ಟಿಪ್ಪುವಿನ ಕುರಿತು ಇಂದಿನ ಪ್ರಜಾವಾಣಿಯಲ್ಲೊಂದು ತಪ್ಪು ಮಾಹಿತಿ

2 years ago

ಟಿಪ್ಪುವಿನ ಕುರಿತು ಇಂದಿನ ಪ್ರಜಾವಾಣಿಯಲ್ಲೊಂದು ತಪ್ಪು ಮಾಹಿತಿ.

ಒಂದು ಜವಾಬ್ದಾರಿಯುತ ಪತ್ರಿಕೆ ವರದಿ ಮಾಡುವಾಗ ತಾನು ಪ್ರಕಟಿಸುವ ವರದಿಯನ್ನು ಕ್ರಾಸ್ ಚೆಕ್ ಮಾಡಬೇಕು. ಇತ್ತೀಚೆಗೆ ಪ್ರಜಾವಾಣಿ ದಿಕ್ಕು ತಪ್ಪಿದೆ.

ಪ್ರಜಾವಾಣಿ ಭಾನುವಾರದ ಪತ್ರಿಕೆಯಲ್ಲಿ ಪುಟ 3A ದಲ್ಲಿ ಕೆಳದಿ ಅರಸರ ಕಾಲದ ವ್ಯಾಪಾರಿ ಒಬ್ಬ ಕಟ್ಟಿಸಿರುವ ದೇವಾಲಯದ ಬಗ್ಗೆ ವರದಿ ಮಾಡಿದೆ. ಲೇಖಕ ರವಿ ನಾಗರಕೂಡಿಗೆ. ಇಲ್ಲಿ ‘ಪುನರ್ ನಿರ್ಮಾಣ’ ಎಂಬ ಪ್ರತ್ಯೇಕ ಹೈಲೈಟೆಡ್ ಕಾಲಮ್ ನಲ್ಲಿ ‘ಬಿದನೂರು ನಾಯಕರ ಸಂಸ್ಥಾನದ ಮೇಲೆ ದಂಡೆತ್ತಿ ಬಂದ ಟಿಪ್ಪು ಸುಲ್ತಾನನ ದಾಳಿಗೆ ನಗರ ಧ್ವಂಸವಾದ ಪರಿಣಾಮ ಉತ್ತುಂಗ ಸ್ಥಿತಿಯಲ್ಲಿದ್ದ ಭಕ್ತರ ಶ್ರದ್ಧಾ ಕೇಂದ್ರ ಉಮಾಪತಿ ದೇವಾಲಯವು ಹಂತಕರ ಸಂಚಿಗೆ ಹಾಳಾಯಿತು’ ಎಂದು ಬರೆದಿದೆ. ಈಗ ಪರಿಶೀಲಿಸೋಣ.

ಇತ್ತೀಚಿನ ನಿಖರ ಸಂಶೋಧನೆಯ ಮೂಲಕ ಟಿಪ್ಪು ಸುಲ್ತಾನ್ ಜನಿಸಿದ್ದು ಡಿಸೆಂಬರ್ 01, 1751ರಲ್ಲಿ ದೇವನಹಳ್ಳಿಯ ಕೋಟೆಯಲ್ಲಿ. ಹೈದರಾಲಿ ಬಿದನೂರಿನ ಮೇಲೆ ಆಕ್ರಮಣ ಮಾಡಿದ್ದು 1763 ರಲ್ಲಿ. ಜೊತೆಗೆ ಚಿತ್ರದುರ್ಗದ ಐದನೇ ಮದಕರಿ ನಾಯಕನ ಸೇನೆಯೂ ಇತ್ತು. ಬಿದನೂರಿನ ಮೇಲೆ ಈ ಆಕ್ರಮಣ ನಡೆದಾಗ ಟಿಪ್ಪುವಿನ ವಯಸ್ಸು ಕೇವಲ 12 ವರ್ಷ. ಹೈದರಾಲಿ ಬಿದನೂರಿನ ಮೇಲೆ ದಾಳಿ ಮಾಡಿದಾಗ ಟಿಪ್ಪು ಶ್ರೀರಂಗಪಟ್ಟಣದಲ್ಲಿ ಯಾವುದೋ ಆಟ ಆಡುತ್ತಿರಬೇಕು. ಗೋವರ್ಧನ ಪಂಡಿತನ ಪಾಠ ಕೇಳುತ್ತಿದ್ದನಿರಬೇಕು. ಆ ಚಿಕ್ಕ ಹುಡುಗ ಬಿದನೂರಿನ ಮೇಲೆ ದಾಳಿ ಮಾಡಿದ್ದ ಎನ್ನುವ ಸುಳ್ಳನ್ನು ಪರಿಶೀಲಿಸದೆ ಒಂದು ಪತ್ರಿಕೆ ಪ್ರಕಟಿಸುತ್ತದೆ ಎಂದರೆ ಯಾವ ಮಟ್ಟಿಗೆ ಇದರ ನೈತಿಕತೆ ಕುಸಿದಿರಬೇಕು? ಇದರ ಪ್ರಜ್ಞೆಗೆ ಯಾವ ಮಟ್ಟಿಗೆ ಲಕ್ವಾ ಹೊಡೆದಿರಬೇಕು?

