ಚರ್ಮದ ಆರೋಗ್ಯ ಕಾಪಾಡಲು ಪಾರಂಪರಿಕವಾಗಿ ಅನೇಕ ಮಾರ್ಗಗಳನ್ನು ಹಿರಿಯರು ಅನುಸರಿಸುತ್ತಿದ್ದರು. ಗಿಡಮೂಲಿಕೆಗಳು, ವಿವಿಧ ಸಸ್ಯಜನ್ಯ ಎಣ್ಣೆ, ಕಡಲೆಹಿಟ್ಟು, ಅರಿಶಿಣ ಮುಂತಾದವುಗಳನ್ನು ಬಳಸುತ್ತಿದ್ದರು.
ಆಧುನಿಕ ಜೀವನ ಶೈಲಿ ನೈಸರ್ಗಿಕ ವಸ್ತುಗಳಿಂದ ನಮ್ಮನ್ನು ಸಂಪೂರ್ಣ ದೂರವಾಗಿಸಿದೆ. ಇಂದು ಸೋಪು, ಬಾಡಿ ಮಾಯಿಶ್ಚರೈಸರ್ ಗಳ ಬಳಕೆ ಹೆಚ್ಚಾಗಿದೆ. ಕನಿಷ್ಠ 90% ಜನ ತಮ್ಮ ದೇಹದ ಸ್ವಚ್ಛತೆ ಹಾಗೂ ಕಾಂತಿ ಕಾಪಾಡಲು ಹಲವು ಬಗೆಯ ಸೊಪ್ಪುಗಳನ್ನು ಬಳಸುತ್ತಾರೆ.
ಜಗತ್ತಿನಲ್ಲಿ ಮೊದಲ ಸೋಪು ತಯಾರಾದದ್ದು ಕ್ರಿ.ಪೂ.2800ರ ವೇಳೆ ಬ್ಯಾಬಿಲೋನಿಯದಲ್ಲಿ. ಪ್ರಾಣಿಜನ್ಯ ಕೊಬ್ಬು, ಮರದ ಬೂದಿ ಮತ್ತು ನೀರಿನಿಂದ ಇದನ್ನು ತಯಾರಿಸಲಾಗಿತ್ತು. ಇದಕ್ಕೆ ಸೋಪ್ ಎಂದು ನಾಮಕರಣ ಮಾಡಿದ್ದರ ಹಿಂದೆ ಒಂದು ರೋಚಕ ಕಥೆ ಇದೆ.
ರೋಮನ್ ಕಥೆಯೊಂದರ ಪ್ರಕಾರ, ಸ್ಯಾಪೋ ಪರ್ವತದ ಮೇಲೆ ಪ್ರಾಣಿಗಳ ಬಲಿ ಕೊಡಲಾಗುತ್ತಿತ್ತು. ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ಮಳೆ ಆ ಪ್ರಾಣಿಗಳ ಕೊಬ್ಬಿನಂಶ ಮತ್ತು ಬೂದಿಯನ್ನು ಟೈಬರ್ ನದಿಗೆ ಕೊಂಡೊಯ್ಯುತ್ತಿತ್ತು. ಟೈಬರ್ ನದಿಯಲ್ಲಿ ಬಟ್ಟೆಗಳನ್ನು ತೊಳೆಯುತ್ತಿದ್ದ ಮಹಿಳೆಯರು ನದಿಯ ಕೆಲವು ಭಾಗಗಳಲ್ಲಿ ಬಟ್ಟೆ ತೊಳೆದರೆ, ಬಟ್ಟೆಗಳು ಹೆಚ್ಚು ಶುಭ್ರವಾಗುವುದನ್ನು ಗಮನಿಸಿದರು.
