ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಕಾಂಗ್ರೆಸ್

2 years ago

ಸೋಮವಾರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಅತ್ಯಧಿಕ ಸ್ಥಾನ ಗೆಲ್ಲಲು ರಣತಂತ್ರ ರೂಪಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಗೆಲುವಿನ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಿದ್ದು, ಸೋಮವಾರ ನಡೆಯಲಿರುವ ಚುನಾವಣೆ ಸಮಿತಿ ಸಭೆಯಲ್ಲಿ ಇವುಗಳ ಬಗ್ಗೆ ಚರ್ಚಿಸಿ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ. ಬಹುತೇಕ ಕ್ಷೇತ್ರಗಳಿಗೆ ಮಂತ್ರಿಗಳ ಕುಟುಂಬ ಸದಸ್ಯರನ್ನು ಕಣಕ್ಕಿಳಿಸಲಾಗುತ್ತಿದ್ದು, ಗೆಲ್ಲಿಸಿಕೊಂಡು ಬರಲೇಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಬೆಳಗಾವಿಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ಹೆಸರು ಅಂತಿಮವಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ್ ಅವರನ್ನು ರಾಯಚೂರು ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಕಲಬುರಗಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಲು ಶಿಫಾರಸು ಮಾಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:

  1. ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್ (ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ)
  2. ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ (ಸಚಿವ ಸತೀಶ್ ಜಾರಕಿಹೊಳಿ ಪುತ್ರಿ)
  3. ರಾಯಚೂರು – ಜಿ.ಕುಮಾರ ನಾಯಕ್ (ನಿವೃತ್ತ ಐಎಎಸ್ ಅಧಿಕಾರಿ)
  4. ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ)
  5. ಬಳ್ಳಾರಿ – ಬಿ ವೆಂಕಟೇಶ್ ಪ್ರಸಾದ್ (ಕ್ರೀಡಾ ಸಚಿವ ಬಿ ನಾಗೇಂದ್ರ ಸೋದರ)
  6. ಉಡುಪಿ – ಚಿಕ್ಕಮಗಳೂರು – ಕೆ ಜಯಪ್ರಕಾಶ ಹೆಗಡೆ
  7. ಕೊಪ್ಪಳ – ರಾಜಶೇಖರ್ ಹಿಟ್ನಾಳ್
  8. ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
  9. ದಾವಣಗೆರೆ – ಪ್ರಭಾವತಿ ಮಲ್ಲಿಕಾರ್ಜುನ್ (ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ)
  10. ಚಿತ್ರದುರ್ಗ – ಬಿಎನ್ ಚಂದ್ರಪ್ಪ
  11. ಬೆಂಗಳೂರು ದಕ್ಷಿಣ – ಸೌಮ್ಯ ರಾಮಲಿಂಗಾರೆಡ್ಡಿ (ಸಚಿವ ರಾಮಲಿಂಗಾರೆಡ್ಡಿ ಪುತ್ರಿ)
  12. ಬೆಂಗಳೂರು ಉತ್ತರ – ಪ್ರಿಯಾ ಕೃಷ್ಣ \ ಪ್ರೊ. ಎಂ.ವಿ. ರಾಜೀವ್ ಗೌಡ
  13. ಬೆಂಗಳೂರು ಕೇಂದ್ರ – ಎನ್ ಎ ಹ್ಯಾರಿಸ್ \ ಮನ್ಸೂರ್ ಅಲಿಖಾನ್
  14. ಹುಬ್ಬಳ್ಳಿ – ಧಾರವಾಡ – ಶಿವಲೀಲಾ ಕುಲಕರ್ಣಿ (ವಿನಯ್ ಕುಲಕರ್ಣಿ ಪತ್ನಿ) \ ವಿನೋದ್ ಅಸೂಟಿ
  15. ಬಾಗಲಕೋಟೆ – ಆನಂದ್ ನ್ಯಾಮೇಗೌಡ \ ಸಂಯುಕ್ತಾ ಪಾಟೀಲ್ (ಸಚಿವ ಶಿವಾನಂದ್ ಪಾಟೀಲ್ ಪುತ್ರಿ)
  16. ದಕ್ಷಿಣ ಕನ್ನಡ – ವಿನಯ್ ಕುಮಾರ್ ಸೊರಕೆ \ ಪದ್ಮರಾಜ್
  17. ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ \ ರಕ್ಷಾ ರಾಮಯ್ಯ (ಮಾಜಿ ಸಚಿವ ಎಂ.ಆರ್.ಸೀತಾರಾಂ ಪುತ್ರ)

ಅವರನ್ನು ಕಣಕ್ಕಿಳಿಸಲು ರಾಜ್ಯ ನಾಯಕರು ನಿರ್ಧರಿಸಿ ಹೈಕಮಾಂಡ್ ಗೆ ಹೆಸರು ಶಿಫಾರಸು ಮಾಡಿದ್ದಾರೆ.

ಕೋಲಾರ, ಚಾಮರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸಂಭಾವ್ಯ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿದ್ದು, ಕೋಲಾರ ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಎಲ್ ಹನುಮಂತಯ್ಯ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಹಿರಿಯ ಮುಖಂಡ ವಿ ಶ್ರೀನಿವಾಸ ಪ್ರಸಾದ್ ಅವರ ಚಿಕ್ಕ ಅಳಿಯ ಡಾ. ಎನ್ ಎಸ್ ಮೋಹನ್ ಅವರನ್ನು ಕಣಕ್ಕಿಳಿಸುವ ಕುರಿತಂತೆ ಸಿಎಂ ಚರ್ಚೆ ನಡೆಸಿದ್ದಾರೆ. ಆದರೆ ಮೈಸೂರು ಕ್ಷೇತ್ರದ ಅಭ್ಯರ್ಥಿ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಈ ನಡುವೆ, ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ಇದೇ 18ಕ್ಕೆ ನಿಗದಿಯಾಗಿದೆ. ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂದು ಅಂತಿಮಗೊಳಿಸಲಾಗುತ್ತದೆ. ಕರ್ನಾಟಕದಲ್ಲಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ಪ್ರಕಟಿಸಿದೆ.

Leave a Reply