ಮತ್ತೊಂದು ವಿಚಾರಕ್ಕೆ ಬರೋಣ. 1763ರ ಹೊತ್ತಿಗೆ ಟಿಪ್ಪುವಿನ ವಯಸ್ಸು ಕೇವಲ 12 ವರ್ಷ. ಆತ ಬಿದನೂರಿನ ಮೇಲೆ ದಾಳಿಗೆ ಬರುವುದಿರಲಿ ಅದು ಯಾವ ದಿಕ್ಕಿನಲ್ಲಿದೆ ಎಲ್ಲಿದೆ ಎಂಬುದೇ ಅವನಿಗೆ ತಿಳಿದಿರಲಿಲ್ಲ. ತಲೆಯಲ್ಲಿ ಮತೀಯವಾದಿ ಬುದ್ಧಿ ಮತ್ತು ಅಧ್ಯಯನವಿಲ್ಲದ, ಅವರಿವರು ಕಟ್ಟಿದ ಕಟ್ಟು ಕಥೆಗಳನ್ನೇ ಸತ್ಯವೆಂದು ಬರೆಯುವ ಲೇಖಕರು, ಅದನ್ನು ಪೂರ್ವಾಪರ ಯೋಚಿಸದೆ ಪರಿಶೀಲಿಸದೆ ಪ್ರಕಟಿಸುವ ಪತ್ರಿಕೆ, ಈ ಸಮಾಜಕ್ಕೆ ಒಳ್ಳೆಯದೇನನ್ನು ಕೊಡಲು ಸಾಧ್ಯ?

1763ರಲ್ಲಿ ಹೈದರ್ ಬಿದನೂರು ನಗರದ ಮೇಲೆ ನಡೆಸಿದ ದಾಳಿಯಿಂದ ಬಿದನೂರಿನಲ್ಲಿ ದೇವಾಲಯಗಳೇನೂ ಧ್ವಂಸವಾಗಲಿಲ್ಲ. ಅವನು ಬಿದನೂರನ್ನು ಗೆದ್ದ ಮೇಲೆ ಸುಮಾರು ಒಂದೂವರೆ ವರ್ಷ ಅಲ್ಲಿಯೇ ತಂಗಿದ್ದನೆಂದು ದಾಖಲೆಗಳು ಹೇಳುತ್ತವೆ. ಬಿದನೂರಿನ ಪ್ರಮುಖ ದೇವಾಲಯ ನೀಲಕಂಠೇಶ್ವರ ದೇವಾಲಯ. ಅದು ಈಗಲೂ ಸುಸ್ಥಿಯಲ್ಲಿದೆ. ಈಗಲೂ ನಿತ್ಯ ಪೂಜಾದಿ ಕರ್ಮಗಳು ನಡೆಯುತ್ತಿವೆ. ಆ ಪಟ್ಟಣದಲ್ಲಿ ತಂಗಿದ್ದ ಹೈದರ್ ಆ ದೇವಾಲಯವನ್ನೇನೂ ಮಾಡಲಿಲ್ಲ. ಹೈದರನ ಮರಣಾನಂತರ ರಾಜಕೀಯ ಮೇಲಾಟಕ್ಕೆ ಒಳಗಾದ ಬಿದನೂರು (ಹೈದರ್ ನಗರ) ಟಿಪ್ಪುವಿಗೂ ಹೈದರನ ಸಾಕು ಮಗ ಅಯಾಸ್ ಖಾನನಿಗೂ, ಟಿಪ್ಪುವಿಗೂ ಬ್ರಿಟಿಷರಿಗೂ, ಟಿಪ್ಪುವಿಗೂ ಮರಾಠರು ಮತ್ತು ಬ್ರಿಟಿಷರಿಗೂ ನಡೆದ ಸೆಣೆಸಾಟಗಳಲ್ಲಿ ಸಾಕಷ್ಟು ಪ್ರಕ್ಷುಬ್ಧವಾಗಿದ್ದರೂ ಕೋಟೆಯೇ ಕೇಂದ್ರವಾಗಿದ್ದಿತೊ ಹೊರತು ಅಲ್ಲಿನ ದೇವಾಲಯ ಚರ್ಚು ಮಸೀದಿಗಳಲ್ಲ.