ಎಲ್ಲಿ ಈ ಕೊಬ್ಬಿನಂಶ ಮತ್ತು ಬೂದಿ ಸಂಗ್ರಹವಾಗಿತ್ತೋ ಅಲ್ಲಿ ಬಟ್ಟೆಗಳು ಶುಭ್ರವಾಗುತ್ತಿರುವುದು ಗೊತ್ತಾಯಿತು. ಇದುವೆ ಜಗತ್ತಿನ ಮೊದಲ ಸೋಪಿನ ಉಪಯೋಗ. ಸ್ಯಾಪೋ ಪರ್ವತದಿಂದ ಇದಕ್ಕೆ ಸೋಪು ಎಂಬ ಹೆಸರಾಯಿತು.
ಮೊದಮೊದಲು ಕೇವಲ ಬಟ್ಟೆಗಳನ್ನು ತೊಳೆಯಲು ಉಪಯೋಗವಾಗುತ್ತಿದ್ದ ಸೋಪ್ ಕಾಲಾಂತರದಲ್ಲಿ ಸ್ನಾನದ ಸೋಪ್, ಬ್ಯುಟಿ ಸೋಪ್ ಆಗಿ ಪರಿವರ್ತನೆ ಆಯಿತು. ಸೋಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಸೋಪು ಸ್ವಚ್ಛಗೊಳಿಸುವ ಕ್ರಿಯೆಗೆ ನೀರು ಬೇಕು. ನೀರಿನ ಮೇಲ್ಮೈಗೆ ಒಂದು ತೆಳುವಾದ ಸ್ಥಿತಿಸ್ಥಾಪಕ ಶಕ್ತಿಯುಳ್ಳ ಪದರವಿರುತ್ತದೆ. ಇದನ್ನು ನೀರಿನ ಮೇಲ್ಮೈ ಒತ್ತಡ ಎಂದು ಕರೆಯುತ್ತಾರೆ. ಇದರಿಂದ ಸೋಪು ಹಚ್ಚಿದಾಗ ಅದರ ಒಂದು ಬದಿಗೆ ನೀರನ್ನು ಆಕರ್ಷಿಸುವ ಅಣುಗಳ ಪದರವು ಮತ್ತೊಂದು ಬದಿಗೆ ನೀರನ್ನು ದೂರವಿರಿಸುವ ಅಣುಗಳ ಪದರಗಳು ಇರುತ್ತವೆ. ನೀರನ್ನು ಆಕರ್ಷಿಸುವ ಪದರ ನೀರಿನೊಂದಿಗೆ ಬೆರೆಯುತ್ತದೆ. ನೀರಿನಿಂದ ದೂರವಿರುವ ಪದರ ಎಣ್ಣೆಯ ಅಥವಾ ಕೊಬ್ಬಿನಂಶದೊಂದಿಗೆ ಬೆರೆಯುತ್ತದೆ.
ಸಾಮಾನ್ಯವಾಗಿ ಕೊಳೆ ಎಂದರೆ ಅದು ಎಣ್ಣೆಯಂಶದೊಂದಿಗೆ ಬೇರೆತ ಧೂಳಿನ ಅಥವಾ ಯಾವುದೇ ರೀತಿಯ ಕೊಳೆಯ ವಸ್ತುವಾಗಿರುತ್ತದೆ. ಸೋಪಿನಲ್ಲಿರುವ ಕೊಬ್ಬಿನಂಶ ಕೊಳೆಯೊಂದಿಗಿನ ಜಿಡ್ಡಿನೊಂದಿಗೆ ಬೆರೆಯುತ್ತದೆ ಹಾಗೂ ಅದನ್ನು ತನ್ನ ಜೊತೆ ಹಿಡಿದಿಡುತ್ತದೆ. ನಂತರ ನೀರು ಹಾಕಿ ತೊಳೆದಾಗ ಇದು ನೀರಿನೊಂದಿಗೆ ಬೆರೆಯುವುದಿಲ್ಲವಾದ್ದರಿಂದ ಹರಿದುಹೋಗುವ ನೀರಿನೊಂದಿಗೆ ತೊಳೆದುಹೋಗುತ್ತದೆ.
