ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ ನಗರದ ವರ್ಚಸ್ಸಿಗೆ ಮಸಿ ಬೆಳೆಯುವ ವ್ಯವಸ್ಥಿತ ಪಿತೂರಿ ಆಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿಗೆ ಹಲವು ಜಾಗತಿಕ ಮಟ್ಟದ ಉದ್ದಿಮೆಗಳು ಆಗಮಿಸುತ್ತಿವೆ. ದೊಡ್ಡ ಪ್ರಮಾಣದ ವ್ಯವಹಾರಿಕ ನಗರವಾಗಿ ಬೆಂಗಳೂರು ಬೆಳೆಯುತ್ತಿದೆ. ನಗರದ ಈ ಬೆಳವಣಿಗೆಯ ಗತಿಗೆ ಕಡಿವಾಣ ಹಾಕಬೇಕು ಎಂದು ಯಾರೋ ಕೆಲವರು ಮಾಡಿರುವ ಪಿತೂರಿಯ ಭಾಗ ಈ ಸ್ಫೋಟ ಪ್ರಕರಣ ಎಂದರು.
ಸ್ಪೋಟ ಪ್ರಕರಣ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾ ಗುತ್ತಿದೆ. ವ್ಯಾವಹಾರಿಕ ವೈಷಮ್ಯ, ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆಯವರು 2 ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ. ಬೆಂಗಳೂರು ಮಹಾನಗರಕ್ಕೆ ಬಂಡವಾಳ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತವಲ್ಲದ ನಗರ ಎಂಬ ಹಣೆಪಟ್ಟಿ ಕಟ್ಟುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಇವಿಷ್ಟೇ ಅಲ್ಲದೆ, ನಾವು ಬೇರೆಬೇರೆ ಆಯಾಮಗಳಲ್ಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಹೋಟೆಲ್ ಮಾಲಿಕರು 11 ಶಾಖೆಗಳನ್ನು ಮಾಡಿದ್ದು, 12ನೇ ಶಾಖೆ ಪ್ರಾರಂಭ ಮಾಡಲು ಮುಂಗಡ ಕೊಟ್ಟಿದ್ದು, ಉದ್ಯಮದ ವೈಷಮ್ಯವಿರಬಹುದು ಎಂದೂ ಕೂಡ ಇಲ್ಲಿನವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನೊಳಗೊಂಡಂತೆ ತನಿಖೆ ನಡೆಸುತ್ತಿದ್ದೇವೆ ಎಂದರು.
ಭಯೋತ್ಪಾದಕ ಸಂಘಟನೆಗಳು ಈ ಕೃತ್ಯ ಎಸಗಿರಬಹುದೇ ಎಂಬ ಶಂಕೆ ಹಿನ್ನೆಲೆಯಲ್ಲಿ ಎನ್ಐಎ, ಎನ್ಎಸ್ಜಿ ತಂಡಗಳು ಕೂಡ ಪರಿಶೀಲನೆ ನಡೆಸುತ್ತಿವೆ. ಒಟ್ಟಾರೆ ಪ್ರಕರಣ ಸವಾಲಾಗಿ ಪರಿಣಮಿಸಿದ್ದು, ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕ್ಯಾಮೆರಾಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ 26 ಬಸ್ಗಳು ಬಂದು ಹೋಗಿವೆ. ಆ ಬಸ್ಗಳಲ್ಲಿ ಕ್ಯಾಮೆರಾಗಳನ್ನು ಕೂಡ ಪರಿಶೀಲನೆ ಮಾಡಲಾಗಿದ್ದು, ಮಾಸ್ಕ್ ಮತ್ತು ಕ್ಯಾಪ್ ಧರಿಸಿದ ವ್ಯಕ್ತಿ ಪ್ರಯಾಣಿಸಿದ ಬಸ್ಸನ್ನು ಗುರುತಿಸಲಾಗಿದೆ. ಹೆಚ್ಚಿನ ತಾಂತ್ರಿಕ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದರು.
ಸ್ಫೋಟ ಕುರಿತು ಎನ್ ಐ ಎ ತನಿಖೆ: ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಎನ್.ಐ.ಎ ಗೆ ವಹಿಸುವ ಬಗ್ಗೆ ಅಗತ್ಯ ಬಿದ್ದರೆ ಚಿಂತನೆ ನಡೆಸಲಾಗುವುದು ಎಂದರು.
ಬ್ರಾಂಡ್ ಬೆಂಗಳೂರು ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ಬಿಜೆಪಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರ (ಬಿಜೆಪಿ) ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು? 2008 ರಿಂದ 4 ಬಾರಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ ಏನೆಂದು ಕರೆಯಬೇಕು? ಇದು ಎನ್.ಐ.ಎ, RAW ಅವರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.




