ಬೆಂಗಳೂರು: ಬಿಜೆಪಿಯವರು ಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಎಂದು ಹೇಳಲಿ. ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು ನಾಡಿನ ಪರವಾಗಿ ಸಂಸತ್ನ ಒಳಗೆ ದನಿ ಏರಿಸಿ ಮಾತನಾಡಲಿ. ರಾಜ್ಯ ಸರ್ಕಾರ ಅವರ ಬೆನ್ನಿಗಿದೆ ಭಯ ಬೇಡ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನ ಶಾಸಕರು ಫೆಬ್ರವರಿ 7ರಂದು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರೋಧಿಸಿ ಮಾಡಲಾಗುತ್ತಿರುವ ಹೋರಾಟವಾಗಿದೆ. ಇದಕ್ಕೆ ನಾಡಿನ ಎಲ್ಲ ಪ್ರಜ್ಞಾವಂತ ನಾಗರಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದಿಂದ ಹಲವಾರು ಕಾರಣಗಳಿಗಾಗಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮಗೆ 44 ಸಾವಿರ ಕೋಟಿ ನೀಡಿದರೆ ಉತ್ತರಪ್ರದೇಶಕ್ಕೆ 2.18 ಲಕ್ಷ ಕೋಟಿ, ಮಧ್ಯಪ್ರದೇಶ, ಬಿಹಾರಕ್ಕೆ 2 ಲಕ್ಷ ಕೋಟಿ ರೂ. ನೀಡಲಾಗಿದೆ. ಇದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.
ಬರ ಪೀಡಿತ ಪ್ರದೇಶಗಳಿಗೆ ನಾವು ಕೇಳಿದ್ದು ಬರೀ 18 ಸಾವಿರ ಕೋಟಿ ರೂಪಾಯಿ. ಅದನ್ನೂ ನೀಡುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ ಮಾನವ ದಿನಗಳ ಪ್ರಮಾಣವನ್ನು 100ರಿಂದ 150 ದಿನಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದೇವೆ. ನಾಲೈದು ಬಾರಿ ದೆಹಲಿಗೆ ಹೋಗಿ ಸಚಿವರ ಕಚೇರಿ ಬಾಗಿಲು ಕಾದಿದ್ದಾಗಿದೆ. ಯಾವುದೂ ಪ್ರಯೋಜನವಾಗಿಲ್ಲ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್ ವರೆಗೆ ಐಟಿ ರಫ್ತಿನಲ್ಲಿ ಬೆಂಗಳೂರಿನಿಂದ ಬಂದ ಆದಾಯ 3.29 ಲಕ್ಷ ಕೋಟಿ. ಇದರಲ್ಲಿ ಒಂದು ರೂಪಾಯಿ ಕೂಡ ರಾಜ್ಯಕ್ಕೆ ವಾಪಸ್ ಕೊಟ್ಟಿಲ್ಲ. ಜಲಜೀವನ್ ಮಿಷನ್ ಸೇರಿದಂತೆ ಕೇಂದ್ರದ ಎಲ್ಲ ಯೋಜನೆಗಳಲ್ಲೂ ರಾಜ್ಯದ್ದು ಶೇ.50ರಷ್ಟು ಪಾಲಿದೆ. ಆದರೂ ಮೋದಿ ಗ್ಯಾರಂಟಿ ಎಂದು ಬಿಂಬಿಸಿಕೊಳ್ಳುತ್ತಾರೆ. ಇವರ ಪ್ರಚಾರ ಮಾತ್ರ ಶೇ.100ರಷ್ಟು. ಪ್ರತಿ ಯೋಜನೆಯಲ್ಲೂ ಕನ್ನಡಿಗರ ಬೆವರಿದೆ ಎಂದರು.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮೋದಿಯವರ ಗಾರ್ಡನ್ನಲ್ಲಿ ಬೆಳೆಯುವುದಿಲ್ಲ. ಎಲ್ಲ ಭಾರತೀಯ ರೈತರು ಬೆಳೆಯುತ್ತಾರೆ. ಸಂಪನ್ಮೂಲಗಳು ಎಲ್ಲರಿಂದಲೂ ಕ್ರೂಢೀಕರಣವಾಗುತ್ತದೆ. ಅದೇ ರೀತಿ ಸಮಾನವಾಗಿ ಹಂಚಿಕೆಯೂ ಆಗಬೇಕು ಎಂದು ಕುಮಾರಸ್ವಾಮಿಯವರ ಟೀಕೆಗೆ ತಿರುಗೇಟು ನೀಡಿದರು.
ಬರ ಪರಿಹಾರಕ್ಕೆ ನೆರವು ಮತ್ತು ಬಜೆಟ್ ನಲ್ಲಿ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿಗೆ ಈ ಮೂಲಕ ತಿರುಗೇಟು ನೀಡಿದರು.




