಮಾಡಿದ್ದಾರೆ.

ಒಟ್ಟಾರೆ ಒಂದೊಂದು ಕಥೆಯು ಪ್ರತ್ಯೇಕ ದೃಶ್ಯ ಕಾವ್ಯದಂತೆ ಗೋಚರಿಸುತ್ತದೆ. ಒಟ್ಟಾರೆ ಅಸಂಖ್ಯಾತ ತಳ ಸಮುದಾಯದ ಪ್ರತಿನಿಧಿಯಾಗಿ ಇಲ್ಲಿ ಕೆಲಸ ಮಾಡಿದ್ದಾರೆ. ಬಸು ಅವರಿಗೆ ನಾಟಕ ಯಾರನ್ನು ಹೊಗಳಲು ಅಥವಾ ತೆಗಳಲು ಅಲ್ಲ. ಅರಿವು ಮೂಡಿಸಿ ಚಿಂತನೆಗೆ ಹಚ್ಚುವ, ಬೋಧಿ ವೃಕ್ಷದಂತೆ. ಒಟ್ಟಾರೆ ಈ ಪ್ರಯೋಗ ಚರ್ಚೆಗೆ ಗ್ರಾಸವಾಗುತ್ತದೆ. ಇವರು ಇದೇ ರೀತಿ ಕುಸುಮಬಾಲೆ, ಮಲೆಗಳಲ್ಲಿ ಮದುಮಗಳು, ಕಾತ ಚಿಕ್ಕಣ್ಣನವರ ಕಾತಚಿ ಕಥಾರಂಗದಲ್ಲೂ ಬಳಸಿದ್ದರು. ಈ ಪ್ರಯೋಗದಲ್ಲಿ ನಟನೆ, ಸಂಗೀತ, ವಸ್ತ್ರ ವಿನ್ಯಾಸ ಗಾಯನ ಸಂಪೂರ್ಣ ರಂಗ ಪ್ರಯೋಗದ ಶ್ರೀಮಂತಿಕೆ ಪೂರಕವಾಗಿ (total Theatre Concept)ಕೆಲಸ ಮಾಡಿವೆ. ಈ ಪ್ರಯೋಗ ಕಥೆ ಓದದ ಜನರಿಗೂ ಕಥೆಯನ್ನು ದೃಶ್ಯ ರೂಪದಲ್ಲಿ ಓದಿಸುತ್ತದೆ. ಅಲ್ಲದೆ ಜೀವನದ ಅನುಭವವಾಗಿ ಮತ್ತು ನಮ್ಮ ನಡುವೆ ಇರುವ ಬರಹಗಾರರನ್ನು ಸಂಪೂರ್ಣವಾಗಿ ಪರಿಚಯಿಸುತ್ತದೆ. ಪ್ರಯೋಗದಲ್ಲಿ ವಸ್ತ್ರ ವಿನ್ಯಾಸ ಪ್ರಮೋದ್ ಶಿಗ್ಗಾoವ್, ಶಶಿಕಲಾ ಇವರು ನಾವು ಹೇಳಿದಂತೆ ನಮ್ಮ ಬಂಜಾರರ ಸುರು ಗೊಂಡನ ಕೊಪ್ಪಕ್ಕೆ ತೆರಳಿ ಸಂಶೋಧಿಸಿದ್ದಾರೆ. ರಂಗಸಜ್ಜಿಕೆ ಮತ್ತು ಶಾಡೋ ಪಪ್ಪೆಟ್ ಅನ್ನು ಶಶಿಧರ ಅಡಪ ಉತ್ತಮವಾಗಿ ತಂದು ನೂರಾರು ಎತ್ತುಗಳು, ಗಾಡಿಗಳ ದೃಶ್ಯಗಳು, ಬಂಜಾರ ಟೆಂಟುಗಳ ಕಲ್ಪನೆಯನ್ನು ಉತ್ತಮ, ನೈಜವಾಗಿ ಕಟ್ಟಿ ಕೊಟ್ಟಿದ್ದಾರೆ.
ನೃತ್ಯ ಸಂಯೋಜನೆ ನೇಸರ ಬಂಜಾರ ದಾಟಿಯನ್ನು ಹಿಡಿದಿಟ್ಟಿದ್ದಾರೆ. ಬಂಜಾರ ಭಾಷೆ ಕೊಡುಗೆ ಡಾ ಎ ಆರ್ ಗೋವಿಂದಸ್ವಾಮಿ, ಬೆಳಕು ವಿನ್ಯಾಸ, ಕೃಷ್ಣಕುಮಾರ್ ನಾರಣ ಕಜೆ, ಸಂಗೀತ ನಿರ್ವಹಣೆ ಧನಂಜಯ್ ಆರ್ ಸಿ ಮುಂತಾದವರು ಹಾಗೂ ಎಲ್ಲಾ ಹೊಸ ಹಾಗೂ ಹಳೆಯ ಕಲಾವಿದರು ತರಬೇತಿಯನ್ನು ಪಡೆದು ರಂಗಾಯಣದ ಕಲಾವಿದರನ್ನೆ ಮೀರಿಸುವಂತಹ ಒಂದು ಓಘದಲ್ಲಿ,ಭಾವಪೂರ್ಣ ಅಭಿನಯವನ್ನು ನೀಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ರಂಗಾಯಣದ ಕಲಾವಿದರೇ (ನಂದಿನಿ, ಗೀತಾ ಮೊಂತಾಡ್ಕ ) ಕೆಲಸ ಮಾಡಿರುವುದು ರಂಗಕೃತಿಯ ಗುಣಮಟ್ಟ ಹೆಚ್ಚಿಸಿದೆ.

  • ಡಾ ಎ ಆರ್ ಗೋವಿಂದ ಸ್ವಾಮಿ, ರಂಗಕರ್ಮಿಗಳು

Leave a Reply