ನಗರದ ಕೋಟೆಯಲ್ಲಿ‌ನ ಅರಮನೆಯನ್ನೂ ಹೈದರನ ವಶವಾಗಬಾರದೆಂದು ರಾಣಿ ವೀರಮ್ಮನೇ ಬೆಂಕಿ ಇಟ್ಟು ಸುಟ್ಟಳೆಂದು ದಾಖಲೆಗಳು ಹೇಳುತ್ತವೆ. ಚರಿತ್ರೆ ಹೀಗಿರುವಾಗ ಅದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಬಂದ ಸುದ್ದಿಯನ್ನು ಬಂದಹಾಗೆ ಪ್ರಕಟಿಸುವ ಪ್ರಜಾವಾಣಿಯ ನೈತಿಕತೆಯನ್ನು ನಾವು ಪ್ರಶ್ನಿಸಲೇಬೇಕಾಗುತ್ತದೆ. ಖಂಡಿಸಲೇ ಬೇಕಾಗುತ್ತದೆ. ಈ ಹಿಂದೆ ಸಹ ಒಬ್ಬರು ‘ಟಿಪ್ಪು ಆನಂದಪುರದ ಮೇಲೆ ದಾಳಿ ಮಾಡಿ ಅಲ್ಲಿನ ಮಹಿಳೆಯರನ್ನು ಸೈನಿಕರನ್ನು ಕೊಂದು ಗಾಣಿಗನ ಕೆರೆಗೆ ಎಸೆದಿದ್ದ’ ಎಂದು ಒಂದು ಪ್ರಕಾಂಡ ಸುಳ್ಳಿನ ಬರೆಹ ಹಂಚಿಕೊಂಡಿದ್ದರು. ಅದನ್ನು ದಾಖಲೆ ಸಮೇತ ನಾನು ಬರೆದ ಮೇಲೆ  ಜನಕ್ಕೆ ಸತ್ಯ ಗೊತ್ತಾಯಿತು.

ಪ್ರಜಾವಾಣಿ ನಾನು ದಿನ ನಿತ್ಯ ಓದುವ ಪತ್ರಿಕೆ. ನಾನು ಈಗಲೂ ಇಷ್ಟ ಪಡುವ ಗೌರವಿಸುವ ಪತ್ರಿಕೆ. ನಾಡಿನಲ್ಲಿ ಬಹು ದೊಡ್ಡ ಸಂಖ್ಯೆಯ ಪ್ರಜ್ಞಾವಂತರು ಇತಿಹಾಸ ಸಾಹಿತ್ಯ ಸಾಂಸ್ಕೃತಿಕ ವಲಯಗಳಲ್ಲಿ ಅಧ್ಯಯನ ನಡೆಸಿದ ಜನರು ಪ್ರಜಾವಾಣಿಯ ಓದುಗ ವಲಯದಲ್ಲಿ ಇದ್ದಾರೆ ಎಂಬ ಕಿಂಚಿತ್ ಎಚ್ಚರಿಕೆ ಆ ಪತ್ರಿಕೆಗೆ ಇರಬೇಕು.

– ಸುರೇಶ ಎನ್ ಶಿಕಾರಿಪುರ, ಚಿಂತಕರು

Leave a Reply