ಇನ್ನು ಬಿಸಿ ನೀರಿನೊಂದಿಗೆ ಸ್ನಾನ ಮಾಡಿದಾಗ ಬಿಸಿನೀರು ಎಣ್ಣೆ ಅಥವಾ ಕೊಬ್ಬನ್ನು ಮೃದುಗೊಳಿಸುವುದರಿಂದ ಬೇಗನೆ ಈ ಜಿಡ್ಡಿನ ಅಂಶ ಕೊಳೆಯೊಂದಿಗೆ ಬೆರೆತು ಶುಭ್ರಗೊಳಿಸಲು ಸಾಧ್ಯವಾಗುತ್ತದೆ.
ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ವಿವಿಧ ಪರಿಮಳದ, ಬಣ್ಣದ, ಆಕಾರದ ಸೋಪುಗಳು ಕೆಲಸ ಮಾಡುವುದು ಇದೆ ಅಂಶದ ಆಧಾರದ ಮೇಲೆ. ಆದರೆ ಇವುಗಳಿಗೆ ಬೆರೆಸುವ ಕೊಬ್ಬಿನಂಶ, ಗ್ಲಿಸರಿನ್, ಬಾದಾಮಿ, ಬೇವು, ತುಳಸಿ, ಕರ್ಪೂರ ಮುಂತಾದವುಗಳ ಎಣ್ಣೆಯಿಂದಾಗಿ ಅವುಗಳಿಗೆ ಬೇರೆಬೇರೆ ಮೃದುತ್ವ ಮತ್ತು ಕರಗುವ ಗುಣ ಬರುತ್ತದೆ.
ಧೂಳು, ಕೊಳೆ, ಕ್ರಿಮಿಕೀಟಗಳಿಂದ ನಮ್ಮನ್ನು ರಕ್ಷಿಸುವ ಸೋಪಿನ ರಕ್ಷಣೆ ಕೂಡ ಬಹಳ ಮುಖ್ಯ. ಸೋಪನ್ನು ಶುಭ್ರವಾಗಿಡುವುದು ಹೇಗೆ? ಅದರ ಬಳಕೆ ಹೇಗೆ? ಯಾವ ಸೋಪು ಚರ್ಮಕ್ಕೆ ಉತ್ತಮ ಮುಂತಾದ ಅಂಶಗಳು ಪ್ರಮುಖವಾಗುತ್ತವೆ.
ಹೆಚ್ಚು ನೊರೆಯನ್ನು ಸೂಸುವ ಸೋಪುಗಳು ಚರ್ಮಕ್ಕೆ ಹಾನಿ ಉಂಟುಮಾಡುತ್ತವೆ. ಅಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿರುತ್ತದೆ. ಕಡಿಮೆ ರಾಸಾಯನಿಕಗಳಿಂದ ಕೂಡಿದ ಸೌಮ್ಯ ಸೋಪು ಬಳಕೆಗೆ ಉತ್ತಮ.
ಬಳಕೆಯ ನಂತರ ಅದರಲ್ಲಿನ ನೀರು ಸಂಪೂರ್ಣವಾಗಿ ಸೋರಿಹೋಗುವಂತೆ ಜಾಗ್ರತೆವಹಿಸಬೇಕು. ತೇವಾಂಶವಿದ್ದರೆ ಅದರ ಮೇಲೆ ರೋಗಾಣುಗಳು ರೂಪುಗೊಳ್ಳುತ್ತವೆ. ಪ್ರತಿಯೊಬ್ಬರೂ ಬೇರೆ ಸೋಪುಗಳನ್ನು ಬಳಸಬೇಕು. ಇದರಿಂದ ಚರ್ಮದ ಸೋಂಕುಗಳನ್ನು ಹರಡದಂತೆ ತಡೆಯಬಹುದು.
- ಡಾ.ಚಂದ್ರಕಲಾ.ಜಿ, ಸಂಶೋಧಕಿ




