ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಮಾಡಲಾಗದೆ ಗೊಂದಲದಲ್ಲಿ ಮುಳುಗಿರುವ ಸರ್ಕಾರ ಭವಿಷ್ಯದಲ್ಲಾದರೂ ಹೊಸ ಭರವಸೆ ಮೂಡಿಸುವ ಮಾತುಗಳನ್ನು ರಾಜ್ಯಪಾಲರಿಂದ ಹೇಳಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಬಜೆಟ್ ಅಧಿವೇಶನದ ರಾಜ್ಯಪಾಲರ ಜಂಟಿ ಅಧಿವೇಶನದ ಭಾಷಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಡವರು, ರೈತರು, ನಿರುದ್ಯೋಗಿಗಳ ಪಾಲಿಗೆ ಕಂಟಕವಾಗಿರುವ ಈ ಸರ್ಕಾರ ಉದ್ಯಮಿಗಳು ಹಾಗೂ ಸ್ವಾವಲಂಬಿಗಳಿಗೆ ಹಾಗೂ ಸ್ವಂತ ಮನೆ ಹೊಂದುವ ಸೂರು ರಹಿತರಿಗೆ, ತೆರಿಗೆ ಹಾಗೂ ಮುದ್ರಾಂಕ ಶುಲ್ಕಗಳನ್ನು ಏರಿಸುವ ಮೂಲಕ ಆರ್ಥಿಕ ವ್ಯವಹಾರಗಳಿಗೆ ಧಕ್ಕೆ ತಂದೊಡ್ಡಿರುವುದು, ಮುಂದಿನ ದಿನಗಳಲ್ಲಿ ಕರ್ನಾಟಕದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.
ಸದ್ಯ ಮಂಡಿಸಲಿರುವ ಬಜೆಟ್ ನಲ್ಲಿ ಯಾವ ವರ್ಗದ ಜನರೂ ಕನಿಷ್ಠ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದ ಸುಳಿವು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ ಎಂದರು.



