ಬೆಂಗಳೂರು: ವಂಚಕರಿಗೆ ನಾನಾ ಮುಖ ಹಾಗೂ ವಂಚನೆಗೆ ನೂರಾರು ದಾರಿಗಳು. ಯಾರು ಎಷ್ಟೇ ಎಚ್ಚರವಾಗಿದ್ದರೂ ವಂಚಕರ ಚಾಲಾಕಿತನದ ಮುಂದೆ ಏನೂ ಅಲ್ಲ. ವಂಚಕರ ಕೈಗೆ ಸಿಲುಕಿ ಕಳಕೊಂಡಾಗಲೆ ಗೊತ್ತಾಗುವುದು.
ಇಂತಹ ವಂಚನೆಯ ವೃತ್ತಾಂತವೊಂದು ಇಲ್ಲಿದೆ. ಈ ಬಾರಿ ವಂಚಕರು ಬಳಸಿದ್ದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಸರು.
ತಾನು ಇವರಿಗೆ ಅತ್ಯಂತ ಆಪ್ತೆ. ಇಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದೇನೆ. ಇದನ್ನು ಬಳಸಿ, ಬ್ಯಾಂಕ್ ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಮಹಿಳೆಯೊಬ್ಬಳ ಗ್ಯಾಂಗ್ ಕೋಟ್ಯಂತರ ರೂ. ವಂಚಿಸಿರುವ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡಿರುವ ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಮತ್ತು ಗ್ಯಾಂಗ್ ಹಲವರನ್ನು ವಂಚಿಸಿದ್ದು, ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಟ್ರಸ್ಟ್ ಗೆ ಆರ್ಬಿಐನಿಂದ 17 ಕೋಟಿ ರೂ. ಬಂದಿರುವುದಾಗಿ ಹಾಗೂ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಸಹಿ ಇರುವ ನಕಲಿ ಕಾಪಿ ತೋರಿಸಿ ಚಂದಾಪುರ, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಜನರಿಗೆ ವಂಚಿಸಿದ್ದಾರೆ.
ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನು ಕಳುಹಿಸಿ ಜನರನ್ನು ಮರುಳು ಮಾಡಿದ ಪವಿತ್ರಾ, ಒಬ್ಬರಿಗೆ 10 ಲಕ್ಷ ರೂ. ಸಾಲ ನೀಡಿದರೆ, ಅದರಲ್ಲಿ ಐದು ಲಕ್ಷ ರೂ. ರಿಯಾಯಿತಿ ಎಂದು ನಂಬಿಸಿದ್ದಳು. ಸಾಲ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕೆಂದು ಕಥೆ ಕಟ್ಟಿದ್ದಾಳೆ. ಇದನ್ನು ನಂಬಿದ ಜನ ಲಕ್ಷಾಂತರ ರೂ. ಹಣ ನೀಡಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದಾರೆ.
ಆದರೆ, ಕೆಲವು ತಿಂಗಳಾದರೂ ಸಾಲ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಳಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಗ್ಯಾಂಗ್ ವಂಚನೆ ಸಂಬಂಧ ಸೂರ್ಯನಗರ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪವಿತ್ರ, ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.




