ಜೆ.ಸಿ.ಮಾಧುಸ್ವಾಮಿ, ಡಿ.ವಿ.ಸದಾನಂದಗೌಡ ನಡೆ ನಾಳೆ ನಿರ್ಧಾರ ಸಾಧ್ಯತೆ

2 years ago

ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ದಗೊಳ್ಳುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ನಡೆದಿರುವ ವಿದ್ಯಮಾನಗಳು ಕುತೂಹಲ ಕೆರಳಿಸಿವೆ.

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಂಚಿತ ಮಾಜಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪಕ್ಷಕ್ಕೆ ಗುಡ್ ಬೈ ಹೇಳುವುದು ಖಚಿತವಾದರೆ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ.

ತುಮಕೂರಿನಿಂದ ಕಣಕ್ಕಿಳಿಯಲು ಸಿದ್ಧಗೊಂಡಿರುವ ಮಾಧುಸ್ವಾಮಿ, ಇದೀಗ ಬಂಡಾಯದ ಬಾವುಟ ಹಾರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿರುವ ಅವರು, ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ತೊರೆಯಲು ಮುಂದಾಗಿರುವ ಮಾಧುಸ್ವಾಮಿ ಅವರ ಮನವೊಲಿಸಲು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದ ತಂಡ ನಡೆಸಿದ ಪ್ರಯತ್ನ ವಿಫಲವಾಗಿದೆ. ಇಬ್ಬರೂ ಕಳೆದ ರಾತ್ರಿ ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯದಂತೆ ಮನವಿ ಮಾಡಿದರು.

ಆದರೆ ಇದಕ್ಕೆ ಸೊಪ್ಪು ಹಾಕದ ಮಾಧುಸ್ವಾಮಿ, ಟಿಕೆಟ್ ಕೊಡುವುದಾಗಿ ಹೇಳಿ ಪ್ರಚಾರ ಮಾಡುವಂತೆ ಸೂಚಿಸಿದ ನಾಯಕರು ಆನಂತರದಲ್ಲಿ ಮೋಸ ಮಾಡಿದ್ದಾರೆ. ಇದು ತಮ್ಮ ಆತ್ಮಗೌರವಕ್ಕೆ ದೊಡ್ಡ ಧಕ್ಕೆ ತಂದಿದೆ. ಹೀಗಾಗಿ ಇಂಥ ಪಕ್ಷದಲ್ಲಿ ತಾನು ಮುಂದುವರಿಯೋದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರೂ ನಾಯಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾಗಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿರುವ ಮಾಧುಸ್ವಾಮಿ, ತಮಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಉನ್ನತ ಮೂಲಗಳಿಂದ ಗೊತ್ತಾಗಿದೆ.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ನಮ್ಮ ಅಭ್ಯರ್ಥಿಯ ಹೆಸರು ಘೋಷಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿ ಬದಲಾವಣೆ ಸಾಧ್ಯವಿಲ್ಲ. ತಾವು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರೆ, ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸದಸ್ಯತ್ವ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನತಾ ಪರಿವಾರ ಮೂಲದ ನಾಯಕರಾಗಿರುವ ಮಾಧುಸ್ವಾಮಿಯವರು ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಬಹುತೇಕ ಅವರ ಈ ಆಹ್ವಾನವನ್ನು ಒಪ್ಪಿ, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅತಂತ್ರ ಸ್ಥಿತಿಯಲ್ಲಿ ಡಿ.ವಿ.ಸದಾನಂದಗೌಡ: ಮತ್ತೊಂದಡೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಆಸಕ್ತಿ ಹೊಂದಿದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಸಹ ಮತ ಹೊಂದಿಲ್ಲ ಎನ್ನಲಾಗಿದೆ.

ಸದಾನಂದ ಗೌಡ ಅವರು ಮಾಜಿ ಮುಖ್ಯಮಂತ್ರಿ. ಆದರೆ ಕ್ಷೇತ್ರದಲ್ಲಿ ಅವರಿಗೆ ಅಂತಹ ಯಾವುದೇ ದೊಡ್ಡ ರೀತಿಯ ಬೆಂಬಲ ಇಲ್ಲ. ಯಾವುದೇ ಭಾಗದಲ್ಲೂ ಕಾರ್ಯಕರ್ತರು ಅವರ ಜೊತೆಗೆ ಇಲ್ಲ. ಹೀಗಾಗಿ ಅವರನ್ನು ಕರೆತಂದು ಪಕ್ಷದ ಅಭ್ಯರ್ಥಿಯಾಗಿ ಮಾಡಿದರೆ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿರುವುದಾಗಿ ವರದಿಯಾಗಿದೆ.

ಆದರೆ ಈ ವಾದವನ್ನು ಒಪ್ಪದ ಡಿ.ಕೆ.ಶಿವಕುಮಾರ್ ಅವರು ಸದಾನಂದ ಗೌಡ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ಅವರನ್ನು ಕಾಂಗ್ರೆಸ್ಸಿಗೆ ಕರೆತರುವ ಮೂಲಕ ಬಿಜೆಪಿ ಒಕ್ಕಲಿಗರ ವಿರೋಧಿ ಎಂದು ಪ್ರಚಾರ ಮಾಡಿದ್ದೆ ಆದಲ್ಲಿ ಅದು ಕಾಂಗ್ರೆಸ್ಸಿಗೆ ಅನುಕೂಲವಾಗುತ್ತದೆ. ಹೀಗಾಗಿ ಅವರನ್ನು ಪಕ್ಷಕ್ಕೆ ಕರೆತಂದು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇಂತಹ ಚರ್ಚೆ ನಡೆದಿರುವ ಬೆನ್ನಲ್ಲೇ ಸದಾನಂದ ಗೌಡ ಅವರು ತಮ್ಮನ್ನು ಬೆಂಗಳೂರು ಉತ್ತರ ಇಲ್ಲವೇ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಿದರೆ ಮಾತ್ರ ಪಕ್ಷಕ್ಕೆ ಸೇರುತ್ತೇನೆ ಎಂದು ಹೇಳಿದ್ದು ಈ ವಿಷಯ ಬಿಕ್ಕಟ್ಟಾಗಿದೆ. ಎಲ್ಲ ಬೆಳವಣಿಗೆಗಳ ನಡುವೆ ಸದಾನಂದ ಗೌಡ ಅವರು ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿ, ದಿಡೀರ್ ರದ್ದು ಪಡಿಸಿ ನಾಳೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ ಎಂದರು.

ತಾವು ತಮ್ಮ ಬೆಂಬಲಿಗರು ಹಾಗೂ, ಒಕ್ಕಲಿಗರ ಸಂಘದ ಅಧ್ಯಕ್ಷರು, ನಿರ್ದೇಶಕರ ಜತೆ ಸಭೆ ನಡೆಸಿದ್ದೇನೆ. ಒಂದಷ್ಟು ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಈಗ ಯಾವುದನ್ನೂ ನಾನು ಹೇಳುವುದಿಲ್ಲ. ಎಲ್ಲವನ್ನೂ ನಾಳೆ ಹೇಳುತ್ತೇನೆ ಎಂದರು.

Leave a Reply