ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಅಡ್ಜೆಸ್ಟ್ಮೆಂಟ್ ಗಿರಾಕಿಗಳಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಚುನಾವಣಾ ಫಲಿತಾಂಶಗಳ ಬಗ್ಗೆ ಚರ್ಚೆಯಾಯಿತು. ರಾಜ್ಯದ ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟು ಆಯ್ಕೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಯತ್ನಾಳ್ ತಮ್ಮ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಮಾಡಿದ ಕೆಲಸವನ್ನು ನಮ್ಮ ಪಕ್ಷದ ಬಿಜೆಪಿ ನಾಯಕರು ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಾಳು ಮಾಡಿದರು. ಚುನಾವಣೆ ಸೋಲಿಗೆ ಬೊಮ್ಮಾಯಿ ಆಗಲೀ, ಮೋದಿಯಾಗಲೀ ಕಾರಣ ಅಲ್ಲ, ಅಡ್ಜೆಸ್ಟ್ ಮೆಂಟ್ ಗಿರಾಕಿಗಳು ಕಾರಣ ಎಂದು ಸ್ವಪಕ್ಷೀಯ ನಾಯಕರ ವಿರುದ್ಧವೇ ಗಂಭೀರ ಆರೋಪ ಮಾಡಿದರು.
ಅಡ್ಜಸ್ಟ್ ಮೆಂಟ್ ಗಿರಾಕಿಗಳ ಬಗ್ಗೆ ಈಗಾಗಲೇ ನಾನು ಮಾಧ್ಯಮಗಳ ಮೂಲಕ ಘಂಟಾಘೋಷವಾಗಿ ಸತ್ಯ ಹೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ವಂಶವಾದ ಹಾಗೂ ಭ್ರಷ್ಟಾಚಾರದ ಆಡಳಿತವನ್ನು ಕಿತ್ತು ಹಾಕುತ್ತಾರೆ ಎಂದರು.




