ಬೆಂಗಳೂರು: ಪ್ರಮುಖ ಎಫ್ಎಂಸಿಜಿ ಸಂಸ್ಥೆ ಕೆವಿನ್ಕೇರ್, ಎಬಿಲಿಟಿ ಫೌಂಡೇಶನ್ ಸಹಭಾಗಿತ್ವದಲ್ಲಿ ಇಂದು ನಡೆದ ತನ್ನ 22ನೇ ಕೆವಿನ್ಕೇರ್ ಎಬಿಲಿಟಿ ಅವಾರ್ಡ್ಸ್ 2024ರ ಭಾಗವಾಗಿ ದೇಶದ 5 ವಿಕಲಚೇತನ ಸಾಧಕರನ್ನು ಗೌರವಿಸಿದೆ. ಪ್ರಸಕ್ತ ಆವೃತ್ತಿಯಲ್ಲಿನ ವಾರ್ಷಿಕ ಪ್ರಶಸ್ತಿಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲ ಸಾಧಕರ ಸಾಧನೆಗಳನ್ನು ಬೆಳಕಿಗೆ ತಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಗಣ್ಯರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಿಜೋರಾಂನ ಸಾಂಪ್ರದಾಯಿಕ ಚೆರಾವ್ ಮತ್ತು ಚೆಹ್ ಲಾಮ್ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿವುಡ ಮತ್ತು ಶ್ರವಣದೋಷವುಳ್ಳ ವಿಶೇಷ ಶಾಲೆ ಎಫಾಥಾದ ವಿದ್ಯಾರ್ಥಿಗಳು ಪ್ರದರ್ಶಿಸಿದ ಈ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ನೃತ್ಯವು ಪ್ರತಿಭೆ, ಸೌಂದರ್ಯ ಮತ್ತು ಕಲೆ ಅಂಗವೈಕಲ್ಯವನ್ನು ಮೀರಿದ್ದು ಎಂಬುದಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆವಿನ್ಕೇರ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಕೆ.ರಂಗನಾಥನ್, ವರ್ಷದಿಂದ ವರ್ಷಕ್ಕೆ ಕೆವಿನ್ಕೇರ್ ಎಬಿಲಿಟಿ ಅವಾರ್ಡ್ಸ್ ವಿಕಲಚೇತನ ವ್ಯಕ್ತಿಗಳ ಸಾಧನೆಯನ್ನು ಗೌರವಿಸುತ್ತಾ ಬಂದಿದೆ. ಅವರನ್ನು ವೇದಿಕೆಗೆ ಕರೆತಂದು ಜಗತ್ತಿಗೆ ತೋರಿಸುವ ಮೂಲಕ ಅವರ ಪ್ರಯಾಣದಲ್ಲಿ ಪುಟ್ಟದೊಂದು ಭಾಗವಾಗಿದ್ದಕ್ಕೆ ನಾವು ಸಂತೋಷ ಪಡುತ್ತೇವೆ ಎಂದರು.
ಈ ವರ್ಷದ ಪ್ರಶಸ್ತಿ ಪುರಸ್ಕೃತರನ್ನು ಗೀತರಚನೆಕಾರ ಮತ್ತು ಚಿತ್ರಕಥೆಗಾರ ಮದನ್ ಕರ್ಕಿ, ಸಾಯಿ ವಿಶ್ವವಿದ್ಯಾಲಯದ ಕುಲಪತಿ ಕೆ.ವಿ.ರಮಣಿ, ಚಲನಚಿತ್ರ ನಿರ್ಮಾಪಕ ಭರತ್ ಬಾಲಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮುಖ್ಯಸ್ಥ ಸುರೇಶ್ ರಾಮನ್, ಎಲ್ವಿ ಪ್ರಸಾದ್ ಕಾಲೇಜ್ ಆಫ್ ಮೀಡಿಯಾ ಸ್ಟಡೀಸ್ ನ ಮಾಜಿ ಎಚ್ಒಡಿ ಆಫ್ ಡೈರೆಕ್ಷನ್ ಲತಾ ಮುರುಗನ್ ಅವರ ತೀರ್ಪುಗಾರರ ಸಮಿತಿಯು ಎಚ್ಚರಿಕೆಯಿಂದ ಆಯ್ಕೆ ಮಾಡಿದೆ. ಸವಾಲುಗಳನ್ನು ಗೆಲ್ಲುವ ಸಾಮರ್ಥ್ಯ, ಅವರ ಸಾಧನೆಗಳಲ್ಲಿನ ಕಷ್ಟದ ಮಟ್ಟ ಮತ್ತು ಅವರ ಸಾಧನೆಯ ಅನನ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.
ಅವರ ಸಾಧನೆಗಳಿಗಾಗಿ ವಿಜೇತರನ್ನು ಅಭಿನಂದಿಸಿದ ಎಬಿಲಿಟಿ ಫೌಂಡೇಶನ್ನ ಸಂಸ್ಥಾಪಕರು ಮತ್ತು ಗೌರವ. ಕಾರ್ಯನಿರ್ವಾಹಕ ನಿರ್ದೇಶಕರಾದ ಜಯಶ್ರೀ ರವೀಂದ್ರನ್, ಸತತವಾಗಿ 22ನೇ ವರ್ಷ ನಾವು ವಿಕಲಚೇತನರ ಸಾಧಕರಿಗೆ ಗೌರವ ಸಲ್ಲಿಸಿದ್ದೇವೆ. ಈ ಕಾರ್ಯಕ್ರಮವು ಪ್ರತಿ ಬಾರಿಯೂ ನಮ್ಮಲ್ಲಿನ ಉತ್ಸಾಹ, ಹುಮ್ಮಸ್ಸನ್ನು ಹೆಚ್ಚಸುತ್ತದೆ. ಅಂಗವೈಕಲ್ಯವು ಸಾಮರ್ಥ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೆವಿನ್ಕೇರ್ ಎಬಿಲಿಟಿ ಅವಾರ್ಡ್ಸ್ ಸಾಕ್ಷಿಯಾಗಿದೆ ಎಂದರು.
ಕೆವಿನ್ಕೇರ್ ಅವಾರ್ಡ್ಸ್ 2024 ಸ್ವೀಕರಿಸಿದವರು:
1. ವಿದ್ಯಾ ವೈ- ಬೆಂಗಳೂರು ಕರ್ನಾಟಕ
2. ಡಾ. ಕೇತ್ನಾ ಎಲ್ ಮೆಹ್ತಾ – ಮುಂಬೈ, ಮಹಾರಾಷ್ಟ್ರ
3. ವಿನಯಾನ ಖುರಾನಾ – ನವದೆಹಲಿ
4. ಐಶ್ವರ್ಯ ಟಿ ವಿ- ಸಿಕಂದರಾಬಾದ್, ತೆಲಂಗಾಣ
5. ಛೋಂಜಿನ್ ಆಂಗ್ಮೊ – ನವದೆಹಲಿ



