ಯಾವುದೇ ನಾಟಕೀಯ, ಸ್ಪಷ್ಟತೆ, ಗುರಿಯಿಲ್ಲದ ರಾಜಕೀಯ ಅರಂಗೇಟ್ರಂ

2 years ago

ಇದು ದಕ್ಷಿಣ ಭಾರತದಲ್ಲಿಯೆ ಬಹುಶಃ ಯಾವುದೇ ನಾಟಕೀಯ, ಸ್ಪಷ್ಟತೆ, ಗುರಿಯಿಲ್ಲದ ರಾಜಕೀಯ ಅರಂಗೇಟ್ರಂ. ಸ್ವಲ್ಪ ಹಿಂದಕ್ಕೆ ಹೋಗಿ ನೋಡುವುದಾದರೆ, ಎನ್ ಟಿಆರ್, ಎಂಜಿಆರ್ ಅವರ ರಾಜಕಾರಣದ ಪ್ರವೇಶಕ್ಕೆ ನಿರ್ದಿಷ್ಟ ಗುರಿಯಿತ್ತು, ಜನಪ್ರಿಯತೆ ಬೆನ್ನಿಗಿತ್ತು. ಮುಖ್ಯವಾಗಿ ಅವರ ರಾಜಕೀಯ ಭಾಷೆ ಸ್ಪಷ್ಟವಾಗಿತ್ತು. ಪಾರದರ್ಶಕವಾಗಿತ್ತು. ಇದರ ತಳಹದಿಯ ಮೇಲೆ ಪ್ರಭಾವಶಾಲಿಯಾಗಿ ತಮ್ಮ ಮತಕ್ಷೇತ್ರ ಕಟ್ಟಿಕೊಂಡರು.

ಜಯಲಲಿತಾ ಸಹಜವಾಗಿ ಎಂಜಿಆರ್ ಲೆಗಸಿ ಮುಂದುವರಿಸಿದರು. ಅದಕ್ಕೆ ಬೇಕಾದ ದಿಟ್ಟತೆ, ದಾರ್ಷ್ಟ್ಯ, ಭಂಡತನ ಮತ್ತು manipulation ಎಲ್ಲವೂ ಢಾಳಾಗಿತ್ತು. ವಿಜಯ್ ಕಾಂತ್ ರಾಜಕಾರಣವೂ ಸಹ ಮೇಲಿನ ಇಬ್ಬರು ಸೂಪರ್ ಸ್ಟಾರ್ ದಾರಿಯಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದರು. ಬಲು ದೂರ ಸಾಗಲು ಸಾಧ್ಯವಾಗಲಿಲ್ಲ. ಅದು ಬೇರೆಯದೆ ಪ್ರಶ್ನೆ.

ಆ ಕಾಲ ಬಿಡಿ ಅನ್ನಬಹುದು. ಈ ಕಾಲದಲ್ಲೂ ತನ್ನ ಎಲ್ಲಾ ಮಿತಿಗಳ ನಡುವೆ ಕಮಲ್ ಹಾಸನ್ ರ ರಾಜಕಾರಣದ ಪ್ರಯೋಗದಲ್ಲಿ ಸಿದ್ಧತೆ ಇಲ್ಲದಿದ್ದರೂ ಸ್ಪಷ್ಟತೆಯಿತ್ತು. ತನ್ನ ವಿರೋಧಿಯನ್ನು ಗುರುತಿಸಿದ್ದರು. ಇವರ ರಾಜಕೀಯ ಸೋಲು ಬೇರೆಯದೆ ಚರ್ಚೆ.

ಇವರನ್ನೂ ಬಿಡಿ. ಅಷ್ಟು, ಇಷ್ಟು ಸುದ್ದಿ ಮಾಡಿದ ರಜನೀಕಾಂತ್ ರವರ ರಾಜಕೀಯ ಗಿಮಿಕ್ ಗಳಲ್ಲಾದರೂ ಏನೋ ಕಾದು ನೋಡೋಣ ಎನ್ನುವ ನಿರೀಕ್ಷೆಯಿತ್ತು. ಅದು ಟೇಕ್ ಆಫ್ ಆಗದೆ ರಜನಿಯವರ ಮರ್ಯಾದೆ ಉಳಿಯಿತು.

ಆದರೆ ನಟ ವಿಜಯ್ ಅವರ ಈ ನಿರ್ಧಾರದ ಹಿಂದು, ಮುಂದು ಆಧರಿಸಿ ಹೇಳುವುದಾದರೆ ‘ಯಾತಕ್ಕಾಗಿ’ ಎನ್ನುವ ಪ್ರಾಥಮಿಕ ಕುತೂಹಲವೂ ಹುಟ್ಟಿಸದ ಸುದ್ದಿ ಎನ್ನಬಹುದು. ಆರಂಭದಲ್ಲಿಯೇ ನಗೆಪಾಟಲಿಗೆ ಈಡಾಗುವ ಎಲ್ಲಾ ಸಾಧ್ಯತೆಗಳಿವೆ. ಕನಿಷ್ಠ ನನ್ನ ಗುರಿ ಇದು, ನನ್ನ ಪ್ರಣಾಳಿಕೆ ಹೀಗಿದೆ ಎನ್ನುವ ಯಾವುದೇ ಲವಲೇಶವೂ ಇಲ್ಲ. ಮತ್ತು ವಿಜಯ್ ಸಿನಿಮಾ ಹೊರತುಪಡಿಸಿ ಸಾರ್ವಜನಿಕವಾಗಿ ಮಾತನಾಡಿದ್ದೂ, ಸಂದರ್ಶನಗಳನ್ನು ಕೊಟ್ಟಿದ್ದು ತುಂಬಾ ಕಡಿಮೆ.

ಮೈದಾನದಲ್ಲಿ ಆಟವಾಡಲು ಬಂದ ಮಕ್ಕಳಂತೆ ಕಾಣುತ್ತಾರೆ. ಸಂಜೆ ಕತ್ತಲಾದೊಡನೆ ಮನೆಗೆ ಹೋಗುವಂತೆ ಇವರ ಈ ಅರಂಗೇಟ್ರಂ… ಇಂತಹ ಗೊತ್ತು, ಗುರಿಯಿಲ್ಲದ ಪ್ರವೇಶಕ್ಕೆ ಕನಿಷ್ಠ maverick, eccentricity ಆದರೂ ಬೇಕು. ಅದೂ ಇಲ್ಲ. ಸದ್ಯಕ್ಕಂತೂ ಹೀಗೆಯೆ ಕಾಣುತ್ತದೆ..

  • ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು

Leave a Reply